ಅಂತರಖಂಡ ಕ್ಷಿಪಣಿ: ರಷ್ಯಾಗೆ ಶಕ್ತಿಪ್ರದರ್ಶಿಸಲು ಅಮೆರಿಕ ಸಜ್ಜು

ಕ್ಯಾಲಿಫೋರ್ನಿಯಾ: ಅಮೆರಿಕದ ವಾಯುಪಡೆ ಒಂದೇ ವಾರದಲ್ಲಿ ಎರಡನೇ ಬಾರಿಗೆ ತನ್ನ ಎರಡನೇ ಅಂತರಖಂಡ ಸಿಡಿತಲೆ ಕ್ಷಿಪಣಿಯ ಪರೀಕ್ಷಾರ್ಥ ಪ್ರಯೋಗ ನಡೆಸಿದ್ದು, ರಷ್ಯಾ ಹಾಗೂ ಉತ್ತರ ಕೊರಿಯಾ ಜತೆಗಿನ ಸಂಘರ್ಷದ ಹಿನ್ನೆಲೆಯಲ್ಲಿ ತನ್ನ ಅಣ್ವಸ್ತ್ರ ಸಾಮರ್ಥ್ಯವನ್ನು ಪ್ರದರ್ಶಿಸಿದೆ.
ಮಾನವ ರಹಿತ ಮಿನಿಟ್‌ಮನ್-3 ಕ್ಷಿಪಣಿಯನ್ನು ವೆಂಡೆನ್‌ಬರ್ಗ್ ವಾಯುನೆಲೆಯಿಂದ ತಡರಾತ್ರಿ ಸಿಡಿಸಲಾಯಿತು. ಗಂಟೆಗೆ 24 ಸಾವಿರ ಕಿಲೋಮೀಟರ್ ವೇಗದಲ್ಲಿ ಆಗಸಕ್ಕೆ ಚಿಮ್ಮಿದ ಈ ಕ್ಷಿಪಣಿ, ನಿಗದಿತ ಗುರಿಯಾದ 6500 ಕಿಲೋಮೀಟರ್ ದೂರದ ಪ್ರದೇಶವನ್ನು ನಿಗದಿತ ಅವಧಿಗಿಂತ ಅರ್ಧಗಂಟೆ ತಡವಾಗಿ ತಲುಪಿತು.
ದಕ್ಷಿಣ ಫೆಸಿಫಿಕ್ ಸಮುದ್ರದ ಕ್ವಜಲೇಯಿನ್ ಅಟೋಲ್ ಪ್ರದೇಶವನ್ನು ಕ್ಷಿಪಣಿಯ ಗುರಿಯಾಗಿ ನಿಗದಿಪಡಿಸಲಾಗಿತ್ತು.
ರಕ್ಷಣಾ ವಿಭಾಗದ ಉಪ ಕಾರ್ಯದರ್ಶಿ ರಾಬರ್ಟ್ ವರ್ಕ್, ಈ ಉಡಾವಣೆಗೆ ಸಾಕ್ಷಿಯಾಗಿದ್ದರು.
2011ರ ಜನವರಿಯಿಂದೀಚೆಗೆ ಇಂಥ 15 ಪರೀಕ್ಷೆಗಳನ್ನು ನಡೆಸಿದೆ. ಅಮೆರಿಕ ಪರಿಣಾಮಕಾರಿಯಾದ ಆಣ್ವಸ್ತ್ರ ಹೊಂದಿದೆ ಎನ್ನುವುದನ್ನು ಪ್ರಮುಖ ಎದುರಾಳಿಗಳಾದ ರಷ್ಯಾ, ಚೀನಾ, ಉತ್ತರ ಕೊರಿಯಾ ದೇಶಗಳಿಗೆ ಪ್ರದರ್ಶಿಸಿದೆ. ಈ ಪರೀಕ್ಷೆಯ ಉದ್ದೇಶವೇ ಅದು ಎಂದು ಅವರು ಹೇಳಿದ್ದಾರೆ.
"ನಮ್ಮಲ್ಲಿರುವ ಕಾರ್ಯಾಚರಣೆ ಕ್ಷಿಪಣಿಗಳು ಅತ್ಯಂತ ವಿಶ್ವಾಸಾರ್ಹ ಎನ್ನುವುದನ್ನು ರಷ್ಯಾ ಹಾಗೂ ಚೀನಾಗೆ ನಾವು ಪ್ರದರ್ಶಿಸಬೇಕಿದೆ. ಅಗತ್ಯ ಬಿದ್ದರೆ ನಮ್ಮ ದೇಶದ ಸುರಕ್ಷತೆಗಾಗಿ ಅಣ್ವಸ್ತ್ರ ಪ್ರಯೋಗಿಸಲು ನಾವು ಸನ್ನದ್ಧರಾಗಿದ್ದೇವೆ ಎನ್ನುವ ಸಂಕೇತವನ್ನು ರವಾನಿಸಬೇಕಾಗಿದೆ ಎಂದು ಖಡಾಖಂಡಿತವಾಗಿ ಹೇಳಿದರು.
ಅಮೆರಿಕದ ಬಹುತೇಕ ಅಣ್ವಸ್ತ್ರಗಳ ಅವಧಿ ಮುಕ್ತಾಯದ ಹಂತಕ್ಕೆ ಬಂದಿದ್ದು, ಅಣ್ವಸ್ತ್ರ ಪಡೆಯಲ್ಲಿ ಎರಡು ವರ್ಷಗಳ ಹಿಂದೆ ಹಗರಣಗಳು ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಅಮೆರಿಕದ ಸನ್ನದ್ಧತೆ ಬಗ್ಗೆ ಪ್ರಶ್ನೆಗಳು ಮೂಡಿದ್ದವು. ಈ ಹಿನ್ನೆಲೆಯಲ್ಲಿ ಈ ಸರಣಿ ಪರೀಕ್ಷೆ ವಿಶೇಷ ಮಹತ್ವ ಪಡೆದಿದೆ.







