ಅಪಘಾತಗಳನ್ನು ತಡೆಯಲು ‘‘ಶೂನ್ಯ ಅಪಘಾತ’’ಅಭಿಯಾನ
ಹೊಸದಿಲ್ಲಿ.ಫೆ.25: ರೈಲ್ವೆ ಅಪಘಾತಗಳ ಸಂಖ್ಯೆಯನ್ನು ಶೂನ್ಯಕ್ಕಿಳಿಸುವ ಮಹತ್ವದ ಗುರಿಯೊಂದಿಗೆ ಗುರುವಾರ ಮಂಡನೆಯಾದ ರೈಲ್ವೆ ಮುಂಗಡ ಪತ್ರವು ಮುಂದಿನ ಮೂರು-ನಾಲ್ಕು ವರ್ಷಗಳಲ್ಲಿ ಬ್ರಾಡ್‌ಗೇಜ್ ಮಾರ್ಗಗಳಲ್ಲಿರುವ ಎಲ್ಲ ಕಾವಲು ರಹಿತ ಲೆವೆಲ್ ಕ್ರಾಸಿಂಗ್‌ಗಳನ್ನು ನಿವಾರಿಸಲು ಯೋಜನೆಯನ್ನು ಅನಾವರಣಗೊಳಿಸಿದೆ. ಇದಕ್ಕಾಗಿ ವಿನೂತನ ಹಣಕಾಸು ನೆರವು ವ್ಯವಸ್ಥೆಯನ್ನು ರೂಪಿಸಲಾಗುತ್ತಿದೆ.
ಸಚಿವ ಸುರೇಶ ಪ್ರಭು ಅವರು ಪ್ರಕಟಿಸಿರುವ ಕ್ರಿಯಾ ಯೋಜನೆಯು ರೈಲು ಮಾರ್ಗಗಳಲ್ಲಿ ಕಾವಲು ರಹಿತ ಲೆವೆಲ್ ಕ್ರಾಸಿಂಗ್‌ಗಳನ್ನು ನಿವಾರಿಸುವ ಮತ್ತು ರೈಲು ಢಿಕ್ಕಿ ನಿವಾರಣೆ ವ್ಯವಸ್ಥೆ(ಟಿಸಿಎಎಸ್)ಯನ್ನು ಅಳವಡಿಸುವುದನ್ನು ಒಳಗೊಂಡಿದೆ.
ಕಾವಲು ರಹಿತ ಲೆವೆಲ್ ಕ್ರಾಸಿಂಗ್‌ಗಳು ರೈಲ್ವೆಯ ಪಾಲಿಗೆ ಅತ್ಯಂತ ‘‘ದೊಡ್ಡ ತಲೆನೋವು’’ಆಗಿದ್ದು,ಹೆಚ್ಚಿನ ಅಪಘಾತಗಳು ಈ ಸ್ಥಳಗಳಲ್ಲಿಯೇ ಸಂಭವಿಸುತ್ತವೆ ಎಂದು ಅವರು ಹೇಳಿದರು.
ಅಪಘಾತಗಳ ಸಂಖ್ಯೆಯನ್ನು ಶೂನ್ಯಕ್ಕಿಳಿಸುವ ತನ್ನ ಗುರಿ ಸಾಧನೆಗಾಗಿ ಭಾರತೀಯ ರೈಲ್ವೆಯು ವಿಶ್ವದ ಅತ್ಯುನ್ನತ ರೈಲ್ವೆ ಸಂಸ್ಥೆಗಳಾದ ಜಪಾನಿನ ರೈಲ್ವೆ ಟೆಕ್ನಿಕಲ್ ರೀಸರ್ಚ್ ಇನ್‌ಸ್ಟಿಟ್ಯೂಟ್ ಮತ್ತು ಕೊರಿಯಾದ ರೇಲ್ ರೀಸರ್ಚ್ ಇನ್‌ಸ್ಟಿಟ್ಯೂಟ್ ಜೊತೆ ಸಂಶೋಧನೆ ಮತ್ತು ಅಭಿವೃದ್ಧಿ ಸಹ ಭಾಗಿತ್ವದ ಒಪ್ಪಂದಗಳನ್ನು ಮಾಡಿಕೊಂಡಿದೆ ಎಂದು ಪ್ರಭು ತಿಳಿಸಿದರು.