ಪಾಕಿಸ್ತಾನದ ಹಂಗಾಮಿ ಬೌಲಿಂಗ್ ಕೋಚ್ ಆಗಿ ಅಝರ್ ಆಯ್ಕೆ

ಕರಾಚಿ, ಫೆ.25: ಈಗ ನಡೆಯುತ್ತಿರುವ ಏಷ್ಯಾಕಪ್ ಹಾಗೂ ಮುಂಬರುವ ಟ್ವೆಂಟಿ-20 ವಿಶ್ವಕಪ್‌ಗೆ ಮಾಜಿ ಆಲ್‌ರೌಂಡರ್ ಅಝರ್ ಮಹಮೂದ್ ಪಾಕಿಸ್ತಾನ ಕ್ರಿಕೆಟ್ ತಂಡದ ಹಂಗಾಮಿ ಬೌಲಿಂಗ್ ಕೋಚ್ ಆಗಿ ನೇಮಕಗೊಂಡಿದ್ದಾರೆ.
‘‘ಅಝರ್ ಗುರುವಾರ ಸಂಜೆ ಢಾಕಾದಲ್ಲಿ ಪಾಕ್ ತಂಡವನ್ನು ಸೇರಿಕೊಳ್ಳುವ ನಿರೀಕ್ಷೆಯಿದೆ. ಅಝರ್ ಮಾಜಿ ಲೆಗ್ ಸ್ಪಿನ್ನರ್ ಮುಶ್ತಾಕ್ ಅಹ್ಮದ್ ಅವರ ಬದಲಿಗೆ ಎರಡು ಟೂರ್ನಿಗೆ ಮಾತ್ರ ಬೌಲಿಂಗ್ ಕೋಚ್ ಆಗಿ ಆಯ್ಕೆಯಾಗಿದ್ದಾರೆ. ಅಹ್ಮದ್ ವಿಶ್ರಾಂತಿ ಪಡೆದಿದ್ದು, ಈ ವರ್ಷದ ಜೂನ್‌ನಲ್ಲಿ ಇಂಗ್ಲೆಂಡ್ ಪ್ರವಾಸಕ್ಕೆ ಮೊದಲು ಕೋಚ್ ಹುದ್ದೆಗೆ ವಾಪಸಾಗುವ ನಿರೀಕ್ಷೆಯಿದೆ’’ ಎಂದು ಪಾಕ್ ತಂಡದ ಮ್ಯಾನೇಜರ್ ಮೊಯೀನ್ ಖಾನ್ ತಿಳಿಸಿದ್ದಾರೆ.
2007ರಲ್ಲಿ ಕೊನೆಯ ಬಾರಿ ಅಂತಾರಾಷ್ಟ್ರೀಯ ಪಂದ್ಯವನ್ನು ಆಡಿರುವ 40ರ ಹರೆಯದ ಅಝರ್ ದೇಶೀಯ ಕ್ರಿಕೆಟ್‌ನಲ್ಲಿ ಸಕ್ರಿಯರಾಗಿದ್ದಾರೆ. ಪಾಕಿಸ್ತಾನ, ಭಾರತ, ಇಂಗ್ಲೆಂಡ್, ಬಾಂಗ್ಲಾದೇಶ, ವೆಸ್ಟ್‌ಇಂಡೀಸ್ ಹಾಗೂ ನ್ಯೂಝಿಲೆಂಡ್ ಸಹಿತ ವಿವಿಧ ಕ್ಲಬ್ ಹಾಗೂ ಫ್ರಾಂಚೈಸಿಗಳಲ್ಲಿ 225 ಟ್ವೆಂಟಿ-20 ಕ್ರಿಕೆಟ್ ಪಂದ್ಯಗಳನ್ನು ಆಡಿದ್ದಾರೆ. ಯುಎಇ ಹಾಗೂ ಇಂಗ್ಲೆಂಡ್ ಕ್ಲಬ್‌ಗಳಲ್ಲಿ ಹಂಗಾಮಿ ಕೋಚ್ ಆಗಿಯೂ ಸೇವೆ ಸಲ್ಲಿಸಿದ್ದರು.





