ಮಂಗಳೂರು : ಫೆ. 28ರಂದು ಪ್ರಥಮ ಕರಾವಳಿ ಬ್ರೆವೆಟ್ ಸ್ಪರ್ಧೆ

ಮಂಗಳೂರು, ಫೆ. 25: ಕರಾವಳಿಯ ಸೈಕ್ಲಿಂಗ್ ಇತಿಹಾಸದಲ್ಲೇ ಮೊದಲ ಬಾರಿಗೆ ಸ್ಪರ್ಧಾತ್ಮಕ ಸೈಕ್ಲಿಂಗ್‌ಗೆ ಮಂಗಳೂರು ಸಾಕ್ಷಿಯಾಗಲಿದ್ದು, ಫೆ.28ರಂದು ಬ್ರೆವೆಟ್-200 ಸ್ಪರ್ಧೆ ಏರ್ಪಡಿಸಲಾಗಿದೆ.
ಮಂಗಳೂರು ಸೈಕ್ಲಿಂಗ್ ಕ್ಲಬ್ ವತಿಯಿಂದ ಈ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ. ನಿಗದಿತ ದೂರವನ್ನು ನಿಗದಿತ ಸಮಯದೊಳಗೆ ಸೈಕ್ಲಿಂಗ್ ಮಾಡುತ್ತಾ ಪೂರ್ಣಗೊಳಿಸುವುದು ಬ್ರೆವೆಟ್ ಸ್ಪರ್ಧೆಯ ವಿಧಾನ.
ಕರಾವಳಿ ಬ್ರೆವೆಟ್ ಮಂಗಳೂರು ಸೈಕ್ಲಿಂಗ್ ಕ್ಲಬ್‌ನವರು 2016ರಲ್ಲಿ ವರ್ಷದುದ್ದಕ್ಕೂ ಬ್ರೆವೆಟ್ ಏರ್ಪಡಿಸಿದ್ದು ಮೊದಲ ಕರಾವಳಿ ಬ್ರೆವೆಟ್ ಫೆ.28ರಂದು ನಡೆಯಲಿದೆ. ಏಪ್ರಿಲ್ 24ರಂದು ಘಾಟ್‌ಕ್ಲಾಸಿಕ್(200 ಕಿ.ಮೀ), ಮೇ 22ಕ್ಕೆ ನೇತ್ರಾವತಿ ಬ್ರೆವಟ್(200 ಕಿ.ಮೀ). ಜುಲೈ 10ಕ್ಕೆ ಮಾನ್ಸೂನ್ ಬ್ರೆವೆಟ್(200 ಕಿ.ಮೀ), ವೆಸ್ಟರ್ನ್‌ಘಾಟ್ ಲೂಪ್ ಬ್ರೆವೆಟ್(200 ಕಿ.ಮೀ) ಮತ್ತು ಅಕ್ಟೋಬರ್ 22ಕ್ಕೆ ನಮ್ಮ ಕುಡ್ಲ ಬ್ರೆವೆಟ್(300 ಕಿ.ಮೀ) ಏರ್ಪಡಿಸಲಾಗಿದೆ.
ಸಾಮಾನ್ಯವಾಗಿ 200 ಕಿ.ಮೀ(13.5 ಗಂಟೆಯೊಳಗೆ ಪೂರ್ಣಗೊಳಿಸಬೇಕು), 300 ಕಿ.ಮೀ(20 ಗಂಟೆ), 400 ಕಿ.ಮೀ(27 ಗಂಟೆ), 600 ಕಿ.ಮೀ(40 ಗಂಟೆ).
ಈ ಬ್ರೆವೆಟ್ ಸ್ಪರ್ಧೆಗಳನ್ನು ವಿಶ್ವದೆಲ್ಲೆಡೆ ನಡೆಸಲಾಗುತ್ತಿದ್ದು, ಇದನ್ನು ಆಡಾಕ್ಸ್ ಕ್ಲಬ್ ಪ್ಯಾರಿಸಿನ್ ಎಂಬ ವಿಶ್ವ ಮಟ್ಟದ ಸಂಘಟನೆ ನಿಯಂತ್ರಿಸುತ್ತದೆ. ಈ ಸಂಘಟನೆಯ ನಿಯಮಾವಳಿಯನ್ವಯ ಬ್ರೆವೆಟ್ ಹಮ್ಮಿಕೊಳ್ಳಲಾಗುತ್ತದೆ. ಒಂದು ಬ್ರೆವೆಟ್ ಸ್ಪರ್ಧೆಯನ್ನು ನಿಗದಿತ ಸಮಯದೊಳಗೆ ಪೂರ್ಣಗೊಳಿಸುವ ಸೈಕ್ಲಿಸ್ಟ್ ರ್ಯಾಂಡೊನೀಯರ್ ಎನ್ನಿಸಿಕೊಳ್ಳುತ್ತಾನೆ. ಒಂದು ವರ್ಷದಲ್ಲಿ ಎಲ್ಲಾ 200ರಿಂದ 1000 ಕಿ.ಮೀ ವರೆಗಿನ ಬ್ರೆವಟ್ ಪೂರ್ತಿಗೊಳಿಸುವವರಿಗೆ ಸೂಪರ್ ರ್ಯಾಂಡನೀಯರ್ ಎಂಬ ಬಿರುದು ಸಿಗಲಿದೆ.
ಕರಾವಳಿ ಬ್ರವೆಟ್‌ಗೆ ಭಾಗವಹಿಸುವವರು ಕೂಡಲೇ ಆಡಾಕ್ಸ್ ಇಂಡಿಯಾದ ವೆಬ್‌ಸೈಟ್‌ನಲ್ಲಿ ನೋಂದಾಯಿಸಿಕೊಳ್ಳಬಹುದು. ಇದು ಮೂರು ದಿನಗಳ ಪ್ರಕ್ರಿಯೆ. ವೆಬ್‌ಸೈಟ್; www.audaxindia.org/event-e-860





