ಇನ್ನೂ 37 ದೇಶಗಳಿಗೆ ಇ-ಪ್ರವಾಸಿ ವೀಸಾ ವಿಸ್ತರಣೆ
ಹೊಸದಿಲ್ಲಿ, ಫೆ.25: ಭಾರೀ ಯಶಸ್ಸು ಕಂಡಿರುವ ಇ-ಪ್ರವಾಸಿ ವೀಸಾ ಸೌಲಭ್ಯವನ್ನು ಆಸ್ಟ್ರೇಲಿಯ, ಝೆಕ್ ರಿಪಬ್ಲಿಕ್, ಡೆನ್ಮಾರ್ಕ್ ಹಾಗೂ ದಕ್ಷಿಣ ಆಫ್ರಿಕಾ ಸಹಿತ ಇನ್ನೂ 37 ರಾಷ್ಟ್ರಗಳಿಗೆ ನಾಳೆಯಿಂದ ವಿಸ್ತರಿಸಲಾಗುವುದು. ಇದರಿಂದ ಈ ಸೌಲಭ್ಯ ಪಡೆಯುವ ರಾಷ್ಟ್ರಗಳ ಸಂಖ್ಯೆ 150ಕ್ಕೇರಲಿದೆ. ಅಲ್ಬೇನಿಯಾ, ಆಸ್ಟ್ರಿಯ, ಬೋಸ್ನಿಯ ಮತ್ತು ಹರ್ಝೆಗೋವಿನ, ಬೊತ್ಸ್ವಾನ, ಬ್ರೂನಿ, ಬಲ್ಗೇರಿಯ, ಕೇಪ್‌ವರ್ಡ್, ಕೊಮೊರೋಸ್, ಕೋಟ್‌ಡಿ’ಲ್ಟೋಯಿರ್, ಕ್ರೊವೇಶಿಯ, ಝೆಕ್ ಗಣರಾಜ್ಯ, ಡೆನ್ಮಾರ್ಕ್, ಎರಿಟ್ರಿಯ, ಗಾಬೋನ್, ಗಾಂಬಿಯ, ಘಾನ ಹಾಗೂ ಗ್ರೀಸ್ ದೇಶಗಳು ಇ-ಪ್ರವಾಸಿ ವೀಸಾ ಯೋಜನೆಗೊಳಪಟ್ಟಿರುವ 37 ಹೊಸ ದೇಶಗಳಲ್ಲಿ ಸೇರಿವೆ.
ಗಿನಿಯ, ಐಸ್‌ಲ್ಯಾಂಡ್, ಲೆಸೊಥೊ, ಲೈಬೀರಿಯಾ, ಮಡಗಾಸ್ಕರ್, ಮಲಾವಿ, ಮಾಲ್ಡೋವಾ, ನಮೀಬಿಯ, ರೊಮೇನಿಯ, ಸಾನ್ ಮಾರಿನೊ, ಸೆನೆಗಲ್, ಸರ್ಬಿಯ, ಸ್ಲೊವಾಕಿಯ, ದಕ್ಷಿಣ ಆಫ್ರಿಕ, ಸ್ವಾಝಿಲ್ಯಾಂಡ್, ಸ್ವಿಝರ್ಲ್ಯಾಂಡ್, ತಜಿಕಿಸ್ತಾನ್, ಟ್ರಿನಿಡಾಡ್ ಮತ್ತು ಟೊಬ್ಯಾಗೊ, ಝಾಂಬಿಯ ಹಾಗೂ ಜಿಂಬಾಬ್ವೆಗಳು ಇತರ ದೇಶಗಳಾಗಿವೆಯೆಂದು ಅಧಿಕೃತ ಹೇಳಿಕೆಯೊಂದು ತಿಳಿಸಿದೆ.
ಟಿವಿಒಎ (ಆಗಮನದ ಬಳಿಕ ಪ್ರವಾಸಿ ವೀಸಾ) ಅಥವಾ ಇ-ಪ್ರವಾಸಿ ವೀಸಾ ಎಂದೇ ಜನಪ್ರಿಯವಾಗಿರುವ ಈ ಯೋಜನೆಗೆ 2014ರ ನ.27ರಂದು ಚಾಲನೆ ನೀಡಲಾಗಿತ್ತು.





