ದೇಶಪ್ರೇಮದ ಹೆಸರಲ್ಲಿ ವಿದ್ಯಾಸಂಸ್ಥೆಗಳ ದುರುಪಯೋಗ: ಸಚಿವ ಜಯಚಂದ್ರ

ಬಂಟ್ವಾಳ: ರಾಜಕಾರಣಿಗಳು ತಮ್ಮ ರಾಜಕೀಯ ಬೇಳೆ ಬೇಯಿಸಲು ವಿದ್ಯಾಸಂಸ್ಥೆಗಳನ್ನು ಆಯ್ಕೆ ಮಾಡಿರುವುದು ದುರಂತದ ಸಂಗತಿಯಾಗಿದೆ ಎಂದು ರಾಜ್ಯ ಉನ್ನತ ಶಿಕ್ಷಣ, ಕಾನೂನು ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ.ಜಯಚಂದ್ರ ವಿಶಾದ ವ್ಯಕ್ತಪಡಿಸಿದರು. ಬಂಟ್ವಾಳದ ಕಾಮಾಜೆ ಸರಕಾರಿ ಪದವಿ ಕಾಲೇಜಿನ ಮೊದಲ ಮಹಡಿಯನ್ನು ಶನಿವಾರ ಉದ್ಘಾಟಿಸಿದ ಬಳಿಕ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಅವರು, ದೇಶಪ್ರೇಮದ ಹೆಸರಿನಲ್ಲಿ ರಾಜಕಾರಣಿಗಳು ವಿದ್ಯಾಸಂಸ್ಥೆಗಳನ್ನು ಬಳಸಿ ತಮ್ಮ ರಾಜಕೀಯ ಬೇಳೆ ಬೇಯಿಸುತ್ತಿದ್ದಾರೆ.
ದೇಶ ವಿದೇಶಗಳ ವಿವಿಧ ಕ್ಷೇತ್ರಗಳಿಗೆ ಸಾವಿರಾರು ವಿದ್ವಾಂಸರನ್ನು ನೀಡಿದ ಜವಾಹರ್‌ಲಾಲ್ ನೆಹರೂ ಯುನಿವರ್ಸಿಟಿಗೆ ಕಳಂಕ ತರುವ ಪ್ರಯತ್ನಗಳು ನಡೆಯುತ್ತಿದೆ. ರಾಜಕಾರಣಿಗಳು ರಾಜಕೀಯ ಮಾಡಲು ಬೇರೆ ಸ್ಥಳಗಳನ್ನು ಆಯ್ಕೆ ಮಾಡಬೇಕೆ ಹೊರತು ವಿದ್ಯಾಸಂಸ್ಥೆಗಳನ್ನಲ್ಲ ಎಂದು ಅವರು ಜೆಎನ್‌ಯುನಲ್ಲಿ ಇತ್ತೀಚೆಗೆ ನಡೆಯುತ್ತಿರುವ ಬೆಳವಣಿಗೆಯ ಕುರಿತು ಪರೋಕ್ಷವಾಗಿ ಬಿಜೆಪಿ ವಿರುದ್ಧ ಕಿಡಿ ಕಾರಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ವಹಿಸಿದ್ದರು. ಬಂಟ್ವಾಳ ಪುರಸಭೆ ಅಧ್ಯಕ್ಷೆ ವಸಂತಿ ಚಂದಪ್ಪ, ಉಪಾಧ್ಯಕ್ಷೆ ಯಾಸ್ಮೀನ್, ಬಂಟ್ವಾಳ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪಿಯೂಸ್ ರಾಡ್ರಿಗಸ್ ಮೊದಲಾದವರು ಉಪಸ್ಥಿತರಿದ್ದರು.







