ಬೆಳ್ತಂಗಡಿ: ವೈದ್ಯಕೀಯ ಉಚಿತ ತಪಾಸಣಾ ಶಿಬಿರವನ್ನು ಉದ್ಘಾಟನೆ

ಬೆಳ್ತಂಗಡಿ: ಆರೋಗ್ಯವಿದ್ದರೆ ಮಾತ್ರ ವಿದ್ಯೆ, ಬುದ್ಧಿ, ಧನ ಇತ್ಯಾದಿಗಳನ್ನು ಗಳಿಸಬಹುದು. ಆದ್ದರಿಂದಲೇ ನಮ್ಮ ಹಿರಿಯರು ಆರೋಗ್ಯವೇ ಭಾಗ್ಯ ಎಂದು ಹೇಳಿರುವುದು ಎಂದು ಶಾಸಕ ಕೆ. ವಸಂತ ಬಂಗೇರ ಹೇಳಿದರು.
ಅವರು ಶನಿವಾರ ನೆರಿಯ ಗ್ರಾಮದ ದಟ್ಟಡವಿಯೊಳಗೆ ಇರುವ ಬಾಂಜಾರು ಮಲೆ ಎಂಬಲ್ಲಿನ ಸಮುದಾಯ ಭವನದಲ್ಲಿ ಬೆಳ್ತಂಗಡಿ ತಾಲೂಕು ಪತ್ರಕರ್ತರ ಸಂಘದ ದಶಮಾನೋತ್ಸವದ ವರ್ಷಾಚರಣೆಯ ಅಂಗವಾಗಿ, ಬೆಳ್ತಂಗಡಿ ತಾಲೂಕು ಮೆಡಿಕಲ್ ಎಸೋಸಿಯೇಶನ್ ಇವರ ಸಹಕಾರದಲ್ಲಿ ಕೆ.ಎಂ.ಸಿ. ಅತ್ತಾವರ ಇಲ್ಲಿಯ ತಜ್ಞ ವೈದ್ಯರಿಂದ ನಡೆದ ವೈದ್ಯಕೀಯ ಉಚಿತ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಬಾಂಜಾರುವಿನಲ್ಲಿ ರಸ್ತೆ ಕಾಂಕ್ರೀಟಿಕರಣಕ್ಕಾಗಿ ರೂ. 30 ಲಕ್ಷವನ್ನು ವಿನಿಯೋಗಿಸಲಾಗಿದೆ. ಮನೆದುರುಸ್ತಿಗಾಗಿ 17 ಮಂದಿಗೆ 4.5.ಲಕ್ಷ ರೂ. ವನ್ನು ಮಂಜೂರುಗೊಳಿಸಲಾಗಿದೆ. 27 ಮಹಿಳೆಯರಿಗೆ ಹೊಲಿಗೆ ತರಬೇತಿ ನೀಡಲಾಗಿದ್ದು ಹೊಲಿಗೆ ಯಂತ್ರವನ್ನು ವಿತರಿಸಲಾಗಿದೆ ಎಂದ ಅವರು ಪ್ರಸನ್ನ ಪ್ರಾಜೆಕ್ಟ್‌ನಿಂದ ಪರ್ಪಲ-ಕಾಟಾಜೆ-ಅಣಿಯೂರು ಮೂಲಕ ನೆರಿಯಕ್ಕೆ ಸಂಪರ್ಕಿಸುವ ರಸ್ತೆಯನ್ನು ಅಭಿವೃದ್ಧಿಪಡಿಸಲು ಸಂಬಂಧ ಪಟ್ಟ ಇಲಾಖೆ ತಿಳಿಸಲಾಗುವುದು ಎಂದು ಆಶ್ವಾಸನೆ ನೀಡಿದರು. ಈ ಸಂದರ್ಭ ಶಾಸಕರಿಗೆ ನಾಗರಿಕರು ವಿವಿಧ ಬೇಡಿಕೆಗಳ ಬಗ್ಗೆ ಮನವಿಗಳನ್ನು ಸಲ್ಲಿಸಿದರು. ಇದಕ್ಕೆ ಸ್ಪಂದಿಸಿದ ಶಾಸಕರು ಮಹಾಗಣಪತಿ ದೇವಸ್ಥಾನದ ಸುತ್ತು ಪೌಳಿ, ಅನ್ನಛತ್ರ, ಭಜನಾ ಮಂದಿರ ನಿರ್ಮಾಣಗಳನ್ನು ಆದ್ಯತೆ ಮೇರೆಗೆ ಅನುಷ್ಠಾನಿಸಲಾಗುವುದು ಎಂದು ಭರವಸೆ ನೀಡಿದರು.
ಕೆಎಂಸಿಯ ಉಪ ಪ್ರಬಂಧಕ ಡಾಜಯರಾಂ ಅವರು, ಜನತೆಯ ಆರೋಗ್ಯ ಕಾಳಜಿಯ ದೃಷ್ಟಿಯಿಂದ ಇಂತಹ ದುರ್ಗಮ ಸ್ಥಳಕ್ಕೆ ಪ್ರತೀವರ್ಷ ಬರಲು ನಾವು ಸಿದ್ದ. ಆಸ್ಪತ್ರೆಯ ವತಿಯಿಂದ ರೋಗಿಗಳ ಹೆಚ್ಚಿನ ಚಿಕಿತ್ಸೆಗಾಗಿ ಗ್ರೀನ್‌ಕಾರ್ಡ್ ವ್ಯವಸ್ಥೆ ಮಾಡಲಾಗಿದೆ ಎಂದರು.
ಅಧ್ಯಕ್ಷತೆಯನ್ನು ವಹಿಸಿದ್ದ ಪತ್ರಕರ್ತ ಸಂಘದ ಅಧ್ಯಕ್ಷ ಬಿ.ಎಸ್. ಕುಲಾಲ್ ಅವರು ಗುಡ್ಡಗಾಡು ಪ್ರದೇಶದಲ್ಲಿ ನಡೆಸಿದ ಶಿಬಿರದ ಪ್ರಯೋಜನವನ್ನು ಎಲ್ಲರೂ ಪಡೆದುಕೊಂಡರೆ ನಮ್ಮ ಪ್ರಯತ್ನ ಸಾರ್ಥಕ. ಅದೇ ರೀತಿ ಶಾಸಕರು ಇಲ್ಲಿನ ಜನರ ಬೇಡಿಕೆಗಳಿಗೆ ಸ್ಪಂದಿಸಿ ಅನುಷ್ಠಾನಗೊಳಿಸಿದರೆ ಎಲ್ಲರಿಗೂ ಹೆಮ್ಮೆ ಎಂದರು.
ಜಿ.ಪಂ. ಸದಸ್ಯೆ ನಮಿತಾ, ಸಮಾಜ ಕಲ್ಯಾಣಾಧಿಕಾರಿ ಮೋಹನ್ ಕುಮಾರ್, ನೆರಿಯ ಗ್ರಾ.ಪಂ. ಅಧ್ಯಕ್ಷ ಮಹಮ್ಮದ್, ಸದಸ್ಯೆ ಎ.ಬಿ.ಮೀನಾಕ್ಷಿ, ಮಾಜಿ ಸದಸ್ಯ ಕೃಷ್ಣ ಪಿ. ಅತಿಥಿಗಳಾಗಿ ವೇದಿಕೆಯಲ್ಲಿದ್ದರು.
ಪತ್ರಕರ್ತ ಸಂಘದ ಜತೆ ಕಾರ್ಯದರ್ಶಿ ಅಶ್ರಫ್ ಆಲಿ ಕುಂಞ ನಿರ್ವಹಿಸಿದ ಕಾರ್ಯಕ್ರಮದಲ್ಲಿ ನವೀನ್ ಪ್ರಾರ್ಥಿಸಿದರು. ಕಾರ್ಯದರ್ಶಿ ಭುವನೇಶ ಗೇರುಕಟ್ಟೆ ಸ್ವಾಗತಿಸಿದರು. ಮೆಡಿಕಲ್ ಅಸೋಸಿಯೇಶನ್ ಅಧ್ಯಕ್ಷ ಜಗದೀಶ್ ಡಿ. ವಂದಿಸಿದರು.
ಶಿಬಿರದಲ್ಲಿ ಸಾಮಾನ್ಯ ರೋಗ, ಕಣ್ಣು, ಕಿವಿ, ಮೂಗು, ಗಂಟಲು, ಚರ್ಮ, ಎಲುಬು, ಸ್ತ್ರೀ ಹಾಗೂ ಮಕ್ಕಳ ಕಾಯಿಲೆ ವಿಭಾಗಕ್ಕೆ ಸಂಬಂಧಿಸಿದಂತೆ 220 ಮಂದಿ ತಪಾಸಣೆ ಮಾಡಿಕೊಂಡರು. ಸುಮಾರು 10,000 ರೂ. ಮೌಲ್ಯದ ಔಷಧಿಗಳನ್ನು ವಿತರಿಸಲಾಯಿತು. 6 ಮಂದಿಯ ಹೆಚ್ಚಿನ ಚಿಕಿತ್ಸೆಗಾಗಿ ಹಸಿರು ಕಾರ್ಡ್‌ನ್ನು ನೀಡಲಾಯಿತು.







