ಪ್ರಥಮ ಪ್ರಯತ್ನದಲ್ಲೇ ಸಿಎ ಪರೀಕ್ಷೆಯಲ್ಲಿ ಉತ್ತೀರ್ಣಗೊಂಡ ಸಿರಾಜುದ್ದೀನ್
ಸಿಎ ಪರೀಕ್ಷೆ ರ್ಯಾಂಕ್ ಹೋಲ್ಡರ್‌ಗಳಿಗೆ ಸೀಮಿತವಾಗಿಲ್ಲ: ಸಿರಾಜುದ್ದೀನ್

ಮಂಗಳೂರು, ಫೆ. 27: ಪದವಿಯಲ್ಲಿ ರ್ಯಾಂಕ್ ಗಳಿಸಿದವರು ಅಥವಾ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾದವರು ಮಾತ್ರ ಚಾರ್ಟರ್ಡ್ ಅಕೌಂಟೆಂಟ್ (ಸಿಎ) ಪರೀಕ್ಷೆ ಬರೆಯಲು ಅರ್ಹರಾಗಿದ್ದಾರೆ ಎಂಬ ಆತಂಕ ವಿದ್ಯಾರ್ಥಿಗಳಲ್ಲಿದ್ದು, ಸಾಮಾನ್ಯ ದರ್ಜೆಯಲ್ಲಿ ಉತ್ತೀರ್ಣರಾಗುವ ಪದವಿ ವಿದ್ಯಾರ್ಥಿಗಳು ಕೂಡ ಕಠಿಣ ಪರಿಶ್ರಮ ಮತ್ತು ವಿಶ್ವಾಸದೊಂದಿಗೆ ಪರೀಕ್ಷೆಯಲ್ಲಿ ಯಶಸ್ಸು ಕಾಣಲು ಸಾಧ್ಯವಿದೆ ಎಂದು ಪ್ರಥಮ ಪ್ರಯತ್ನದಲ್ಲೇ ಸಿಎ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವ ಸಿರಾಜುದ್ದೀನ್ (23) ಅಭಿಪ್ರಾಯಪಟ್ಟಿದ್ದಾರೆ.
‘ವಾರ್ತಾಭಾರತಿ’ಯೊಂದಿಗೆ ಮಾತನಾಡಿದ ಅವರು, ಸಿಎ ಪರೀಕ್ಷೆಯಲ್ಲಿ ಕೇವಲ ಶೇ.4ರಿಂದ 5ರಷ್ಟು ಫಲಿತಾಂಶ ಬರುವುದರಿಂದ ಇಂತಹ ಪರೀಕ್ಷೆ ಬರೆಯಲು ವಿದ್ಯಾರ್ಥಿಗಳಲ್ಲಿ ಆತಂಕ ಮೂಡುವುದು ಸಹಜ. ರ್ಯಾಂಕ್ ಗಳಿಸಿದವರು ಕೂಡಾ ಸಿಎ ಪರೀಕ್ಷೆಯಲ್ಲಿ ಅನುತ್ತೀರ್ಣರಾಗಿದ್ದಾರೆ. ರ್ಯಾಂಕ್ ಗಳಿಸದೇ ಸಿಎ ಪರೀಕ್ಷೆ ಬರೆದು ಉತ್ತೀರ್ಣರಾದವರೂ ಇದ್ದಾರೆ. ಆದ್ದರಿಂದ ಇಂತಹ ಕ್ಲ್ಲಿಷ್ಟಕರ ಪರೀಕ್ಷೆಯನ್ನು ಎದುರಿಸುವಾಗ ಛಲ, ಆಸಕ್ತಿ ಮತ್ತು ಕಠಿಣ ಪರಿಶ್ರಮ ಅಗತ್ಯವಾಗಿದೆ ಎಂದು ಎಡಪದವು ನಿವಾಸಿ ಪಿ.ಎಂ.ಇಸ್ಮಾಯೀಲ್ ಮತ್ತು ಸಕೀನಾ ದಂಪತಿಯ ಪುತ್ರ ಸಿರಾಜುದ್ದೀನ್ ಸಲಹೆ ನೀಡಿದ್ದಾರೆ.
‘ಎಸೆಸೆಲ್ಸಿಯಲ್ಲಿ ಶೇ.94 ಅಂಕಗಳೊಂದಿಗೆ ಉತ್ತೀರ್ಣರಾಗಿರುವ ನಾನು ವಿಜ್ಞಾನ ವಿಷಯವನ್ನು ಆಯ್ಕೆ ಮಾಡಿ ಪಿಯುಸಿಯಲ್ಲಿ ಶೇ.84 ಅಂಕಗಳನ್ನು ಪಡೆದಿದ್ದೇನೆ. ಎಸೆಸೆಲ್ಸಿಯಲ್ಲಿ ಉತ್ತಮ ಫಲಿತಾಂಶ ಬಂದಿದ್ದರಿಂದ ಮೆಡಿಕಲ್ ಮಾಡುವಂತೆ ಮನೆಯಲ್ಲಿ ಒತ್ತಾಯ ಮಾಡಿದ್ದರು. ಆದರೆ ಮೆಡಿಕಲ್, ಎಂಜನಿಯರಿಂಗ್ ನನಗೆ ಇಷ್ಟವಿರಲಿಲ್ಲ. ಎಂಬಿಬಿಎಸ್‌ಗಾಗಿ ಸಿಇಟಿ ಪರೀಕ್ಷೆ ಬರೆದಿದ್ದೆ. ಕೇವಲ ಒಂದು ಅಂಕ ಕಡಿಮೆ ಬಂದು ಅವಕಾಶ ಕಳೆದುಕೊಂಡೆ. ಅನಂತರ ಸಿಎ ಪರೀಕ್ಷೆ ಬರೆಯಬೇಕೆಂಬ ಹಂಬಲ ಉಂಟಾಯಿತು. ಆದರೆ ದ್ವಿತೀಯ ಪಿಯುಸಿ ಆಗಿರುವುದರಿಂದ ಸಿಪಿಟಿ ಪ್ರವೇಶ ಪರೀಕ್ಷೆ ಬರೆಯುವುದು ಅನಿವಾರ್ಯವಾಗಿತ್ತು. ಅದರಂತೆ ಸಿಪಿಟಿ ಪರೀಕ್ಷೆ ಬರೆದು ಸಿಎಗಾಗಿ ಇಂಟರ್ನ್‌ಶಿಪ್ ಮಾಡಿದೆ. ಇಂಟರ್ನ್‌ಶಿಪ್‌ನ ಎರಡೂವರೆ ವರ್ಷಗಳಲ್ಲಿ ಸಿಎ ಪರೀಕ್ಷೆ ಬರೆದ ಪ್ರಥಮ ಪ್ರಯತ್ನದಲ್ಲೇ ಉತ್ತೀರ್ಣನಾದೆ. ಇದು ನನ್ನ ಪಾಲಿಗೆ ಅನಿರೀಕ್ಷಿತವಾಗಿತ್ತು’ ಎಂದರು.
ಚಾರ್ಟರ್ಡ್ ಅಕೌಂಟೆಂಟ್ ಪರೀಕ್ಷೆ ಬರೆಯುವ ಆಸಕ್ತಿ ಇರುವ ವಿದ್ಯಾರ್ಥಿಗಳಿಗೆ ಸಲಹೆ ಸೂಚನೆಗಳನ್ನು ನೀಡುತ್ತೇನೆ. ವಿದ್ಯಾರ್ಥಿಗಳು ಬಯಸಿದರೆ ಪರೀಕ್ಷೆಗಳನ್ನು ಎದುರಿಸುವ ವಿಧಾನ ಮತ್ತು ಪೂರ್ವ ಸಿದ್ಧತೆಯ ಬಗ್ಗೆ ಅವರಿಗೆ ಮನವರಿಕೆ ಮಾಡುತ್ತೇನೆ. ವಿದ್ಯಾರ್ಥಿಗಳು ತಮ್ಮ ಪ್ರಯತ್ನದಲ್ಲಿ ಮುಂದುವರಿದು ಯಶಸ್ಸು ಕಾಣಲೆಂದು ಹಾರೈಸುತ್ತೇನೆ ಎಂದು ಸಿರಾಜುದ್ದೀನ್ ಹೇಳಿದರು.
ಚಾರ್ಟರ್ಡ್ ಅಕೌಂಟೆಂಟ್ ಸಿರಾಜುದ್ದೀನ್‌ಗೆ ಸನ್ಮಾನ:
ಎಡಪದವಿನ ಐಡಿಯಲ್ ಆಂಗ್ಲ ಮಾಧ್ಯಮ ಶಾಲೆಯ ಮೂಲಕ ಅತ್ಯಂತ ಕಿರಿಯ ಹರೆಯದಲ್ಲಿ ಪ್ರಥಮ ಪ್ರಯತ್ನದಲ್ಲೇ ಚಾರ್ಟರ್ಡ್ ಅಕೌಂಟೆಂಟ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವ ಶಾಲೆಯ ಹಳೆ ವಿದ್ಯಾರ್ಥಿ ಸಿರಾಜುದ್ದೀನ್‌ರಿಗೆ ಇಂದು ಶಾಲಾ ವಠಾರದಲ್ಲಿ ಅಭಿನಂದನೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಮಾಜಿ ಉನ್ನತ ಶಿಕ್ಷಣ ಸಚಿವ ಹಾಜಿ ಬಿ.ಎ.ಮೊಹಿದೀನ್, ಶೈಕ್ಷಣಿಕ ಅಸಮಾನತೆಯಿಂದಾಗಿ ಇಂದು ಶಿಕ್ಷಣವು ಉಳ್ಳವರ ಪಾಲಾಗುತ್ತಿರುವುದು ವಿಷಾದನೀಯ ಎಂದರು.
ಸಮಾಜಕ್ಕಾಗಿ ಬದುಕುವ ಹಾಗೂ ಸಮಾಜಕ್ಕೆ ಸೇವೆ ನೀಡುವ ಮನೋಭಾವವನ್ನು ಬೆಳೆಸಿಕೊಳ್ಳಬೇಕು. ಆಗ ಮಾತ್ರ ನಮ್ಮ ಜೀವನ ಸಾರ್ಥಕ ಎನಿಸಬಹುದು. ಸಮಾಜದಲ್ಲಿ ಐಕ್ಯತೆ ಇಲ್ಲದಿದ್ದರೆ ಅಲ್ಲಿ ಬಿರುಕು ಉಂಟಾಗುತ್ತದೆ. ಪರಿಣಾಮವಾಗಿ ಹಿಂಸೆ, ಅನ್ಯಾಯ ಮತ್ತು ಅರಾಜಕತೆಗಳು ತಾಂಡವವಾಗುತ್ತವೆ. ಆದ್ದರಿಂದ ಐಕ್ಯತೆ ಮತ್ತು ಸೌಹಾರ್ದದ ಬದುಕಿಗೆ ಪ್ರತಿಯೊಬ್ಬರೂ ಗಮನಹರಿಸಬೇಕೆಂದು ಮೊಹಿದೀನ್ ಕರೆ ನೀಡಿದರು.
ಮಕ್ಕಳ ಪಾಲನೆಯಲ್ಲಿ ಹೆತ್ತವರ ಪಾತ್ರ ಮಹತ್ತರವಾಗಿದ್ದು, ಅದರಲ್ಲೂ ಮಕ್ಕಳ ಮೇಲೆ ತಾಯಿಯ ಜವಾಬ್ದಾರಿ ಹೆಚ್ಚಿರುತ್ತದೆ. ಮಕ್ಕಳನ್ನು ಸುಸಂಸ್ಕೃತನಾಗಿ ಬೆಳೆಸುವುದರ ಜೊತೆಗೆ ಶೈಕ್ಷಣಿಕ ಮತ್ತು ಸಾಮಾಜಿಕ ಬದುಕಿನಲ್ಲೂ ಅವರ ಮೇಲೆ ನಿಗಾ ಇಡುವುದು ಹೆತ್ತವರ ಕರ್ತವ್ಯವಾಗಿದೆ ಎಂದು ಅವರು ಹೇಳಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಸಿರಾಜುದ್ದೀನ್, ನನ್ನ ಸಾಧನೆಗೆ ನನ್ನ ಹೆತ್ತವರೇ ಪ್ರೇರಣೆಯಾಗಿದ್ದು, ಅವರ ಆಶೀರ್ವಾದ ಮತು ದೇವರ ಅನುಗ್ರಹದಿಂದ ಈ ಮಟ್ಟಕ್ಕೇರಲು ಸಾಧ್ಯವಾಗಿದೆ ಎಂದರು.
ಚಾರ್ಟರ್ಡ್ ಅಕೌಂಟೆಂಟ್, ಎಂಜನಿಯರ್, ಡಾಕ್ಟರ್ಸ್ ಮೊದಲಾದ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಹೆತ್ತವರು ಮಕ್ಕಳ ಮೇಲೆ ಒತ್ತಡ ಹೇರದೆ, ಅವರಿಗೆ ಆಸಕ್ತಿ ಇರುವ ವಿಷಯಗಳಲ್ಲಿ ಅವರ ನಿರ್ಧಾರವನ್ನೂ ಗಣನೆಗೆ ತೆಗೆದುಕೊಳ್ಳುವಂತಾಗಬೇಕು. ಇದು ಮಕ್ಕಳ ಭವಿಷ್ಯವನ್ನು ರೂಪಿಸುವಲ್ಲಿ ಸಹಕಾರಿಯಾದೀತು ಎಂದು ಅಭಿಪ್ರಾಯಪಟ್ಟರು. ವೇದಿಕೆಯಲ್ಲಿ ಮಾರೂಫ್ ಎಜುಕೇಶನ್ ಟ್ರಸ್ಟ್‌ನ ಅಧ್ಯಕ್ಷ ಹಾಗೂ ಐಡಿಯಲ್ ಆಂಗ್ಲ ಮಾಧ್ಯಮ ಶಾಲೆಯ ಸಂಚಾಲಕ ವೈ.ಮುಹಮ್ಮದ್ ಬ್ಯಾರಿ, ಮಖ್ಯ ಶಿಕ್ಷಕಿ ನಂದಾ ಉಮಾಪ್ರಿಯ ಗಡಿಯಾರ್, ಮ್ಯಾನೇಜರ್ ಫ್ಲೋಸ್ಸಿ ತಾವ್ರೊ, ಸಹ ಅಧ್ಯಾಪಕ ಫೆಲಿಕ್ಸ್ ಸಿಕ್ವೇರ ಹಾಗೂ ಅಬ್ದುಲ್ ಶಕೂರ್ ಉಪಸ್ಥಿತರಿದ್ದರು.







