ಐಸಿಸ್ ಬಾಂಬ್ ಸರಬರಾಜು ಜಾಲ: 20 ದೇಶಗಳಲ್ಲಿ ಘಟಕ
.jpg)
ಅಂಕಾರಾ,ಫೆ.25: ಐಸಿಸ್ ಉಗ್ರ ಸಂಘಟನೆಯ ಬಾಂಬ್ ಸರಬರಾಜು ಜಾಲದಲ್ಲಿ 20 ದೇಶಗಳ ಬಾಂಬ್ ತಯಾರಿಕಾ ಘಟಕಗಳು ಸೇರಿವೆ ಎಂಬ ಆತಂಕಕಾರಿ ಅಂಶ ಹೊರಬಿದ್ದಿದೆ. ಗುರುವಾರ ಬಿಡುಗಡೆ ಮಾಡಿದ ಅಧ್ಯಯನ ವರದಿಯೊಂದು ಇದನ್ನು ಸ್ಪಷ್ಟಪಡಿಸಿದೆ. ಇಂಥ ಘಟಕಗಳಿಗೆ ಕೇಬಲ್‌ಗಳು, ರಾಸಾಯನಿಕಗಳು ಹಾಗೂ ಇತರ ಪರಿಕರಗಳು ಪೂರೈಕೆಯಾಗುತ್ತಿರುವ ಜಾಲದ ಬಗ್ಗೆ ಸರಕಾರಗಳು ಹೆಚ್ಚಿನ ನಿಗಾ ವಹಿಸಬೇಕಿವೆ ಎಂದು ವರದಿ ಸಲಹೆ ಮಾಡಿದೆ. ಯುರೋಪಿಯನ್ ಯೂನಿಯನ್ ನಿಯೋಜಿಸಿದ್ದ ಈ ಅಧ್ಯಯನದ ಮಾಹಿತಿಗಳ ಅನ್ವಯ, 20 ದೇಶಗಳ 51 ಕಂಪೆನಿಗಳು ಈ ಜಾಲದಲ್ಲಿ ಸೇರಿವೆ. ಇವುಗಳಲ್ಲಿ ಟರ್ಕಿ, ಬ್ರೆಝಿಲ್ ಹಾಗೂ ಅಮೆರಿಕ ಸೇರಿವೆ. ಈ ಕಂಪೆನಿಗಳು ಐಸಿಸ್ ಬಳಸುವ ಸುಧಾರಿತ ಸ್ಫೋಟಕಗಳ 700ಕ್ಕೂ ಹೆಚ್ಚು ಪರಿಕರಗಳನ್ನು ಸಿದ್ಧಪಡಿಸುತ್ತವೆ. ಇಂಥ ಸ್ಫೋಟಕಗಳ ಉತ್ಪಾದನೆ ಮಾರಾಟ ಹಾಗೂ ಸ್ವೀಕರಿಸುವಲ್ಲಿ ಈ ಕಂಪೆನಿಗಳ ಪಾತ್ರ ಇರುವುದನ್ನು ಅಧ್ಯಯನ ಬಹಿರಂಗಪಡಿಸಿದೆ.
ಸುಧಾರಿತ 5 ಸ್ಫೋಟಕ ಸಾಧನಗಳು (ಐಇಡಿ) ಇದೀಗ ಅರೆ ಕೈಗಾರಿಕಾ ಪ್ರಮಾಣದಲ್ಲಿ ಉತ್ಪಾದನೆಯಾಗುತ್ತಿವೆ. ಇವುಗಳನ್ನು ಉಗ್ರಗಾಮಿ ಗುಂಪುಗಳು ಉತ್ಪಾದಿಸುತ್ತವೆ. ಇದಕ್ಕೆ ತೀವ್ರ ನಿಯಂತ್ರಣದ ಹಲವು ಕೈಗಾರಿಕಾ ಸಾಧನಗಳನ್ನು ಮತ್ತು ವ್ಯಾಪಕವಾಗಿ ಸಿಗುವ ಸಾಧನಗಳು, ರಸಗೊಬ್ಬರ, ರಾಸಾಯನಿಕ ಹಾಗೂ ಮೊಬೈಲ್ ಫೋನ್‌ಗಳನ್ನು ಬಳಸಲಾಗುತ್ತದೆ ಎಂದು 20 ತಿಂಗಳ ಕಾಲ ಅಧ್ಯಯನ ನಡೆಸಿದ ಕಾನ್‌ಫ್ಲಿಕ್ಟ್ ಆರ್ನಮೆಂಟ್ ರಿಸರ್ಚ್ (ಸಿಎಆರ್) ವರದಿ ವಿವರಿಸಿದೆ.





