ಜಾನ್ಸನ್ ಆ್ಯಂಡ್ ಜಾನ್ಸನ್‌ಗೆ ಸಂಕಷ್ಟ: 72 ದಶಲಕ್ಷ ಡಾಲರ್ ದಂಡ

ವಾಷಿಂಗ್ಟನ್: ಜಾನ್ಸನ್ ಆ್ಯಂಡ್ ಜಾನ್ಸನ್ ಪೌಡರ್ ಹಾಗೂ ಟಾಲ್ಕಂ ಒಳಗೊಂಡ ಇತರ ಉತ್ಪನ್ನಗಳನ್ನು ಬಳಸಿದ್ದರಿಂದ ಮಹಿಳೆಯೊಬ್ಬರು ಅಂಡಾಶಯ ಕ್ಯಾನ್ಸರ್‌ಗೆ ತುತ್ತಾಗಿರುವುದಾಗಿ ವಾದಿಸಿದ್ದ ಮಹಿಳೆಯ ಕುಟುಂಬದ ವಾದವನ್ನು ಎತ್ತಿಹಿಡಿದ ಮಿಸ್ಸೌತಿ ನ್ಯಾಯಾಲಯ ಜಾನ್ಸನ್ ಆ್ಯಂಡ್ ಜಾನ್ಸನ್ ಕಂಪೆನಿಗೆ 72 ದಶಲಕ್ಷ ಡಾಲರ್ (494 ಕೋಟಿ ರೂಪಾಯಿ) ದಂಡ ವಿಧಿಸಿದೆ. ಲಬಾಮಾದ ಜಾಕಿ ಫಾಕ್ಸ್ ಎಂಬವರು ಸಲ್ಲಿಸಿದ್ದ ಸಿವಿಲ್ ಅರ್ಜಿಯ ಬಗ್ಗೆ 60 ಮಂದಿಯನ್ನೊಳಗೊಂಡ ಸೈಂಟ್ ಲೂಯಿಸ್ ಸಂಚಾರಿ ನ್ಯಾಯಪೀಠ ವಿಚಾರಣೆ ನಡೆಸಿ ಅರ್ಜಿದಾರರ ಪರವಾಗಿ ತೀರ್ಪು ನೀಡಿತು. 2015ರಲ್ಲಿ 62ನೆ ವಯಸ್ಸಿನಲ್ಲಿ ತನ್ನ ತಾಯಿ ಮೃತಪಟ್ಟ ಹಿನ್ನೆಲೆಯಲ್ಲಿ ಆಕೆಯ ಮಗ ಅರ್ಜಿ ಸಲ್ಲಿಸಿದ್ದರು. ಬ್ರಾಂಡ್‌ನ ಟಾಲ್ಕಂಗಳನ್ನು ತಾಯಿ ಸ್ನಾನಗೃಹದಲ್ಲಿ ಪ್ರಧಾನವಾಗಿ ಬಳಸುತ್ತಿದ್ದರು ಎಂದು ಅರ್ಜಿದಾರರು ಹೇಳಿದ್ದರು. ಅರ್ಜಿದಾರರ ಪರ ವಕೀಲರ ಪ್ರಕಾರ, ಇಷ್ಟೊಂದು ಪ್ರಮಾಣದ ದಂಡ ವಿಧಿಸಿರುವ ವಿರಳಾತಿವಿರಳ ಪ್ರಕರಣ ಇದಾಗಿದೆ. ಅರ್ಜಿದಾರರಿಗೆ 10 ದಶಲಕ್ಷ ಡಾಲರ್ ವಾಸ್ತವ ಪರಿಹಾರ ಹಾಗೂ 62 ಲಕ್ಷ ಡಾಲರ್ ಶಿಕ್ಷಾರ್ಥ ದಂಡ ನೀಡಬೇಕು ಎಂದು ನ್ಯಾಯಾಲಯ ಸೂಚಿಸಿದೆ. ಇದರ ವಿರುದ್ಧ ಕಂಪೆನಿ ಮೇಲ್ಮನವಿ ಸಲ್ಲಿಸುವ ಸಾಧ್ಯತೆ ಇದೆ. ಕಂಪೆನಿಯ ಉತ್ಪನ್ನಗಳು ದಶಕಗಳಿಂದ ವೈಜ್ಞಾನಿಕವಾಗಿ ಸುರಕ್ಷಿತ ಎಂದು ನಿರೂಪಿತವಾಗಿದ್ದು, ಅಮೆರಿಕದ ಫುಡ್ ಆ್ಯಂಡ್ ಡ್ರಗ್ ಅಡ್ಮಿನಿಸ್ಟ್ರೇಷನ್ ಹಾಗೂ ನ್ಯಾಶನಲ್ ಕ್ಯಾನ್ಸರ್ ಇನ್‌ಸ್ಟಿಟ್ಯೂಟ್ ಕೂಡಾ ಇದಕ್ಕೆ ಪೂರಕ ವರದಿ ನೀಡಿದೆ. ತೀರ್ಪು ಇವೆಲ್ಲಕ್ಕೂ ವಿರುದ್ಧವಾಗಿದೆ ಎಂದು ಕಂಪೆನಿ ವಕ್ತಾರರು ಹೇಳಿದ್ದಾರೆ.





