ಡಾ.ಸನದಿಗೆ ಪಂಪ ಪ್ರಶಸ್ತಿ

ಬೆಂಗಳೂರು, ಫೆ.26: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ನೀಡುವ 2015ನೆ ಸಾಲಿನ ಪ್ರತಿಷ್ಠಿತ ‘ಪಂಪ ಪ್ರಶಸ್ತಿ’ಗೆ ಉತ್ತರ ಕನ್ನಡ ಜಿಲ್ಲೆಯ ಕುಮಟಾದ ಡಾ.ಬಿ.ಎ. ಸನದಿ ಆಯ್ಕೆಯಾಗಿದ್ದಾರೆಂದು ಕನ್ನಡ ಮತ್ತು ಸಂಸ್ಕೃತಿ ಸಚಿವೆ ಉಮಾಶ್ರೀ ತಿಳಿಸಿದ್ದಾರೆ.
2015ನೆ ಸಾಲಿನ ಪ್ರತಿಷ್ಠಿತ ‘ದಾನ ಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿ’ ಖ್ಯಾತ ಲೇಖಕಿ ನೇಮಿಚಂದ್ರ ಅವರಿಗೆ ಸಂದಿದೆ. ‘ಪ್ರೊ.ಕೆ.ಜಿ.ಕುಂದಣಗಾರ ಗಡಿನಾಡ ಸಾಹಿತ್ಯ ಪ್ರಶಸ್ತಿಗೆ ಎಂ.ಎಸ್.ಸಿಂಧೂರ ಆಯ್ಕೆಯಾಗಿದ್ದಾರೆ. ಕ್ರಾಂತಿವೀರ ‘ಸಂಗೊಳ್ಳಿ ರಾಯಣ್ಣ ಪ್ರಶಸ್ತಿ’ಗೆ ಹಿರಿಯ ಸಾಹಿತಿ ಜಂಬಣ್ಣ ಅಮರಚಿಂತ ಆಯ್ಕೆಯಾಗಿದ್ದಾರೆಂದು ಉಮಾಶ್ರೀ ಹೇಳಿದ್ದಾರೆ.
ಪಂಪ ಪ್ರಶಸ್ತಿ, ದಾನಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿ, ಪ್ರೊ.ಕೆ.ಜಿ.ಕುಂದಣಗಾರ ಗಡಿನಾಡ ಸಾಹಿತ್ಯ ಪ್ರಶಸ್ತಿ ಹಾಗೂ ಸಂಗೊಳ್ಳಿ ರಾಯಣ್ಣ ಪ್ರಶಸ್ತಿಗೆ ಅರ್ಹರನ್ನು ಆಯ್ಕೆ ಮಾಡಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಮಿತಿಯನ್ನು ರಚಿಸಿತ್ತು. ಸಮಿತಿಯ ಶಿಫಾರಸಿನ ಅನ್ವಯ ಮೇಲ್ಕಂಡ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.





