ಪುತ್ತೂರು ನಗರಸಭೆಯಲ್ಲಿ ಎ.ಸಿ ಉಸ್ತುವಾರಿ ಪ್ರಶ್ನಿಸಿ ನಗರ ಸಭೆ ಸದಸ್ಯ ಹೈಕೋರ್ಟ್‌ಗೆ ರಿಟ್

ಪುತ್ತೂರು, ಫೆ.27: ನಗರಸಭೆಯ ಉಸ್ತುವಾರಿ ಅಧಿಕಾರಿಯನ್ನಾಗಿ ಪುತ್ತೂರು ಸಹಾಯಕ ಕಮೀಷನರ್‌ರನ್ನು ಜಿಲ್ಲಾಧಿಕಾರಿ ನೇಮಿಸಿರುವ ವಿಚಾರ ಇದೀಗ ಹೈಕೋರ್ಟು ಮೆಟ್ಟಿಲೇರಿದೆ. ಜಿಲ್ಲಾಧಿಕಾರಿಗಳ ಕ್ರಮವನ್ನು ಪ್ರಶ್ನಿಸಿ ನಗರಸಭೆಯ ಆಡಳಿತ ಪಕ್ಷ ಬಿಜೆಪಿ ಸದಸ್ಯ ಹರೀಶ್ ನಾಯ್ಕಿ ಎಂಬವರು ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಿದ್ದಾರೆ.
ನಗರಸಭೆ ಅಥವಾ ಪುರಸಭೆಯ ವಿಚಾರದಲ್ಲಿ ಜಿಲ್ಲಾಧಿಕಾರಿ, ವಿಭಾಗೀಯ ಆಯುಕ್ತರು, ಪೌರಾಡಳಿತ ನಿರ್ದೇಶಕರು, ನಗರಾಭಿವೃದ್ಧಿ ಇಲಾಖೆ ನಿರ್ದೇಶಕರು ಹೊರತುಪಡಿಸಿ ಸಹಾಯಕ ಕಮೀಷನರ್‌ರಿಗೆ ಅವಕಾಶವಿಲ್ಲ ಎಂದು ತಮ್ಮ ರಿಟ್ ಅರ್ಜಿಯಲ್ಲಿ ಹೇಳಿದ್ದಾರೆ. 2014ರಲ್ಲಿ ರಾಜ್ಯ ಸರಕಾರ ಹೊರಡಿಸಿರುವ ಸುತ್ತೋಲೆಯಂತೆ ಕರ್ನಾಟಕ ಪೌರಾಡಳಿತ ಕಾಯ್ದೆ 1964ರ ಸೆಕ್ಷನ್ 321 ಮತ್ತು 388ರ ಅಡಿಯಲ್ಲಿ ಪುರಸಭೆ ಅಥವಾ ನಗರಸಭೆಯ ಆಡಳಿತಕ್ಕೆ ನಿರ್ದೇಶನ ನೀಡುವ ಅಧಿಕಾರ ವಿಭಾಗೀಯ ಆಯುಕ್ತರು, ಪೌರಾಡಳಿತ ಇಲಾಖೆ ನಿರ್ದೇಶಕರು, ಜಿಲ್ಲಾಧಿಕಾರಿಗಳಿಗೆ ಮಾತ್ರ ಯಾವುದೇ ಆಡಳಿತಾತ್ಮಕ ಕಾನೂನುಕ್ರಮಗಳನ್ನು ಕೈಗೊಳ್ಳುವ ಅಧಿಕಾರವಿದೆ. ಈ ಸುತ್ತೋಲೆಯಲ್ಲಿ ಹೊಸ ಅಧ್ಯಕ್ಷರಿಗೆ ಅಥವಾ ಉಪಾಧ್ಯಕ್ಷರಿಗೆ ಅಧಿಕಾರಿ ಹಸ್ತಾಂತರಿಸಲು ವಿಳಂಬ ಮಾಡಿದ ಪ್ರಕರಣಗಳಲ್ಲಿ ಸಂಬಂಧಪಟ್ಟ ಅಧಿಕಾರಿಗೆ ದಂಡ ವಿಧಿಸುವ ಅಧಿಕಾರವನ್ನು ಸಹಾಯಕ ಕಮೀಷನರ್‌ರಿಗೆ ನೀಡಲಾಗಿದೆ. ಇದರ ಹೊರತಾಗಿ ನಗರಸಭೆಗೆ ಉಸ್ತುವಾರಿಯಾಗಿ ಸಹಾಯಕ ಕಮೀಷನರ್‌ರನ್ನು ನೇಮಕಗೊಳಿಸುವ ಕುರಿತು ಪ್ರಸ್ತಾಪಗಳಿಲ್ಲ ಎಂದು ರಿಟ್ ಅರ್ಜಿಯಲ್ಲಿ ಅವರು ತಿಳಿಸಿದ್ದಾರೆ.
ಯಾವುದೇ ಪುರಸಭೆ ಅಥವಾ ನಗರ ಸಭೆಯ ಸಾಮಾನ್ಯ ಸಭೆಗಳಲ್ಲಿ ನಿಯಮ ಮೀರಿ ನಿರ್ಣಯ ಕೈಗೊಂಡರೆ ಅದನ್ನು ಅನೂರ್ಜಿತಗೊಳಿಸುವ ಅಧಿಕಾರವೂ ಜಿಲ್ಲಾಧಿಕಾರಿಗಳಿಗೆ ಇದೆ. ಆದರೆ ಈ ಅಧಿಕಾರವನ್ನು ಮತ್ತೊಬ್ಬರಿಗೆ(ಸಹಾಯಕ ಕಮೀಷನರ್ ಅಥವಾ ತಹಶೀಲ್ದಾರ್) ವರ್ಗಾಯಿಸುವ ಅಥವಾ ನಿಯೋಜಿಸುವ ಅಧಿಕಾರವನ್ನು ಜಿಲ್ಲಾಧಿಕಾರಿಗಳಿಗೆ ನೀಡಿಲ್ಲ. ಸದ್ಯ ಶಸ್ತ್ರಾಸ್ತ್ರ ಕಾಯಿದೆಯಡಿ ಕೋವಿ ಪರವಾನಿಗೆಯನ್ನು ನವೀಕರಿಸುವ ಮತ್ತು ಹೊಸ ಪರವಾನಿಗೆ ನೀಡುವ ಅಧಿಕಾರನ್ನು ತಹಶೀಲ್ದಾರ್‌ರಿಗೆ ಡೆಲಿಗೇಟ್(ವರ್ಗಾವಣೆ) ಮಾಡಿರುವುದನ್ನೂ ಸರ್ಕಾರ ರದ್ದುಪಡಿಸಿದೆ. ಒಂದು ವೇಳೆ ಪುರಸಭೆ ಮತ್ತು ನಗರ ಸಭೆಯಲ್ಲಿ ಯಾವುದಾದರೂ ಆಡಳಿತಾತ್ಮಕ ದೋಷಗಳಿದ್ದರೆ ಅದನ್ನು ಪರಿಶೀಲಿಸಲು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿರುವ ಪ್ರತ್ಯೇಕ ನಗರಾಭಿವೃದ್ಧಿ ಕೋಶವೇ ನಿರ್ವಹಿಸುವ ಅಧಿಕಾರನ್ನು ಸರಕಾರ ನೀಡಿದೆ. ಆದರೆ ಪುತ್ತೂರು ನಗರ ಸಭೆಗೆ ಸಹಾಯಕ ಕಮೀಷನರ್‌ರನ್ನು ಉಸ್ತುವಾರಿಯಾಗಿ ನೇಮಿಸಿರುವುದು ಕಾನೂನು ವಿರೋಧಿ ಕ್ರಮವಾಗಿದ್ದು, ಚುನಾಯಿತ ಆಡಳಿತ ಮಂಡಳಿ ಇರುವಾಗ ಉಸ್ತುವಾರಿ ಆಧಿಕಾರಿಯನ್ನು ನೇಮಿಸುವಂತಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇಂಥ ಕ್ರಮ ಒಪ್ಪಲಾಗದು. ಹಾಗಾಗಿ ಜಿಲ್ಲಾಧಿಕಾರಿಗಳ ಈ ಕ್ರಮವನ್ನು ಉಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದೇನೆ ಎಂದು ರಿಟ್ ಅರ್ಜಿ ಸಲ್ಲಿಸಿರುವ ನಗರ ಸಭಾ ಸದಸ್ಯ ಹರೀಶ್ ನಾಯ್ಕಿ ತಿಳಿಸಿದ್ದಾರೆ.







