ಭಾರತೀಯ ರೈಲುಗಳ ಕುರಿತಂತೆ 10 ಕುತೂಹಲಕಾರಿ ವಿಷಯಗಳು

ಹೊಸದಿಲ್ಲಿ,ಫೆ.25: ವಿಶ್ವದ ನಾಲ್ಕನೆಯ ಅತ್ಯಂತ ದೊಡ್ಡ ರೈಲು ಜಾಲವಾಗಿರುವ ಭಾರತೀಯ ರೈಲ್ವೆಯು ದಿನಂಪ್ರತಿ ಅದನ್ನು ಬಳಸುವ 13 ಮಿಲಿಯ ಪ್ರಯಾಣಿಕರ ಜೀವನಾಡಿಯಾಗಿದೆ. ಇಲ್ಲಿವೆ ರೈಲ್ವೆಯ ಬಗ್ಗೆ ನೀವು ತಿಳಿದಿರಲೇಬೇಕಾದ ಹತ್ತು ಮುಖ್ಯ ವಿಷಯಗಳು.
*60,000 ಕಿ.ಮೀ.ಉದ್ದಕ್ಕೆ ಹರಡಿರುವ ಹಳಿಗಳ ಮೇಲೆ ಪ್ರತಿ ದಿನ ಸಂಚರಿಸುವ ರೈಲುಗಳ ಸಂಖ್ಯೆ 11,000
* ವಿಶ್ವದಲ್ಲಿ ಏಳನೇ ಅತಿ ದೊಡ್ಡ ಉದ್ಯೋಗದಾತನಾಗಿರುವ ರೈಲ್ವೆಯಲ್ಲಿನ ಸಿಬ್ಬಂದಿಗಳ ಸಂಖ್ಯೆ ಸುಮಾರು 1.54 ಮಿಲಿಯನ್
* ವಿವೇಕ್ ಎಕ್ಸ್‌ಪ್ರೆಸ್ ಅತಿ ದೂರ ಚಲಿಸುವ ರೈಲು. ದಿಬ್ರುಗಡದಿಂದ ಕನ್ಯಾಕುಮಾರಿವರೆಗಿನ 4,286 ಕಿ.ಮೀ.ದೂರವನ್ನು 82.30 ಗಂಟೆಗಳಲ್ಲಿ ಕ್ರಮಿಸುವ ಅದು 56 ನಿಲುಗಡೆಗಳನ್ನು ಹೊಂದಿದೆ. ಅಂದ ಹಾಗೆ ನಾಗಪುರ ಮತ್ತು ಅಜ್ನಿ ನಡುವಿನ ರೈಲು ಕ್ರಮಿಸುವ ದೂರ ಮೂರು ಕಿ.ಮೀ.ಮಾತ್ರ!
* ತ್ರಿವೇಂದ್ರಂ-ನಿಜಾಮುದ್ದೀನ್ ರಾಜಧಾನಿ ಎಕ್ಸ್‌ಪ್ರೆಸ್ ವಡೋದರಾ ಮತ್ತು ಕೋಟಾ ನಡುವಿನ 528 ಕಿ.ಮೀ.ಅಂತರವನ್ನು 6.5 ಗಂಟೆಗಳಲ್ಲಿ ಕ್ರಮಿಸುತ್ತದೆ ಮತ್ತು ಈ ಹಂತದಲ್ಲಿ ಅದು ಎಲ್ಲಿಯೂ ನಿಲ್ಲುವುದಿಲ್ಲ. ಇದು ಭಾರತದ ಅತ್ಯಂತ ಸುದೀರ್ಘ‘‘ನಾನ್ ಸ್ಟಾಪ್’’ರೈಲು ಆಗಿದ್ದರೆ ಹೌರಾ-ಅಮೃತಸರ ಎಕ್ಸ್‌ಪ್ರೆಸ್ ರೈಲು ಅತ್ಯಂತ ಹೆಚ್ಚಿನ...115 ನಿಲುಗಡೆಗಳನ್ನು ಹೊಂದಿದೆ.
* ಹೊಸದಿಲ್ಲಿ-ಭೋಪಾಲ ಶತಾಬ್ದಿ ಎಕ್ಸ್‌ಪ್ರೆಸ್ ಪ್ರತಿ ಘಂಟೆಗೆ ಗರಿಷ್ಠ 150ಕಿ.ಮೀ.ವೇಗದಲ್ಲಿ ಸಂಚರಿಸುವ ಮೂಲಕ ಭಾರತದ ಅತ್ಯಂತ ವೇಗದ ರೈಲು ಎಂಬ ಖ್ಯಾತಿಗೆ ಪಾತ್ರವಾಗಿದ್ದರೆ,ಗಂಟೆಗೆ ಸರಾಸರಿ 10 ಕಿ.ಮೀ.ವೇಗದಲ್ಲಿ ಸಂಚರಿಸುವ ನೀಲಗಿರಿ ಎಕ್ಸ್‌ಪ್ರೆಸ್ ದೇಶದ ಅತ್ಯಂತ ನಿಧಾದ ರೈಲು ಆಗಿದೆ.
* 65 ಗಂಟೆ 5 ನಿಮಿಷಗಳ ನಿಗದಿತ ಸಮಯದಲ್ಲಿ ತನ್ನ ಗಮ್ಯವನ್ನು ಸೇರಬೇಕಾದ ಗುವಾಹಟಿ-ತ್ರಿವೇಂದ್ರಂ ಎಕ್ಸ್‌ಪ್ರೆಸ್ ಪ್ರತಿ ಪ್ರಯಾಣದಲ್ಲಿಯೂ 10-12 ಗಂಟೆ ವಿಳಂಬವಾಗುವುದು ಸಾಮಾನ್ಯವಾಗಿಬಿಟ್ಟಿದೆ.
* ಚೆನ್ನೈ ಸಮೀಪ ಅರಕ್ಕೋಣಂ-ರೇಣಿಗುಂಟಾ ವಿಭಾಗದಲ್ಲಿರುವ ವೆಂಕಟನರಸಿಂಹರಾಜುವಾರಿಪೇಟಾ ಅತ್ಯಂತ ಉದ್ದ ಹೆಸರಿನ ನಿಲ್ದಾಣವಾಗಿದ್ದರೆ, ಒಡಿಶಾದ ಜರ್ಸುಗುಡಾ ಬಳಿಯ ಇಬ್ ಮತ್ತು ಗುಜರಾತ್‌ನ ಆನಂದ ಬಳಿಯ ಉದ್(ಇಂಗ್ಲೀಷ್‌ನಲ್ಲಿ ತಲಾ ಎರಡು ಅಕ್ಷರಗಳು) ಅತ್ಯಂತ ಚಿಕ್ಕ ಹೆಸರಿನ ನಿಲ್ದಾಣಗಳಾಗಿವೆ.
* ನವಪುರ ರೈಲ್ವೆ ನಿಲ್ದಾಣದ ಅರ್ಧ ಭಾಗ ಮಹಾರಾಷ್ಟ್ರದಲ್ಲಿದ್ದರೆ ಇನ್ನರ್ಧ ಭಾಗ ಗುಜರಾತ್‌ನಲ್ಲಿದೆ.
* ಶ್ರೀರಾಮಪುರ ಮತ್ತು ಬೇಲಾಪುರ ಇವೆರಡೂ ಮಹಾರಾಷ್ಟ್ರದ ಅಹ್ಮದ್‌ನಗರ ಜಿಲ್ಲೆಯಲ್ಲಿರುವ ಬೇರೆ ಬೇರೆ ನಿಲ್ದಾಣಗಳು, ಆದರೆ ಇವುಗಳಿರುವುದು ಒಂದೇ ಹಳಿಯ ವಿರುದ್ಧ ದಿಕ್ಕುಗಳಲ್ಲಿ.
* 1981,ಜೂನ್ 6ರಂದು ಪ್ರಯಾಣಿಕರ ರೈಲೊಂದು ಬಾಗಮತಿ ನದಿಗೆ ಬಿದ್ದು 800 ಪ್ರಯಾಣಿಕರು ಜಲಸಮಾಧಿಯಾಗಿದ್ದರು. ಇದು ಭಾರತದಲ್ಲಿ ಸಂಭವಿಸಿರುವ ಅತ್ಯಂತ ಹೆಚ್ಚಿನ ಸಂಖ್ಯೆಯ ಪ್ರಯಾಣಿಕರನ್ನು ಬಲಿ ಪಡೆದಿರುವ ರೈಲ್ವೆ ಅಪಘಾತವಾಗಿದೆ.







