ಸಚಿವೆ ಸ್ಮತಿ ಇರಾನಿ ಹೇಳಿಕೆಯನ್ನು ನಿರಾಕರಿಸಿರುವ ಪೊಲೀಸ್
ವೇಮುಲಾ ಆತ್ಮಹತ್ಯೆ
ಹೊಸದಿಲ್ಲಿ, ಫೆ.25: ಹೈದರಾಬಾದ್ ಸೆಂಟ್ರಲ್ ವಿಶ್ವವಿದ್ಯಾನಿಲಯದ ಸಂಶೋಧನಾ ವಿದ್ಯಾರ್ಥಿ ರೋಹಿತ್ ವೇಮುಲಾನ ಕುರಿತಂತೆ ಬುಧವಾರ ಸಂಸತ್ತಿನಲ್ಲಿ ಸಚಿವ ಸ್ಮತಿ ಇರಾನಿ ನೀಡಿರುವ ಭಾಷಣ ಇದೀಗ ತನ್ನ ವಿರೋಧಾಭಾಸಗಳಿಂದ ಚರ್ಚೆಗೆ ಗುರಿಯಾಗಿದೆ. ಅಂತರ್ಜಾಲ ಸುದ್ದಿ ತಾಣ ನ್ಯೂಸ್ ಮಿನಿಟ್‌ಗೆ ದೊರೆತ ದಾಖಲೆಗಳು ಸಚಿವೆಯ ಹೇಳಿಕೆಗೆ ತದ್ವಿರುದ್ಧವಾದುದನ್ನು ಹೇಳುತ್ತಿದೆ.
ಸಂಸತ್ತಿನಲ್ಲಿ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಖಾತೆ ಸಚಿವ ತನ್ನ ಆಕ್ರೋಶಭರಿತ ಹಾಗೂ ಭಾವನಾತ್ಮಕ ಭಾಷಣದಲ್ಲಿ ಆತ್ಮಹತ್ಯೆ ಮಾಡಿಕೊಂಡ ಮೃತದೇಹದ ಬಳಿ ಯಾವುದೇ ವೈದ್ಯರನ್ನು ಮರುದಿನ ಬೆಳಿಗ್ಗೆ 6.30ರವರೆಗೆ ಬರಲು ಬಿಟ್ಟಿಲ್ಲವೆಂದು ತೆಲಂಗಾಣ ಪೊಲೀಸರು ಹೈಕೋರ್ಟಿಗೆ ತಿಳಿಸಿದ್ದರು ಎಂದು ಹೇಳಿದ್ದರು. ಜನವರಿ 17ರಂದು ರೋಹಿತ್ ಮೃತ ದೇಹ ನ್ಯೂ ರಿಸರ್ಚ್ ಸ್ಕಾಲರ್ಸ್ ಹಾಸ್ಟೆಲ್‌ನ ಕೊಠಡಿ ಸಂಖ್ಯೆ 207ರಲ್ಲಿ ಸಂಜೆ 6.30ರಿಂದ 7ರ ನಡುವೆ ಪತ್ತೆಯಾಗಿತ್ತ್ತು. ರೋಹಿತ್ ಗೆಳೆಯ ಉಮಾ ಮಹೇಶ್ವರ್‌ಗೆ ಸೇರಿದ ಕೊಠಡಿ ಅದಾಗಿತ್ತು. ಸುರಕ್ಷಾ ಸಿಬ್ಬಂದಿಗಳು ರೋಹಿತ್‌ರ ದೇಹ ಸೀಲಿಂಗ್ ಫ್ಯಾನ್‌ನಿಂದ ನೇತಾಡುತ್ತಿರುವುದನ್ನು ನೋಡಿ ಕರ್ತವ್ಯದಲ್ಲಿದ್ದ ಮುಖ್ಯ ವೈದ್ಯಾಧಿಕಾರಿ ಎಂ ರಾಜ್‌ಶ್ರೀಯವರಿಗೆ ಸುದ್ದಿ ಮುಟ್ಟಿಸಿದರು.
‘‘ನನಗೆ ಸುಮಾರು 7.20ರ ಹೊತ್ತಿಗೆ ಕರೆ ಬಂತು, ನಾನು ದೇಹವನ್ನು ಪರೀಕ್ಷಿಸಲು ಹಾಸ್ಟೆಲ್‌ಗೆ ಧಾವಿಸಿದೆ. ನಾನು ಅಲ್ಲಿ ತಲುಪಬೇಕಾದರೆ, ದೇಹವನ್ನು ಕೆಳಗಿಳಿಸಲಾಗಿತ್ತು. ಹತ್ತು ನಿಮಿಷಗಳೊಳಗಾಗಿ ನಾವು ಆತ ಮೃತಪಟ್ಟಿದ್ದಾನೆಂದು ಘೋಷಿಸಿದೆವು. ನಾನು ವಿಸಿಯವರಿಗೆ ಕೂಡಲೇ ಮಾಹಿತಿ ನೀಡಿದೆ. ಆತನನ್ನು ಬದುಕಿಸುವ ಸಾಧ್ಯತೆಗಳಿವೆಯೇ ಎಂದು ಅವರು ಕೇಳಿದರು. ಆ ದಿನ ನಾನಲ್ಲಿ ಬೆಳಗ್ಗೆ 3 ಗಂಟೆ ತನಕ ಇದ್ದೆ,’’ಎಂದು ಡಾ. ರಾಜ್‌ಶ್ರೀ ನ್ಯೂಸ್‌ಮಿನಿಟ್‌ಗೆ ಮಾಹಿತಿ ನೀಡಿದ್ದಾರೆ.
ಈ ಬಗ್ಗೆ ವಿಶ್ವವಿದ್ಯಾನಿಲಯದ ಹೆಲ್ತ್ ಬುಕ್‌ನಲ್ಲಿಯೂ ಆಕೆ ದಾಖಲಿಸಿದ್ದು. ಅದರಲ್ಲಿ ಅವರು ಜನವರಿ 17ರಂದು ರೋಹಿತ್ ಮೃತಪಟ್ಟ ಸಮಯ ಸುಮಾರು 7.30ರ ಹೊತ್ತಿಗೆ ಎಂದು ಬರೆದಿದ್ದಾರೆ.’’ ‘‘ದೇಹ ತಣ್ಣಗಾಗಿತ್ತು, ಹೊಟ್ಟೆಯ ಭಾಗ ರಕ್ತಸಿಕ್ತವಾಗಿದ್ದು, ನಾಲಗೆ ಹೊರಕ್ಕೆ ಚಾಚಿತ್ತು ಹಾಗೂ ಬಾಯಲ್ಲಿ ನೊರೆ ಕಾರಿತ್ತು. ಉಸಿರಾಟ ಹಾಗೂ ಎದೆ ಬಡಿತವಿರಲಿಲ್ಲ. ವಿಸಿ, ಡಿಎಸ್‌ಡಬ್ಲ್ಯು, ರಿಜಿಸ್ಟ್ರಾರ್ ಹಾಗೂ ಪೊಲೀಸರಿಗೆ ಮಾಹಿತಿ ನೀಡಿದ್ದೇನೆ,’’ ಎಂದು ಬರೆದು ಡಾ ರಾಜ್‌ಶ್ರೀ ಸಹಿ ಹಾಕಿದ್ದಾರೆ.
ಆದರೆ ಸಚಿವೆ ಸ್ಮೃತಿ ಇರಾನಿ ತೆಲಂಗಾಣ ಪೊಲೀಸರ ವರದಿಯನ್ನು ಉಲ್ಲೇಖಿಸುತ್ತಾ ಸಂಸತ್ತಿನಲ್ಲಿ ಹೀಗೆ ಹೇಳಿದ್ದರು -‘‘ತೆಲಂಗಾಣ ಹೈಕೋರ್ಟಿಗೆ ಸಲ್ಲಿಸಲಾದ ವರದಿಯೊಂದರ ಪ್ರಕಾರ, ಪೊಲೀಸರು ರೋಹಿತ್‌ನ ಹಾಸ್ಟೆಲ್‌ಗೆ ಸಂಜೆ 7.20ಕ್ಕೆ ತಲುಪಿದಾಗ ಅವರು ಮೃತ ದೇಹವನ್ನು ಕಂಡರು. ಅಲ್ಲಿ ಕೊಠಡಿ ತೆರೆದಿತ್ತು ಹಾಗೂ ಮೃತ ದೇಹ ಮೇಜಿನ ಮೇಲಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಕೈಬರಹದ ಡೆತ್ ನೋಟ್ ಪತ್ತೆಯಾಗಿತ್ತು. ಅದು ಯಾರನ್ನೂ ದೂರಿಲ್ಲ. ಇದು ನನ್ನ ಹೇಳಿಕೆಯಲ್ಲ. ಪೊಲೀಸರು ಹೀಗೆಂದು ಹೇಳಿದ್ದಾರೆ.’’ ಆದರೆ ಇದನ್ನು ಪೊಲೀಸ್ ಮೂಲಗಳು ಸ್ಪಷ್ಟವಾಗಿ ನಿರಾಕರಿಸುತ್ತಿವೆ.





