ಹರ್ಭಜನ್‌ರನ್ನು ಕಡೆಗಣಿಸಲಾಗುತ್ತಿದೆ: ಸಕ್ಲೇನ್ ಮುಶ್ತಾಕ್
ಮೀರ್ಪುರ, ಫೆ.25: ‘‘ಭಾರತದ ಹಿರಿಯ ಆಫ್ ಸ್ಪಿನ್ನರ್ ಹರ್ಭಜನ್ ಸಿಂಗ್‌ರನ್ನು ಭಾರತ ತಂಡ ಬದಿಗೆ ಸರಿಸುತ್ತಿದೆ. ಅವರಿಗೆ ಸರಿಯಾದ ಅವಕಾಶ ನೀಡುತ್ತಿಲ್ಲ’’ಎಂದು ‘ದೂಸ್ರಾ’ ಎಸೆತವನ್ನು ವಿಶ್ವಕ್ಕೆ ಪರಿಚರಿಸಿದ್ದ ಪಾಕಿಸ್ತಾನದ ಮಾಜಿ ಸ್ಪಿನ್ನರ್ ಸಕ್ಲೇನ್ ಮುಶ್ತಾಕ್ ಅಭಿಪ್ರಾಯಪಟ್ಟಿದ್ದಾರೆ.
‘‘ಕಳೆದ ಏಳು ಟ್ವೆಂಟಿ-20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಹರ್ಭಜನ್‌ಗೆ ಬೌಲಿಂಗ್ ಆರಂಭಿಸಲು ಅವಕಾಶ ನೀಡಿಲ್ಲ. ಬಿಸಿಸಿಐ ಹಾಗೂ ಟೀಮ್ ಮ್ಯಾನೇಜ್‌ಮೆಂಟ್ ಹರ್ಭಜನ್‌ರನ್ನು ಸರಿಯಾಗಿ ನೋಡಿಕೊಳ್ಳುತ್ತಿಲ್ಲ. ಅವರೋರ್ವ ವಿಶ್ವದರ್ಜೆಯ ಬೌಲರ್. ಅಶ್ವಿನ್ ಕೂಡ ವಿಶ್ವದರ್ಜೆಯ ಬೌಲರ್ ಆಗಿದ್ದರೂ, ಹರ್ಭಜನ್‌ರನ್ನು ತಂಡದಿಂದ ಪದೇ ಪದೇ ಕೈಬಿಡುವ ಮೂಲಕ ಅವರಿಗೆ ಒತ್ತಡ ಹೇರುವುದು ಸರಿಯಲ್ಲ ಎಂದು ಸಕ್ಲೇನ್ ತಿಳಿಸಿದ್ದಾರೆ.
2011ರಲ್ಲಿ ತಂಡದಿಂದ ಹೊರಗುಳಿದ ನಂತರ ಹರ್ಭಜನ್ ಮೂರು ಬಾರಿ ತಂಡಕ್ಕೆ ವಾಪಸಾಗಿದ್ದರು. ಅವರ ಅಗತ್ಯವಿದ್ದಾಗ ಅವರನ್ನು ಆಯ್ಕೆ ಮಾಡಲಾಗುತ್ತದೆ. ಅವರ ಅವಶ್ಯಕತೆ ಇಲ್ಲದಾಗ ತಂಡದಿಂದ ಹೊರಗಿಡಲಾಗುತ್ತಿದೆ. ಈ ಮೂಲಕ ಅವರಿಗೆ ಒತ್ತಡ ಹೇರಲಾಗುತ್ತಿದೆ. ಅವರ ಹಿಂದಿನ ಸಾಧನೆಯನ್ನು ನಿರ್ಲಕ್ಷಿಸಲಾಗುತ್ತಿದೆ’’ ಎಂದು 39 ರ ಹರೆಯದ ಸಕ್ಲೇನ್ ಹೇಳಿದ್ದಾರೆ.





