ಜೆಎನ್‌ಯು ಕ್ಯಾಂಪಸ್‌ನಲ್ಲಿ ಭಾರತ-ಪಾಕ್ ಕ್ರಿಕೆಟ್ ಪಂದ್ಯ ಪ್ರದರ್ಶನ!
ಹೊಸದಿಲ್ಲಿ, ಫೆ.27: ಒಂದಿಲ್ಲೊಂದು ಕಾರಣದಿಂದ ಸುದ್ದಿಯ ಕೇಂದ್ರಬಿಂದುವಾಗಿರುವ ಇಲ್ಲಿನ ಜೆಎನ್‌ಯು ಕ್ಯಾಂಪಸ್‌ನಲ್ಲಿ ಭಾರತ ಹಾಗೂ ಪಾಕಿಸ್ತಾನ ನಡುವಿನ ಏಷ್ಯಾಕಪ್ ಪಂದ್ಯವನ್ನು ಶನಿವಾರ ಸಂಜೆ ದೊಡ್ಡ ಪರದೆಯಲ್ಲಿ ಪ್ರದರ್ಶಿಸಲಾಗುತ್ತದೆ.
ಜೆಎನ್‌ಯು ವಿದ್ಯಾರ್ಥಿ ಸಂಘಟನೆಯ ಜೊತೆ ಕಾರ್ಯದರ್ಶಿ, ಬಲ ಪಂಥೀಯ ಸಂಘಟನೆ ಎಬಿವಿಪಿಯ ಸದಸ್ಯ ಸೌರಭ್ ಕುಮಾರ್ ಭಾರತ-ಪಾಕ್ ನಡುವಿನ ಪಂದ್ಯವನ್ನು ವಿವಿ ಆವರಣದಲ್ಲಿ ದೊಡ್ಡ ಪರದೆಯಲ್ಲಿ ಪ್ರದರ್ಶಿಸಲು ಮುಂದಾಗಿದ್ದಾರೆ.
ಫೆ.9 ರಂದು ಜೆಎನ್‌ಯುನ ಕೆಲವು ವಿದ್ಯಾರ್ಥಿಗಳು ವಿವಾದಾತ್ಮಕ ಕಾರ್ಯಕ್ರಮವನ್ನು ಆಯೋಜಿಸಿದ ನಂತರ ರಾಷ್ಟ್ರೀಯತೆಯ ಬಗ್ಗೆ ಜೆಎನ್‌ಯು ಕ್ಯಾಂಪಸ್ ಚರ್ಚೆಯ ಕೇಂದ್ರಬಿಂದುವಾಗಿದೆ.
‘‘ವಿದ್ಯಾರ್ಥಿಗಳ ಆಗ್ರಹದ ಮೇರೆಗೆ ಭಾರತ-ಪಾಕಿಸ್ತಾನ ಪಂದ್ಯವನ್ನು ದೊಡ್ಡ ಪರದೆ ಹಾಗೂ ಪ್ರೊಜೆಕ್ಟರ್‌ಗಳ ಮೂಲಕ ಪ್ರದರ್ಶಿಸಲಾಗುತ್ತದೆ. ಮಹಿಮಾನ್‌ದೇವಿ ಹಾಸ್ಟೆಲ್‌ನ ಹೊರಗೆ 250-300 ವಿದ್ಯಾರ್ಥಿಗಳು ಕುಳಿತು ವೀಕ್ಷಿಸಲು ಸ್ಥಳಾವಕಾಶವಿದ್ದು, ಅಲ್ಲಿಯೇ ಪಂದ್ಯವನ್ನು ಪ್ರದರ್ಶಿಸಲಾಗುತ್ತದೆ’’ ಎಂದು ಕುಮಾರ್ ತಿಳಿಸಿದರು.
ಭಾರತ ಹಾಗೂ ಪಾಕ್ ನಡುವಿನ ಏಷ್ಯಾಕಪ್ ಪಂದ್ಯ ಶನಿವಾರ ಸಂಜೆ 7ಕ್ಕೆ ಆರಂಭವಾಗಲಿದೆ.





