ರೈಲ್ವೆ ಬಜೆಟ್ ರಾಜ್ಯದ ಮಟ್ಟಿಗೆ ಅತ್ಯಂತ ನಿರಾಶಾದಾಯಕ : ಮುಖ್ಯಮಂತ್ರಿ ಸಿದ್ದರಾಮಯ್ಯ

ಬೆಂಗಳೂರು.ಫೆ.25: ರೈಲ್ವೆ ಬಜೆಟ್ ರಾಜ್ಯದ ಮಟ್ಟಿಗೆ ಅತ್ಯಂತ ನಿರಾಶಾದಾಯಕವಾಗಿದ್ದು, ಬೆಂಗಳೂರು ಉಪನಗರ ರೈಲು ಮಾರ್ಗ ಆರಂಭಿಸುವ ಘೋಷಣೆ ಹೊರತುಪಡಿಸಿದರೆ ಬೇರೆ ಯಾವುದೇ ಕೊಡುಗೆ ನೀಡಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದಿಲ್ಲಿ ಹೇಳಿದ್ದಾರೆ.
ರೈಲ್ವೆ ಬಜೆಟ್ ಕುರಿತು ಸುದ್ದಿಗೋಷ್ಠಿಯಲ್ಲಿ ಪ್ರತಿಕ್ರಯಿಸಿದ ಅವರು, ರಾಜ್ಯ ಸರ್ಕಾರ ಕೇಂದ್ರಕ್ಕೆ ಹಲವಾರು ಪ್ರಸ್ತಾವನೆಗಳನ್ನು ಸಲ್ಲಿಸಿದ್ದರೂ ಸಹ ಕೇಂದ್ರ ಯಾವುದನ್ನೂ ಪರಿಗಣನೆಗೆ ತೆಗೆದುಕೊಂಡಿಲ್ಲ. ರಾಜ್ಯವನ್ನು ಕೇಂದ್ರದಲ್ಲಿ ಪ್ರತಿನಿಧಿಸುವ ನಾಲ್ವರು ಸಚಿವರಿದ್ದರೂ ರಾಜ್ಯಕ್ಕೆ ಅನ್ಯಾಯವಾಗಿದೆ. ಇದನ್ನು ಪ್ರತಿಭಟಿಸಿ ರೈಲ್ವೆ ಸಚಿವ ಸುರೇಶ್ ಪ್ರಭು ಅವರಿಗೆ ಪತ್ರ ಬರೆಯುವುದಾಗಿ ಸ್ಪಷ್ಟಪಡಿಸಿದರು.
ಬೆಂಗಳೂರು ಮೈಸೂರು ನಡುವೆ ವೇಗದ ರೈಲು ಸಂಚಾರ ಮತ್ತು ಜೋಡಿ ಮಾರ್ಗದ ಬಗ್ಗೆ ಪ್ರಸ್ತಾಪವಿಲ್ಲ. ಬೆಂಗಳೂರು ತಿರುಪತಿ ನಡುವೆ ಹೊಸ ರೈಲ ಸಂಚಾರ, ಬಂಗಾರಪೇಟೆ ಮುಳಬಾಗಿಲು ರೈಲನ್ನು ಚಿತ್ತೂರಿನವರೆಗೆ ವಿಸ್ತರಣೆ, ಬೆಳಗಾವಿ - ಧಾರವಾಢ, ಕೆ.ಜಿ.ಎಫ್ - ಬೆಂಗಳೂರು, ಗದಗ - ಹರಪನಹಳ್ಳಿ, ಹೊಸಪೇಟೆ - ಸಾಣೆ ಹಳ್ಳಿ ಸೇರಿದಂತೆ ರಾಜ್ಯ ಸರ್ಕಾರ ಸಲ್ಲಿಸಿದ್ದ ಪ್ರಸ್ತಾವನೆಗಳಿಗೆ ಕಿಮ್ಮತ್ತು ದೊರೆತಿಲ್ಲ ಎಂದರು.
ನೆರೆ ರಾಜ್ಯಗಳಿಗೆ ಹೋಲಿಸಿದರೆ ರಾಜ್ಯದ ರೈಲು ಮಾರ್ಗ ಅತ್ಯಂತ ಕಡಿಮೆಯಿದೆ. ತಮಿಳುನಾಡು, ಆಂಧ್ರ ಪ್ರದೇಶದಲ್ಲಿ ಉತ್ತರ ರೈಲು ಸೇವೆ ಇದೆ. ರೈಲ್ವೆ ಯೋಜನೆಗಳ ಜಾರಿಗೆ ರಾಜ್ಯ ಸರ್ಕಾರ ಕೂಡ ನೆರವು ನೀಡಲಿದೆ ಎಂದು ಹೇಳಿದ್ದರೂ ಸಹ ಅದನ್ನು ಪರಿಗಣೆಗೆ ತೆಗೆದುಕೊಂಡಿಲ್ಲ. ರಾಜ್ಯ ಸರ್ಕಾರ ತನ್ನ ಬೊಕ್ಕಸದಿಂದ ಈವರಗೆ ಹತ್ತು ಸಾವಿರ ಕೋಟಿ ರೂಪಾಯಿ ನೆರವು ನೀಡಿದೆ. ಇಷ್ಟಾದರೂ ರಾಜ್ಯವನ್ನು ಪರಿಗಣಿಸದಿರುವುದು ದುರದೃಷ್ಟಕರ ಎಂದು ಸಿದ್ದರಾಮಯ್ಯ ಹೇಳಿದರು.







