ನಾಗರಿಕ ಸೇವಾ ಪರೀಕ್ಷೆಗಳ ಸ್ವರೂಪ ಪರಿಶೀಲನಾ ಸಮಿತಿಯ ಅವಧಿ ವಿಸ್ತರಣೆ
ಹೊಸದಿಲ್ಲಿ, ಫೆ.25: ಐಎಎಸ್ ಹಾಗೂ ಐಪಿಎಸ್ ಅಧಿಕಾರಿಗಳ ಆಯ್ಕೆಗೆ ನಡೆಸಲಾಗುವ ನಾಗರಿಕ ಸೇವಾ ಪರೀಕ್ಷೆಗಳ ವಯೋಮಿತಿ ಸಡಿಲಿಕೆ, ಅರ್ಹತೆ, ಪಠ್ಯ ಹಾಗೂ ಮಾದರಿಗಳಿಗೆ ಸಂಬಂಧಿಸಿದ ವಿವಿಧ ವಿಷಯಗಳ ಪರಿಶೀಲನೆಗಾಗಿ ರಚಿಸಲಾಗಿರುವ ಪರಿಣತರ ಸಮಿತಿಯ ವರದಿ ಸಲ್ಲಿಕೆಯ ಗಡುವನ್ನು ಆಗಸ್ಟ್‌ವರೆಗೆ 6 ತಿಂಗಳು ವಿಸ್ತರಿಸಲಾಗಿದೆಯೆಂದು ಸರಕಾರವಿಂದು ತಿಳಿಸಿದೆ.
ಮಾನವ ಸಂಪನ್ಮೂಲಾಭಿವೃದ್ಧಿ ಇಲಾಖೆಯ ಮಾಜಿ ಕಾರ್ಯದರ್ಶಿ ಹಾಗೂ ನಿವೃತ್ತ ಐಎಎಸ್ ಅಧಿಕಾರಿ ಬಿ.ಎಸ್. ಬಸ್ವಾನ್ ನೇತೃತ್ವದ ಈ ಪರಿಣತರ ಸಮಿತಿಯನ್ನು ಕೇಂದ್ರ ಲೋಕಸೇವಾ ಆಯೋಗವು(ಯುಪಿಎಸ್‌ಸಿ) ಕಳೆದ ವರ್ಷ ಆಗಸ್ಟ್‌ನಲ್ಲಿ ರಚಿಸಿತ್ತು. 6 ತಿಂಗಳೊಳಗೆ ವರದಿ ನೀಡುವಂತೆ ಅದಕ್ಕೆ ತಿಳಿಸಲಾಗಿತ್ತು. ಆ ಗಡುವು ಈ ತಿಂಗಳು ಅಂತ್ಯಗೊಳ್ಳಲಿದೆ.
ವರದಿ ಸಲ್ಲಿಸುವುದಕ್ಕಾಗಿ ಸಮಿತಿಗೆ 2016ರ ಆಗಸ್ಟ್‌ವರೆಗೆ ಕಾಲಾವಕಾಶ ವಿಸ್ತರಣೆ ಮಾಡಲಾಗಿದೆಯೆಂದು ಸಿಬ್ಬಂದಿ ಸಹಾಯಕ ಸಚಿವ ಜಿತೇಂದ್ರ ಸಿಂಗ್ ಇಂದು ರಾಜ್ಯಸಭೆಗೆ ಲಿಖಿತ ಉತ್ತರವೊಂದರಲ್ಲಿ ತಿಳಿಸಿದರು.
ಸಮಿತಿಯು ಪರೀಕ್ಷೆಯ ಯೋಜನೆ, ಪತ್ರಿಕೆಗಳ ಸಂಖ್ಯೆ, ಅವುಗಳ ಸ್ವರೂಪ, ಸಮಯ ಮಿತಿ, ಅಂಕ ಯೋಜನೆ, ಅಂಕಗಳ ಗುರುತ್ವ ಹಾಗೂ ವೌಲ್ಯಮಾಪನ ವ್ಯವಸ್ಥೆಗಳ ಬಗ್ಗೆ ಪರಿಶೀಲಿಸುತ್ತಿದೆ. ಯಾವುದೇ ನಿರ್ದಿಷ್ಟ ವಿಭಾಗ, ಪಠ್ಯ ವ್ಯಾಪ್ತಿ, ಭಾಷೆ ಅಥವಾ ಪ್ರದೇಶಗಳಿಂದ ಅಭ್ಯರ್ಥಿಗಳ ವಿರುದ್ಧ ತಾರತಮ್ಯ ನಡೆಯದ, ಸಮಗ್ರವಾಗಿರುವ ಪರೀಕ್ಷಾ ಮಾದರಿಯೊಂದನ್ನು ಅದು ಈ ಮೂಲಕ ನಿರ್ಧರಿಸಲಿದೆಯೆಂದು ಅದರ ಪರಿಶೀಲನಾಂಶಗಳಲ್ಲಿ ತಿಳಿಸಲಾಗಿದೆ.
ಅಭ್ಯರ್ಥಿಗಳಿಗೆ ಪರೀಕ್ಷೆಗೆ ಹಾಜರಾಗಲು ಇರಬೇಕಾದ ಸೂಕ್ತ ಅರ್ಹತೆ, ಕನಿಷ್ಠ ಹಾಗೂ ಗರಿಷ್ಠ ವಯೋಮಿತಿ, ನಡೆಸಬಹುದಾದ ಪ್ರಯತ್ನಗಳ ಸಂಖ್ಯೆಗಳ ಬಗ್ಗೆ ಸಮಿತಿ ನಿರ್ಧರಿಸಲಿದೆ.
ಪರೀಕ್ಷೆಯ ಪ್ರತಿ ಪ್ರಶ್ನೆಪತ್ರಿಕೆಯ ರಚನಾ ವ್ಯವಸ್ಥೆ ಹಾಗೂ ಪಠ್ಯ ವಿಷಯವನ್ನು ಕಾಲಕಾಲಕ್ಕೆ ಪರಿಷ್ಕರಿಸುವ ಬಗ್ಗೆಯೂ ಅದು ಸಲಹೆ ನೀಡಲಿದೆ.





