ವಿಲಿಯಮ್ಸನ್‌ಗೆ ‘ನ್ಯೂಝಿಲೆಂಡ್ ವರ್ಷದ ಕ್ರಿಕೆಟಿಗ ಪ್ರಶಸ್ತಿ’

ಹ್ಯಾಮಿಲ್ಟನ್, ಫೆ.25: ಕಳೆದ ವರ್ಷ(2015) ಒಟ್ಟು ಐದು ಶತಕಗಳನ್ನು ಬಾರಿಸುವ ಮೂಲಕ ವಿಶ್ವದ ನಂ.1 ಟೆಸ್ಟ್ ದಾಂಡಿಗನಾಗಿ ಹೊರ ಹೊಮ್ಮಿದ್ದ ನ್ಯೂಝಿಲೆಂಡ್‌ನ ಅಗ್ರ ಕ್ರಮಾಂಕದ ದಾಂಡಿಗ ಕೇನ್ ವಿಲಿಯಮ್ಸನ್ ನ್ಯೂಝಿಲೆಂಡ್‌ನ ವರ್ಷದ ಕ್ರಿಕೆಟಿಗ ಪ್ರಶಸ್ತಿಗೆ ಆಯ್ಕೆಯಾಗಿದ್ದು, ಸರ್ ರಿಚರ್ಡ್ ಹ್ಯಾಡ್ಲಿ ಪದಕವನ್ನು ಗೆದ್ದುಕೊಂಡರು.
ವಿಲಿಯಮ್ಸನ್ ವರ್ಷದ ಟೆಸ್ಟ್ ಆಟಗಾರ ಪ್ರಶಸ್ತಿಯನ್ನೂ ಗೆದ್ದುಕೊಂಡರು. ಆರಂಭಿಕ ದಾಂಡಿಗ ಮಾರ್ಟಿನ್ ಗಪ್ಟಿಲ್ ವರ್ಷದ ಏಕದಿನ ಹಾಗೂ ವರ್ಷದ ಟ್ವೆಂಟಿ-20 ಆಟಗಾರನಾಗಿ ಆಯ್ಕೆಯಾಗಿದ್ದಾರೆ.
ವಿಲಿಯಮ್ಸನ್ ಸಾಧನೆ: ವಿಲಿಯಮ್ಸನ್ 2015ರಲ್ಲಿ 10 ಟೆಸ್ಟ್ ಪಂದ್ಯಗಳಲ್ಲಿ 1,314 ರನ್ ಗಳಿಸಿದ್ದು, ವೆಲ್ಲಿಂಗ್ಟನ್‌ನಲ್ಲಿ ಶ್ರೀಲಂಕಾ ವಿರುದ್ಧ ಔಟಾಗದೆ 242 ರನ್ ಬಾರಿಸಿದ್ದರು.
ಮೂರು ಮಾದರಿಯ ಕ್ರಿಕೆಟ್‌ನಲ್ಲಿ ಒಟ್ಟು 3,339 ರನ್ ಗಳಿಸಿದ್ದರು. ಇದರಲ್ಲಿ 8 ಶತಕಗಳಿವೆ. ಜೂನ್ ಹಾಗೂ ಆಗಸ್ಟ್‌ನ ನಡುವೆ ಇಂಗ್ಲೆಂಡ್ ಹಾಗೂ ಝಿಂಬಾಬ್ವೆ ವಿರುದ್ಧದ ಸೀಮಿತ ಓವರ್ ಪಂದ್ಯಗಳಲ್ಲಿ ಸತತ ಏಳು ಬಾರಿ 50ಕ್ಕೂ ಅಧಿಕ ರನ್ ಗಳಿಸಿದ್ದರು.
2015ರಲ್ಲಿ ಸೀಮಿತ ಓವರ್ ಪಂದ್ಯಗಳಲ್ಲಿ ಗಪ್ಟಿಲ್ ಅತ್ಯುತ್ತಮ ಪ್ರದರ್ಶನ ನೀಡಿದ್ದು, ವರ್ಷದ ಏಕದಿನ ಹಾಗೂ ಟ್ವೆಂಟಿ-20 ಆಟಗಾರನಾಗಿ ಆಯ್ಕೆಯಾಗಿದ್ದಾರೆ.
ಗಪ್ಟಿಲ್ ಏಕದಿನದಲ್ಲಿ 1891 ರನ್ ಗಳಿಸಿದ್ದರು. 2015ರ ವಿಶ್ವಕಪ್‌ನಲ್ಲಿ ವೆಸ್ಟ್‌ಇಂಡೀಸ್ ವಿರುದ್ಧದ ಕ್ವಾರ್ಟರ್ ಫೈನಲ್‌ನಲ್ಲಿ ಏಕದಿನದಲ್ಲಿ ಎರಡನೆ ಗರಿಷ್ಠ ವೈಯಕ್ತಿಕ ಸ್ಕೋರ್(237) ದಾಖಲಿಸಿದ್ದರು.







