ಐಸಿಸಿ ವಿಶ್ವಕಪ್ ಅಧಿಕಾರಿಗಳ ಪಟ್ಟಿಯಲ್ಲಿ ಆರು ಭಾರತೀಯರು
ದುಬೈ, ಫೆ.25: ಮುಂದಿನ ತಿಂಗಳು ಆರಂಭವಾಗಲಿರುವ ಟ್ವೆಂಟಿ-20 ವಿಶ್ವಕಪ್‌ಗೆ 31 ಸದಸ್ಯರನ್ನು ಒಳಗೊಂಡ ಅಧಿಕಾರಿಗಳ ತಂಡವನ್ನು ಐಸಿಸಿ ಗುರುವಾರ ಪ್ರಕಟಿಸಿದ್ದು, ಮ್ಯಾಚ್ ರೆಫರಿ ಜಾವಗಲ್ ಶ್ರೀನಾಥ್ ಸಹಿತ ಆರು ಭಾರತೀಯರು ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.
ಇದೇ ಮೊದಲ ಬಾರಿ ಇಬ್ಬರು ಮಹಿಳಾ ಅಂಪೈರ್‌ಗಳಾದ ನ್ಯೂಝಿಲೆಂಡ್‌ನ ಕ್ಯಾಥಲೀನ್ ಕ್ರಾಸ್ ಹಾಗೂ ಆಸ್ಟ್ರೇಲಿಯದ ಕ್ಲೈರ್ ಪಾಲೊಸಕ್ ವಿಶ್ವಕಪ್‌ನಲ್ಲಿ ಕಾರ್ಯನಿರ್ವಹಿಸಲಿದ್ದಾರೆ.
ಶ್ರೀನಾಥ್ ಮಾ.8 ರಂದು ಝಿಂಬಾಬ್ವೆ ಹಾಗೂ ಹಾಂಕಾಂಗ್ ನಡುವೆ ನಾಗ್ಪುರದಲ್ಲಿ ನಡೆಯಲಿರುವ ಟೂರ್ನಿಯ ಮೊದಲ ಪಂದ್ಯದಲ್ಲಿ ಮ್ಯಾಚ್ ರೆಫರಿ ಆಗಿ ಕಾರ್ಯನಿರ್ವಹಿಸಲಿದ್ದಾರೆ. ಈ ಪಂದ್ಯದಲ್ಲಿ ಅಲಿಮ್ ದರ್ ಹಾಗೂ ಇಯಾನ್ ಗೌಲ್ಡ್ ಆನ್‌ಫೀಲ್ಡ್ ಅಂಪೈರ್ ಆಗಿರುತ್ತಾರೆ.
ಮಾ.16 ರಂದು ಚೆನ್ನೈನಲ್ಲಿ ನಡೆಯಲಿರುವ ಪಾಕಿಸ್ತಾನ ಹಾಗೂ ಬಾಂಗ್ಲಾದೇಶ ನಡುವಿನ ಮಹಿಳಾ ವಿಶ್ವಕಪ್‌ನಲ್ಲಿ ಕ್ರಾಸ್ ಅವರು ಭಾರತದ ಅನಿಲ್ ಚೌಧರಿ ಅವರೊಂದಿಗೆ ಅಂಪಯರ್ ಆಗಿ ಕಾರ್ಯನಿರ್ವಹಿಸಲಿದ್ದಾರೆ.
ಐಸಿಸಿ ವಿಶ್ವಕಪ್‌ಗೆ ಆಯ್ಕೆಯಾಗಿರುವ ಭಾರತದ ಆರು ಅಧಿಕಾರಿಗಳೆಂದರೆ: ಶ್ರೀನಾಥ್(ಮ್ಯಾಚ್‌ರೆಫರಿ), ಅನಿಲ್ ಚೌಧರಿ, ವಿನೀತ್ ಕುಲಕರ್ಣಿ, ಸಿ.ಕೆ. ನಂದನ್,ಸಿ. ಶಂಸುದ್ದೀನ್, ರವಿ ಸುಂದರಂ.





