ಚಿದಂಬರಂ ಮೊದಲೇ ಹೇಳಿಕೆ ನೀಡಿದ್ದರೆ ಪತಿಯ ಜೀವ ಉಳಿಯುತ್ತಿತ್ತು: ಅಫ್ಝಲ್ ಪತ್ನಿ

ನವದೆಹಲಿ: ಸಂಸತ್ ಭವನದ ಮೇಲೆ 2001ರಲ್ಲಿ ನಡೆದ ದಾಳಿಯಲ್ಲಿ ಅಫ್ಝಲ್ ಗುರು ವಹಿಸಿದ್ದ ಪಾತ್ರದ ಬಗ್ಗೆ ಮಾಜಿ ಕೇಂದ್ರ ಸಚಿವ ಪಿ.ಚಿದಂಬರಂ ಅನುಮಾನ ವ್ಯಕ್ತಪಡಿಸಿ ಹೇಳಿಕೆ ನೀಡಿದ ಮಾಧ್ಯಮ ವರದಿಗಳಿಗೆ ಪ್ರತಿಕ್ರಿಯಿಸಿರುವ ಅಫ್ಝಲ್ ಪತ್ನಿ, "ಚಿದಂಬರಂ ಈ ಹೇಳಿಕೆಯನ್ನು ಈಗ ನೀಡುವ ಬದಲು ಮೊದಲೇ ನೀಡಿದ್ದರೆ, ನನ್ನ ಪತಿಯ ಜೀವ ಉಳಿಯುತ್ತಿತ್ತು" ಎಂದು ತಿರುಗೇಟು ನೀಡಿದ್ದಾರೆ.
ಮರಣ ದಂಡನೆಗೆ ಚಿದಂಬರಂ ವಿರೋಧವಿದ್ದರೆ, ಗಲ್ಲುಶಿಕ್ಷೆಯನ್ನು ತಡೆಯಲು ಪ್ರಯತ್ನಿಸಬೇಕಿತ್ತು ಎಂದು ಅವರು ಹೇಳಿಕೆ ನೀಡಿದ್ದಾರೆ.
"ಅದೇ ಕಾಂಗ್ರೆಸ್ ಸರ್ಕಾರ ನನ್ನ ಪತಿಯನ್ನು ನೇಣುಗಂಬಕ್ಕೆ ಏರಿಸಿದೆ. ಇದು ರಾಜಕೀಯ ಮೈಲೇಜ್ ಪಡೆಯುವ ರಹಸ್ಯ ಕಾರ್ಯಸೂಚಿ" ಎಂದು ತಬಸುಮ್ ಹೇಳಿದ್ದಾರೆ. ರಾಜಕಾರಣಿಗಳ ಹೇಳಿಕೆಯನ್ನು ನಾನು ನಂಬುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಜೆಎನ್‌ಯು ವಿದ್ಯಾರ್ಥಿಗಳು ಅಫ್ಝಲ್ ಗುರುವಿನ ಪುಣ್ಯಸ್ಮರಣೆಯನ್ನು ಹಮ್ಮಿಕೊಂಡ ಹಿನ್ನೆಲೆಯಲ್ಲಿ ಅಫ್ಝಲ್ ಗುರು ವಿವಾದ ಇದೀಗ ಮತ್ತೆ ಚಾಲ್ತಿಗೆ ಬಂದಿದೆ. ಇಲ್ಲಿ ವಿದ್ಯಾರ್ಥಿಗಳು ರಾಷ್ಟ್ರವಿರೋಧಿ ಘೋಷಣೆ ಕೂಗಿದ್ದಾರೆ ಎನ್ನಲಾದ ವಿವಾದ ರಾಷ್ಟ್ರೀಯ ವಾದದ ಬಗ್ಗೆ ಹೊಸ ಚರ್ಚೆ ಹುಟ್ಟುಹಾಕಿದೆ.





