ಏಷ್ಯಾಕಪ್: ಪಾಕಿಸ್ತಾನ 83 ರನ್‌ಗೆ ಆಲೌಟ್

ಮೀರ್ಪುರ, ಫೆ.27: ಭಾರತದ ಶಿಸ್ತುಬದ್ಧ ಬೌಲಿಂಗ್ ಹಾಗೂ ಫೀಲ್ಡಿಂಗ್‌ಗೆ ನಿರುತ್ತರವಾದ ಪಾಕಿಸ್ತಾನ ಏಷ್ಯಾಕಪ್ ಟ್ವೆಂಟಿ-20 ಪಂದ್ಯದಲ್ಲಿ 17.3 ಓವರ್‌ಗಳಲ್ಲಿ ಕೇವಲ 83 ರನ್‌ಗೆ ಆಲೌಟಾಗಿದೆ.
ಶನಿವಾರ ನಡೆದ ಪಂದ್ಯದಲ್ಲಿ ಟಾಸ್ ಜಯಿಸಿದ ಭಾರತದ ನಾಯಕ ಎಂಎಸ್ ಧೋನಿ ಮೊದಲು ಬೌಲಿಂಗ್ ಆಯ್ದುಕೊಂಡರು. ಮುಹಮ್ಮದ್ ಹಫೀಝ್ ಹಾಗೂ ಶಾರ್ಜೀಲ್ ಖಾನ್ ಪಾಕ್ ಇನಿಂಗ್ಸ್ ಆರಂಭಿಸಿದರು.
ನಾಯಕ ಧೋನಿಯ ಫೀಲ್ಡಿಂಗ್ ಆಯ್ದುಕೊಂಡ ನಿರ್ಧಾರವನ್ನು ಸಮರ್ಥಿಸಿದ ಹಿರಿಯ ವೇಗದ ಬೌಲರ್ ಆಶೀಷ್ ನೆಹ್ರಾ ಇನಿಂಗ್ಸ್‌ನ ಮೊದಲ ಓವರ್‌ನ 4ನೆ ಎಸೆತದಲ್ಲೇ ಪಾಕ್‌ನ ಆರಂಭಿಕ ದಾಂಡಿಗ ಮುಹಮ್ಮದ್ ಹಫೀಝ್ ವಿಕೆಟ್ ಉರುಳಿಸಿ ಪಾಕ್ ವಿಕೆಟ್ ಪತನಕ್ಕೆ ನಾಂದಿ ಹಾಡಿದರು.
ಹಫೀಝ್ ಔಟಾದ ನಂತರ ನಿರಂತರವಾಗಿ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿದ ಪಾಕ್ ಪರ ವಿಕೆಟ್‌ಕೀಪರ್-ದಾಂಡಿಗ ಸರ್ಫರಾಝ್ ಅಹ್ಮದ್(25 ರನ್) ಅಗ್ರ ಸ್ಕೋರರ್ ಎನಿಸಿಕೊಂಡರು. ಪಾಕ್ ಪರ ಖುರ್ರಮ್ ಮಂಝೂರ್(10) ಹಾಗೂ ನಾಯಕ ಶಾಹಿದ್ ಅಫ್ರಿದಿ(2) ರನೌಟಾದರು.
ಭಾರತದ ಪರ ಹಾರ್ದಿಕ್ ಪಾಂಡ್ಯ(3-8) ಯಶಸ್ವಿ ಬೌಲರ್ ಎನಿಸಿಕೊಂಡರು. ರವೀಂದ್ರ ಜಡೇಜ(2-11) ಎರಡು ವಿಕೆಟ್ ಪಡೆದರು. ನೆಹ್ರಾ, ಬುಮ್ರಾ ಹಾಗೂ ಯುವರಾಜ್ ಸಿಂಗ್ ತಲಾ ಒಂದು ವಿಕೆಟ್‌ನ್ನು ಪಡೆದರು.





