ಜಿ.ಪಂ. ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನ: ಮಹಿಳೆಯರಿಗೆ ಶೇ.50 ಮೀಸಲು

ಬೆಂಗಳೂರು, ಫೆ.26: ಮಹಿಳೆಯರಿಗೆ ರಾಜ್ಯದ ಜಿಲ್ಲಾ ಪಂಚಾಯತ್‌ಗಳ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಹುದ್ದೆಗಳಲ್ಲಿ ಶೇ.50ರಷ್ಟು ಮೀಸಲಾತಿ ನೀಡಲು ರಾಜ್ಯ ಸರಕಾರ ಮಹತ್ವದ ತೀರ್ಮಾನ ಕೈಗೊಂಡಿದೆ.
ರಾಜ್ಯ ಪಂಚಾಯತ್‌ರಾಜ್ ಜಿಲ್ಲಾ ಪಂಚಾಯತ್‌ಗಳ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಹುದ್ದೆಗಳ ಮೀಸಲಾತಿ ತಿದ್ದುಪಡಿ ನಿಯಮಗಳು-2016 ಪ್ರಸಕ್ತ ಸಾಲಿನಿಂದಲೇ ಜಾರಿಗೆ ಬರುತ್ತಿರುವುದರಿಂದ ಮಹಿಳೆಯರಿಗೆ ಶೇ.50ರಷ್ಟು ಮೀಸಲಾತಿ ಲಭ್ಯವಾಗಲಿದೆ.
ಒಟ್ಟು ಮೂವತ್ತು ಜಿಲ್ಲಾ ಪಂಚಾಯತ್‌ಗಳ ಪೈಕಿ ತಲಾ 15 ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳು ಮಹಿಳೆಯರ ಪಾಲಾಗಲಿವೆ. ಅನುಸೂಚಿತ ಜಾತಿ(ಎಸ್ಸಿ)ಗೆ ಕ್ರಮವಾಗಿ ಒಟ್ಟು ಆರು ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳನ್ನು ನಿಗದಿಗೊಳಿಸಲಾಗಿದ್ದು, ಈ ಪೈಕಿ ಕ್ರಮವಾಗಿ ಮೂರು ಸ್ಥಾನಗಳು ಮಹಿಳೆಯರಿಗೆ ಸಿಗಲಿವೆ.
ಅನುಸೂಚಿತ ಪಂಗಡ(ಎಸ್ಟಿ)ಕ್ಕೆ ತಲಾ ಮೂರು ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳನ್ನು ನಿಗದಿಪಡಿಸಲಾಗಿದ್ದು, ಈ ಪೈಕಿ ಕ್ರಮವಾಗಿ ತಲಾ ಎರಡು ಸ್ಥಾನಗಳು ಮಹಿಳೆಯರಿಗೆ ಲಭ್ಯವಾಗಲಿವೆ. ಹಿಂದುಳಿದ ವರ್ಗಗಳ ಪ್ರವರ್ಗ-ಎಗೆ ತಲಾ ಐದು ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳನ್ನು ನಿಗದಿಗೊಳಿಸಲಾಗಿದ್ದು, ಕ್ರಮವಾಗಿ ತಲಾ ಎರಡು ಸ್ಥಾನಗಳು ಮಹಿಳೆಯರಿಗೆ ಲಭ್ಯವಾಗಲಿವೆ.
ಪ್ರವರ್ಗ-ಬಿಗೆ ಸೇರಿದ ಮಹಿಳೆಯರಿಗೆ ತಲಾ ಒಂದು ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನವನ್ನು ಮೀಸಲಿರಿಸಲಾಗಿದೆ. ಇದಲ್ಲದೆ, 15 ಜಿಲ್ಲಾ ಪಂಚಾಯತ್‌ಗಳಿಗೆ ಸಂಬಂಧಿಸಿದಂತೆ ತಲಾ 15 ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳನ್ನು ಸಾಮಾನ್ಯ ವರ್ಗಕ್ಕೆ ಮೀಸಲಿರಿಸಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಇಲಾಖೆಯ ಸರಕಾರದ ಅಧೀನ ಕಾರ್ಯದರ್ಶಿ(ಜಿ.ಪಂ) ಎಂ.ಬಿ.ಧೋತ್ರೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.







