ಮಂಗಳೂರು:ಸಂವಿಧಾನದ ಹಕ್ಕುಗಳನ್ನು ರಕ್ಷಿಸಬೇಕೆಂದು ಒತ್ತಾಯಿಸಿ ಸಿಪಿಐ ಮತ್ತು ಸಿಪಿಎಂ ಪಕ್ಷಗಳ ಕಾರ್ಯಕರ್ತರ ಪ್ರತಿಭಟನೆ
ಮಂಗಳೂರು,ಫೆ.25: ಸಂವಿಧಾನದ ಹಕ್ಕುಗಳನ್ನು ರಕ್ಷಿಸಬೇಕೆಂದು ಒತ್ತಾಯಿಸಿ ಇಮದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳ ಕಚೇರಿಯೆದುರು ಸಿಪಿಐ ಮತ್ತು ಸಿಪಿಎಂ ಪಕ್ಷಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಪ್ರತಿಭಟನ ಸಭೆಯನ್ನುದ್ದೇಶಿಸಿ ಮಾತನಾಡಿದ ಸಿಪಿಎಂ ಜಿಲ್ಲಾ ಕಾರ್ಯದರ್ಶಿ ವಸಂತ ಆಚಾರಿ ಏಕಸಂಸ್ಕೃತಿ, ಏಕಭಾಷೆ , ಏಕಧರ್ಮವನ್ನು ಹೇರಿ ದೇಶವನ್ನು ಹಿಂದೂರಾಷ್ಟ್ರ ಮಾಡಲು ಪ್ರಯತ್ನಿಸುತ್ತಿದೆ.ಮಹಾತ್ಮಗಾಂಧಿಯನ್ನು ಕೊಂದ ಸಿದ್ದಾಂತದವರು, ಸ್ವಾತಂತ್ರ ಹೋರಾಟದಲ್ಲಿ ಪಾಲ್ಗೊಳ್ಳದ ಆರ್ ಎಸ್ ಎಸ್ ರಾಷ್ಟ್ರೀಯತೆಯ ಪಾಠವನ್ನು ಹೇಳುತ್ತಿದೆ ಎಂದು ಹೇಳಿದರು.
ರಾಜಕಾರಣಿಗಳ ಯುದ್ದದಾಹಕ್ಕೆ ನಮ್ಮ ದೇಶದ ಸೈನಿಕರು ಬಲಿಯಾಗುತ್ತಿದ್ದಾರೆ. ಸೈನಿಕರ ಬಲಿದಾನವನ್ನು ರಾಜಕಾರಣಕ್ಕೆ ಬಳಸುತ್ತಿದ್ದಾರೆ. ಆರ್ ಎಸ್ ಎಸ್ ಎಂಬುದು ರಾಷ್ಟ್ರೀಯ ಸ್ವಯಂಸೇವಕ ಸಂಘ ಅಲ್ಲ. ಅದು ರಾಷ್ಟ್ರೀಯ ಸರ್ವನಾಶಕ ಸಂಘ ಎಂದು ಟೀಕಿಸಿದರು. ಪ್ರತಿಭಟನ ಸಭೆಯನ್ನುದ್ದೇಶಿಸಿ ಮಾತನಾಡಿದ ಸಿಪಿಐ ಮುಖಂಡ ಸುರೇಶ್‌ಕುಮಾರ್ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಸರಕಾರ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ಉನ್ನತಶಿಕ್ಷಣದಲ್ಲಿ ಹಸ್ತಕ್ಷೇಪ ನಡೆಸಲು ಪ್ರಯತ್ನಿಸುತ್ತಿದೆ. ಪ್ರಗತಿಪರ ಚಳವಳಿ ನಡೆಸುವವರನ್ನು, ದಲಿತ , ಎಡ ಸಂಘಟನೆಗಳ ಕಾರ್ಯಕರ್ತರನ್ನು ಬೆದರಿಸುವ ತಂತ್ರ ಮಾಡುತ್ತಿದೆ ಎಂದು ಹೇಳಿದರು.
ಪ್ರತಿಭಟನೆಯಲ್ಲಿ ಸಿಪಿಎಂ ಮುಖಂಡರುಗಳಾದ ಬಾಲಕೃಷ್ಣ ಶೆಟ್ಟಿ, ಯಾದವ ಶೆಟ್ಟಿ, ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ, ಜಿಲ್ಲಾಧ್ಯಕ್ಷ ಸಂತೋಷ್ ಬಜಾಲ್ , ಸಿಪಿಐ ಮುಖಂಡರುಗಳಾದ ಶಿವಪ್ಪ ಕೋಟ್ಯಾನ್, ಪ್ರಭಾಕರ್ ರಾವ್, ಆರ್ .ಡಿ.ಸೋನ್ಸ್ ಮೊದಲಾದವರು ಉಪಸ್ಥಿತರಿದ್ದರು.







