ಅಯೋಧ್ಯೆ ವಿವಾದ: ಸ್ವಾಮಿ ಅರ್ಜಿ ವಿಚಾರಣೆ
ಹೊಸದಿಲ್ಲಿ,ಫೆ.26 : ವಿವಾದಾತ್ಮಕ ಕಟ್ಟಡ ಧ್ವಂಸ ಸ್ಥಳದಲ್ಲಿ ರಾಮ ಮಂದಿರ ನಿರ್ಮಾಣ ಮಾಡಲು ಅನುಮತಿ ಕೋರಿ ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಸಲ್ಲಿಸಿದ ಅಯೋಧ್ಯೆ ವಿವಾದ ಪ್ರಕರಣದ ಬಾಕಿ ಉಳಿದ ಅರ್ಜಿಯ ವಿಚಾರಣೆಯನ್ನು ಇಂದು ಸುಪ್ರೀಂ ಕೋರ್ಟ್‌ಕೈಗೆತ್ತಿಕೊಂಡಿದೆ.
ನ್ಯಾಯಮೂರ್ತಿಗಳಾದ ವಿ.ಗೋಪಾಲಗೌಡ ಮತ್ತು ಅರುಣ್ ಮಿಶ್ರ ಅವರನ್ನೊಳಗೊಂಡ ಪೀಠ, ಸ್ವಾಮಿ ಸಲ್ಲಿಸಿದ ರಾಮ ಮಂದಿರ ನಿರ್ಮಾಣಕ್ಕೆ ಸಂಬಂಧಿಸಿದ ಹೊಸ ಅರ್ಜಿಯ ವಿಚಾರಣೆ ಕೈಗೆತ್ತಿಕೊಳ್ಳವುದಕ್ಕಿಂತ ಅದನ್ನು ಹಳೆಯ ಅರ್ಜಿಯ ಜೊತೆ ವಿಚಾರಣೆಯನ್ನೇ ಮುಂದುವರಿಸಲಾಗುವುದೆಂದು ಅಭಿಪ್ರಾಯ ಪಟ್ಟಿತ್ತು.
ರಾಮ ಮಂದಿರ ಇತ್ತೆಂದು ಪುರಾತತ್ವ ಇಲಾಖೆ ಕಂಡು ಹಿಡಿದಿದೆ. ಅಲ್ಲದೇ, ಸರಕಾರ ಕೂಡ ವಿವಾದಾತ್ಮಕ ಕಟ್ಟಡದಲ್ಲಿ ರಾಮ ಮಂದಿರ ನಿರ್ಮಾಣ ಮಾಡಲು ವಿವಾದಿತ ಸ್ಥಳದಲ್ಲಿ ಈಗಾಗಲೇ ಅಫಿದವಿತ್ ಸಲ್ಲಿಸಿದೆ ಎಂದು ಸುಬ್ರಮಣಿಯನ್ ಸ್ವಾಮಿ ನ್ಯಾಯಪೀಠದ ಮುಂದೆ ವಾದಿಸಿದರು. ನಾಗರಿಕ ದಾವೆ ಅರ್ಜಿಯು ವಿಚಾರಣೆಯಲ್ಲಿರು ವುದರಿಂದ ಹೊಸದಾಗಿ ಸಲ್ಲಿಸಿರುವ ರಿಟ್ ಅರ್ಜಿಯ ವಿಚಾರಣೆಯನ್ನು ಅಂಗೀಕರಿಸಲು ಸಾಧ್ಯವಿಲ್ಲ.ಒಂದುವೇಳೆ ಅರ್ಜಿದಾರನು ಹೈರ್ಕೋಟ್‌ಗೆ ಅರ್ಜಿ ಸಲ್ಲಿಸಬಹುದು ಅಥವಾ ಬಾಕಿ ಉಳಿದ ಪ್ರಕರಣದಲ್ಲಿ ಕಕ್ಷಿದಾರರನ್ನಾಗಿ ಮಾಡುವಂತೆ ಅರ್ಜಿ ಸಲ್ಲಿಸಬಹುದು ಎಂದು ನ್ಯಾಯಪೀಠ ಹೇಳಿತು.
ಆರಂಭದಲ್ಲಿ ಸ್ವಾಮಿಯವರು ವಿವಾದಾತ್ಮಕ ಕಟ್ಟಡ ಧ್ವಂಸ ಸ್ಥಳದಲ್ಲಿ ರಾಮ ಮಂದಿರ ನಿರ್ಮಾಣ ಮಾಡಲು ಅನುಮತಿ ನೀಡಬೇಕೆಂದು ಸಲ್ಲಿಸಿದ ಅರ್ಜಿಯನ್ನು ಕೂಡಲೇ ವಿಚಾರಣೆಯನ್ನು ಕೈಗೆತ್ತಿಕೊಳ್ಳಬೇಕೆಂದು ಮುಖ್ಯ ನ್ಯಾಯಮೂರ್ತಿ ಟಿ.ಎಸ್ ಠಾಕೂರ್ ರವರ ಪೀಠಕ್ಕೆ ಅರ್ಜಿ ಸಲ್ಲಿಸಿದ್ದರು.
ಇಸ್ಲಾಮಿಕ್ ದೇಶಗಳಲ್ಲಿ ಸಾರ್ವಜನಿಕ ಉದ್ದೇಶಗಳಾದ ರಸ್ತೆ ನಿರ್ಮಾಣಗಳಿಗೆ ಮಸೀದಿಯನ್ನು ಸ್ಥಳಾಂತರಿಸಬಹುದು.ಆದರೆ ದೇವಸ್ಥಾನಗಳು ಒಮ್ಮೆ ನಿರ್ಮಾಣವಾದರೆ ಮತ್ತೆ ಅದನ್ನು ಕೆಡವುವಂತಿಲ್ಲ ಎಂದು ಸ್ವಾಮಿ ತನ್ನ ಅರ್ಜಿಯಲ್ಲಿ ಸಮರ್ಥಿಸಿದ್ದಾರೆ.
ಮಂದಿರ ಮತ್ತು ಮಸೀದಿಗಳನ್ನು ಪವಿತ್ರವೆಂದು ಪರಿಗಣಿಸಲು ಬರುವುದಿಲ್ಲ. ಮಸೀದಿ ಇಸ್ಲಾಮ್ ಧರ್ಮದಲ್ಲಿ ಅಗತ್ಯವಾದ ಭಾಗವಲ್ಲ ಎಂದು ಸುಪ್ರೀಂಕೋರ್ಟ್‌ನ ಸಾಂವಿಧಾನಿಕ ಪೀಠವು ಹಲವು ತೀರ್ಪುಗಳಲ್ಲಿ ಹೇಳಿದೆ.ಅದೇ ಇಂಗ್ಲೇಂಡಿನ ಹೌಸ್ ಆಫ್ ಲಾರ್ಡ್ಸ್‌ನಲ್ಲಿ ಮಂದಿರ ಬಳಕೆಯಾಗದಿದ್ದರು ಮತ್ತು ನಾಶಗೊಂಡರೂ ಮಂದಿರ ಯಾವಾಗಲೂ ಮಂದಿರವೆಂದೇ ಪರಿಗಣಿಸಲಾಗಿದೆ.ಆದ್ದರಿಂದ ಯಾವುದೇ ಮಸೀದಿಯ ಸ್ಥಳಕ್ಕಿಂತಲೂ ರಾಮ ಜನ್ಮಭೂಮಿಯಲ್ಲಿ ರಾಮ ಮಂದಿರವಿರುವುದು ಮೂಲಭೂತ ಸತ್ಯವೆಂದು ಸ್ವಾಮಿ ತನ್ನ ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.
ಅಯೋಧ್ಯೆಯ ವಿವಾದಿತ ಬಾಬರಿ ಮಸೀದಿ ಮತ್ತು ರಾಮ ಜನ್ಮಭೂಮಿಗೆ ಸಂಬಂಧಿಸಿದ ಅಲಹಾಬಾದ್ ಹೈಕೋರ್ಟ್‌ನ ತ್ರಿ ಸದಸ್ಯ ಪೀಠ ನೀಡಿರುವ ತೀರ್ಪಿನ ಬಗ್ಗೆ ಪ್ರಶ್ನಿಸಿರುವ ಹಲವು ಅರ್ಜಿಗಳ ವಿಚಾರಣೆಯನ್ನು ತ್ವರಿತವಾಗಿ ವಿಲೇವಾರಿ ಮಾಡಬೇಕೆಂದು ನಿರ್ದೇಶಿಸಲು ಸ್ವಾಮಿ ಒತ್ತಾಯಿಸಿದ್ದಾರೆ.ವಿವಾದಿತ ಅಯೋಧ್ಯೆಯ ಸ್ಥಳದಲ್ಲಿ ಎಂದಿನಂತೆ ರಾಮಲಲ್ಲಾ ಮಂದಿರದಲ್ಲಿ ಪ್ರಾರ್ಥನೆಗೆ ಅವಕಾಶ ಹಾಗೂ ಕೇಂದ್ರ ಸರಕಾರ ವಶಪಡಿಸಿಕೊಂಡಿರುವ 67 ಎಕ್ರೆ ಪ್ರದೇಶದ ಸುತ್ತಮುತ್ತ ಯಾವುದೇ ಧಾರ್ಮಿಕ ಚಟುವಟಿಕೆಗಳು ನಡೆಯಬಾರದೆಂಬ ಸುಪ್ರೀಂಕೋರ್ಟ್‌ನ ನಿರ್ಬಂಧಕ್ಕೆ ಯಥಾಸ್ಥಿತಿ ಆದೇಶ ನೀಡಬೇಕು ಎಂದು ಕೋರಿದ್ದಾರೆ.





