ಪತ್ರಕರ್ತರ ಪ್ರಶ್ನೆಗೆ ಉಡಾಫೆ ಉತ್ತರ:ಜನಾರ್ಧನ ಪೂಜಾರಿ ಪತ್ರಿಕಾಗೋಷ್ಟಿಯಿಂದ ಅರ್ಧದಲ್ಲಿ ಎದ್ದ ಪತ್ರಕರ್ತರು

ಮಂಗಳೂರು,ಫೆ.27: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಧರಿಸಿದ್ದ ವಾಚ್ ಕಳ್ಳತನಗೈದ ವಾಚ್ ಎಂದು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಸುಳ್ಳು ಆರೋಪ ಮಾಡಿರುವುದು ಕ್ರಿಮಿನಲ್ ಪ್ರಕರಣವಾಗಿದ್ದು ಅವರು ಅದನ್ನು ಕಳ್ಳತನಗೈದ ವಾಚ್ ಎಂದು ಸಾಬೀತಾಪಡಿಸಬೇಕು, ಇಲ್ಲದಿದ್ದಲ್ಲಿ ರಾಜ್ಯದ ಜನತೆಯ ಕ್ಷಮೆಯಾಚಿಸಬೇಕು ಎಂದು ಮಾಜಿ ಕೇಂದ್ರ ಸಚಿವ ಜನಾರ್ದನ ಪೂಜಾರಿ ಆಗ್ರಹಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು ಈ ಬಗ್ಗೆ ಮಾಜಿ ಪ್ರಧಾನಿ ದೇವೆಗೌಡರಿಗೆ ತಮ್ಮ ಮಗ ತಪ್ಪ ಮಾಡಿದ್ದಾನೆ ಎಂದು ಹೇಳುವ ಸೌಜನ್ಯವು ಇಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಯಾವುದೆ ಕಾನೂನನ್ನು ಉಲ್ಲಂಘಿಸಿಲ್ಲ. ನಿಗದಿತ ಅವಧಿಯೊಳಗೆ ತೆರಿಗೆ ಕಟ್ಟುವುದಾಗಿ ಹೇಳಿದ್ದಾರೆ. ಆ ನಂತರವೂ ಕಾನೂನು ಪ್ರಕಾರ ತಪ್ಪು ಮಾಡಿದ್ದರೆ ನ್ಯಾಯಲಯದಲ್ಲಿ ಪ್ರತಿಪಕ್ಷಗಳು ದಾವೆ ಹೂಡಲಿ ಎಂದು ಅವರು ಹೇಳಿದರು.
ಮುಖ್ಯಮಂತ್ರಿಗಳು ತಮಗೆ ವಾಚ್ ಯಾರು ಕೊಟ್ಟದ್ದು ಎಂಬುದನ್ನು ಹೇಳಿದ್ದಾರೆ. ಪ್ರಧಾನಮಂತ್ರಿಗಳಿಗೆ ಬಂಗಾರದಲ್ಲಿ ಹೆಸರು ಬರೆದ 10 ಲಕ್ಷದ ಸೂಟ್ ಕೊಟ್ಟವರು ಯಾರು ಎಂದು ಕೇಳುವ ಧೈರ್ಯ ಬಿಜೆಪಿಯವರಿಗಿಲ್ಲ. ಬಿಜೆಪಿಯವರಿಗೆ ತಾಕತ್ತಿದ್ದರೆ ಪ್ರಧಾನಿಯವರನ್ನು ಈ ಬಗ್ಗೆ ಪ್ರಶ್ನಿಸಲಿ ಎಂದರು. ಯಡ್ಯೂರಪ್ಪನವರ ಹುಟ್ಟುಹಬ್ಬಕ್ಕೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಹುಟ್ಟುಹಬ್ಬದ ಶುಭಾಶಯಗಳ ಜಾಹೀರಾತು ಪ್ರಕಟಿಸಲು ಹಣ ನೀಡಿದವರು ಯಾರು ಎಂದು ಪ್ರಶ್ನಿಸಲಿ ಎಂದು ಹೇಳಿದರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪಕ್ಷ ಹಿನ್ನಡೆಗೆ ಸಂಬಂಧಪಟ್ಟಂತೆ ನಾನು ನೀಡಿದ ಸಲಹೆಗೆ ಉಸ್ತುವಾರಿ ಸಚಿವರು ಉಡಾಫೆ ಮಾಡಿಲ್ಲ. ಆದರೆ ನನ್ನ ಹೇಳಿಕೆಗೆ ವಿಧಾನಪರಿಷತ್ ಸದಸ್ಯರೊಬ್ಬರು ಉಢಾಫೆ ಮಾಡಿದ್ದಾರೆ.ಅವರಿಗೆ ಜನರಲ್ಲಿ ಮತ ಕೇಳಿಯೆ ಗೊತ್ತಿಲ್ಲ. ಪಕ್ಷ ಸಂಘಟನೆಯೆಂದರೆ ಮುಖ್ಯಮಂತ್ರಿಗಳು ಬರುವಾಗ ಅವರ ಹಿಂದೆ ನಿಂತು ಪೊಟೋ ತೆಗೆಸಿಕೊಳ್ಳುವುದಲ್ಲ ಎಂದು ಹೇಳಿದರು.
ಕೇಂದ್ರ ಸರಕಾರ ಗ್ಯಾಸ್ ಸಬ್ಸಿಡಿ ಕಡಿತ ಮಾಡಲು ಚಿಂತಿಸುತ್ತಿದೆ. ಬಡವರು ತಿನ್ನುವ ಆಹಾರವನ್ನು ಸಬ್ಸಿಡಿ ಕಡಿತ ಮಾಡುವ ಮೂಲಕ ಕಿತ್ತುಕೊಳ್ಳುತ್ತಿದ್ದಾರೆ. ಈಗಾಗಲೆ ಆಹಾರ ಸಾಮಗ್ರಿಗಳ ಬೆಲೆ ಗಗನಕ್ಕೇರಿದೆ. ಪೆಟ್ರೋಲ್ ಡಿಸೇಲ್ ನಿಂದ 2.5 ಲಕ್ಷ ಕೋಟಿ ಉಳಿತಾಯ ಮಾಡಿರುವ ಕೇಂದ್ರ ಸರಕಾರ ಅದರ ಪ್ರಯೋಜನವನ್ನು ಬಡಜನರಿಗೆ ನೀಡಲಿ . ಪ್ರಧಾನಮಂತ್ರಿಯವರು ಚಾಯ್ ವಾಲ ಅಲ್ಲ. ಅವರಿಗೆ ಬಡವರ ಕಷ್ಟ ಗೊತ್ತಿಲ್ಲ ಎಂದು ಹೇಳಿದರು.
ಜಿಲ್ಲೆಯಲ್ಲಿ ಮರಳು ಸಮಸ್ಯೆಯಿಂದ ಜಿಲ್ಲೆಯ ಕಟ್ಟಡ ಕಾರ್ಮಿಕರಿಗೆ ಕೆಲಸವಿಲ್ಲದಂತಾಗಿದೆ. ಕಾರ್ಮಿಕರ ಹಸಿವು ಜಿಲ್ಲಾಡಳಿತಕ್ಕೆ ಅರ್ಥವಾಗುತ್ತಿಲ್ಲ. ಕಾಂಕ್ರಿಟ್ ರಸ್ತೆಗಳ ನಿರ್ಮಾಣ ವೆಚ್ಚವು ಹೆಚ್ಚಾಗಿದೆ. ಜಿಲ್ಲಾಡಳಿತ ಮರಳನ್ನು ಹರಾಜು ಮಾಡಲಾಗುತ್ತದೆ ಎಂದು ಹೇಳುತ್ತಿದೆ. ಈ ರೀತಿ ಆದರೆ ಮಧ್ಯಮವರ್ಗದವರು ಮನೆ ಕಟ್ಟಲು ಸಾಧ್ಯವಿಲ್ಲ . ಜಿಲ್ಲಾಡಳಿತ ಎಚ್ಚೆತ್ತುಕೊಂಡು ಕಡಿಮೆ ಬೆಲೆಯಲ್ಲಿ ಜನರಿಗೆ ಮರಳು ಸಿಗುವಂತೆ ವ್ಯವಸ್ಥೆ ಮಾಡಲಿ ಎಂದು ಹೇಳಿದರು.
ಪತ್ರಕರ್ತರ ಪ್ರಶ್ನೆಗೆ ಉಢಾಫೆ ಉತ್ತರ
ಜನಾರ್ದನ ಪೂಜಾರಿಯವರು ಪತ್ರಿಕಾಗೋಷ್ಟಿ ಮುಗಿಸಿದ ನಂತರ ಪತ್ರಕರ್ತರೊಬ್ಬರು ಪ್ರಶ್ನೆ ಕೇಳಲು ಮುಂದಾದಾಗ ಉಡಾಫೆಯಾಗಿ ವರ್ತಿಸಿದ ಘಟನೆ ಇಂದು ನಡೆಯಿತು. ಪತ್ರಕರ್ತ ಪ್ರಶ್ನೆ ಕೇಳಲು ಆರಂಭಿಸಿದ ಕೂಡಲೆ ಪತ್ರಕರ್ತನಿಗೆ ಅವಮಾನವಾಗುವ ರೀತಿಯಲ್ಲಿ ಪ್ರಶ್ನೆ ಕೇಳಲು ಬಿಡದೆ ಬೇರೆಯವರಲ್ಲಿ ಪ್ರಶ್ನೆ ಕೇಳಿ ಎಂದರು.. ಈ ಸಂದರ್ಭದಲ್ಲಿ ಪತ್ರಕರ್ತ ಮತ್ತು ಜನಾರ್ದನ ಪೂಜಾರಿ ನಡುವೆ ಮಾತಿನ ಚಕಮಕಿ ನಡೆಯಿತು. ಜನಾರ್ದನ ಪೂಜಾರಿಯವರ ನಡವಳಿಕೆಯಿಂದ ಅಸಮಾಧಾನಗೊಂಡ ಅಲ್ಲಿದ್ದ ಎಲ್ಲಾ ಪತ್ರಕರ್ತರು ಗೋಷ್ಠಿಯಿಂದ ಎದ್ದು ಹೊರನಡೆದರು.







