ಕೃಷಿ ಕ್ಷೇತ್ರದಲ್ಲಿ ಚೀನಾಕ್ಕಿಂತ ಭಾರತ ಹಿಂದುಳಿದಿದೆ: ಪ್ರೊ.ಎಂ.ಮಹದೇವಪ್ಪ
ಮಂಗಳೂರು ವಿವಿಯಲ್ಲಿ ವಿಜ್ಞಾನ ದಿನಾಚರಣೆ

ಮಂಗಳೂರು ವಿವಿಯಲ್ಲಿ ಶನಿವಾರ ನಡೆದ ವಿಜ್ಞಾನ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರೊ.ಮಹದೇವಪ್ಪ ಮಾತನಾಡಿದರು.
ಕೊಣಾಜೆ: ಶೇ. 65% ಗ್ರಾಮೀಣ ಕೃಷಿಪ್ರದೇಶವನ್ನು ಒಳಗೊಂಡಿರುವ ದೇಶದಲ್ಲಿ ವೈವಿಧ್ಯಮಯ ಬೆಳೆಗಳು ಮತ್ತು ಆಹಾರ ಆಸ್ತಿಯಾಗಿತ್ತು. ಆದರೆ ಚೀನಾ ಕೃಷಿ ಕ್ಷೇತ್ರದಲ್ಲಿ ಬೆಳೆದುನಿಂತ ರೀತಿಯಲ್ಲಿ ಭಾರತ ಬಹಳ ಹಿಂದುಳಿದಿದೆ. ಇಸ್ರೇಲ್ ಕೂಡಾ ವ್ಯವಸ್ಥಿತವಾಗಿ ಕೃಷಿಯನ್ನು ನಡೆಸುತ್ತಿರುವುದರಿಂದ ಜಗತ್ತಿನಲ್ಲೇ ಉತ್ತಮ ಸ್ಥಾನವನ್ನು ಗಳಿಸಿದೆ. ಜಗತ್ತಿನಾದ್ಯಂತ 25 ಕೋಟಿ ಜನ ಹಸಿವೆ ಮತ್ತು ಅಪೌಷ್ಟಿಕತೆ ಬಲಿಯಾಗುತ್ತಿದ್ದಾರೆ. ಗರ್ಭಿಣಿ ಸ್ತ್ರೀಯರು ಅನೇಕ ದುಷ್ಪರಿಣಾಮಗಳನ್ನು ಎದುರಿಸುತ್ತಿದ್ದಾರೆ. ಆದರೂ ದೇಶದಲ್ಲಿ ಕೃಷಿಗೆ ಹೆಚ್ಚಿನ ಒಲವು ತೋರಿಸಲಾಗುತ್ತಿಲ್ಲ. ಕೃಷಿಗೆ ಪ್ರೋತ್ಸಾಹಿಸಬೇಕಾದ ಸಾರ್ವಜನಿಕ ಸಂಸ್ಥೆಗಳು ನಿಷ್ಕ್ರಿಯವಾಗಿದ್ದು, ಸರಕಾರ ಬಹುರಾಷ್ಟ್ರೀಯ ಕಂಪೆನಿಗಳಿಗೆ ಮಾತ್ರ ಹೆಚ್ಚಿನ ಒತ್ತು ನೀಡುತ್ತಿದೆ. ಮಾಧ್ಯಮಗಳು ಕೂಡಾ ಕೃಷಿ ಸಂಬಂಧಿ ವಿಚಾರಗಳಿಗೆ ಹೆಚ್ಚಿನ ಮಹತ್ವ ನೀಡುತ್ತಿಲ್ಲ ಎಂದು ಪದ್ಮಭೂಷಣ ಪುರಸ್ಕೃತ ಮೈಸೂರು ಕೃಷಿವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಪ್ರೊ.ಎಂ.ಮಹದೇವಪ್ಪ ಖೇದ ವ್ಯಕ್ತಪಡಿಸಿದರು.
ಅವರು ಮಂಗಳೂರು ವಿಶ್ವವಿದ್ಯಾನಿಲಯದ ಮಂಗಳ ಸಭಾಂಗಣದಲ್ಲಿ ಶನಿವಾರ ಆಯೋಜಿಸಲಾದ ವಿಜ್ಞಾನ ದಿನಾಚರಣೆ-2016ರ ಪ್ರಯುಕ್ತ ‘ ಜಿ.ಎಂ ಟೆಕ್ನಾಲಜಿ - ಪ್ರೆಸೆಂಟ್ ಸ್ಟೇಟಸ್, ಸ್ಕೋಪ್ ಫಾರ್ ಫುಡ್ ಆಂಡ್ ನ್ಯೂಟ್ರಿಷನಲ್ ಸೆಕ್ಯುರಿಟಿ’ ಕುರಿತ ವಿಚಾರಸಂಕಿರಣ ಮತ್ತು ವಿದ್ಯಾರ್ಥಿಗಳ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ದೇಶದಲ್ಲಿ ವ್ಯಾಪಕ ಕೃಷಿಯೋಗ್ಯ ಭೂಮಿ, ವೈವಿಧ್ಯಮಯ ಕೃಷಿ ಹವಾಮಾನ ವಲಯಗಳು, ಸಮೃದ್ಧ ಜೀವ ವೈವಿಧ್ಯತೆಗಳು ಇವೆ. ಧರ್ಮಕ್ಕಿಂತ ಹೆಚ್ಚು ದೇಶದ ಆಸ್ತಿಯಾಗಿರುವ ಕೃಷಿ ದೊಡ್ಡ ಸಾಂಪ್ರದಾಯಿಕ ಮತ್ತು ಆಧುನಿಕ ತಂತ್ರಜ್ಞಾನವನ್ನು ಹೊಂದಿದೆ ಪ್ರಗತಿಯ ಹೊರತಾಗಿಯೂ ಕೃಷಿಯಲ್ಲಿ ಅಗಾಧ ಒತ್ತಡಗಳಿದ್ದು, ಹೊಸ ಸವಾಲುಗಳನ್ನು ಎದುರಿಸಿ ಸುಧಾರಿತ ತಳಿಶಾಸ್ತ್ರವನ್ನು ಸುಧಾರಿತ ನೀರಾವರಿ ಜತೆಗೆ ಉತ್ತಮ ನಿರ್ವಹಣೆ ಕೌಶಲ್ಯದ ಅಸ್ತಿತ್ವದಲ್ಲಿರುವ ಕೃಷಿ ಭೂಮಿಯಲ್ಲಿ ನಡೆಸುವ ಅಗತ್ಯವಿದೆ ಎಂದು ಹೇಳಿದರು.
ಮಾನವ ಜನಸಂಖ್ಯೆ ಬೆಳೆಯುತ್ತಿದ್ದರೂ ಅವರಿಗೆ ತಕ್ಕುದಾದ ಬೆಳೆ ಬೆಳೆಸಲಾಗುತ್ತಿಲ್ಲ. ಬೆಳೆಗಳನ್ನು ರಫ್ತು ಮಾಡುತ್ತಿದ್ದ ದೇಶ ಇದೀಗ ಆಮದು ಮಾಡುವ ಸ್ಥಿತಿಯತ್ತ ಬಂದು ತಲುಪಿದೆ. ಇದು ಕೃಷಿಯೋಗ್ಯ ಭೂಮಿ ಲಭ್ಯವಿರದೆ, ಕುಸಿಯುತ್ತಿರುವ ಮಣ್ಣಿನ ಫಲವತ್ತತೆ, ಅನಿರೀಕ್ಷಿತ ಮುಂಗಾರು, ನೀರಿನ ಗಂಭೀರ ಸಮಸ್ಯೆ, ಪ್ರವಾಹ , ಕೃಷಿ ಕಾರ್ಮಿಕರ ಕೊರತೆಯಿಂದ ಆಗಿದೆ. ಮುಂದಿನ ದಿನಗಳಲ್ಲಿ ವಿ.ವಿಗಳು ಕೃಷಿ ಕುರಿತ ಲೇಖನಗಳನ್ನು ಪ್ರಕಟಿಸಿ ಸರಕಾರದ ಗಮನಹರಿಸಿ ಗುಣಮಟ್ಟದ ಕೃಷಿಯೋಗ್ಯ ಚಟುವಟಿಕೆಗಳಿಗೆ ಗಮನಹರಿಸುವಂತೆ ಗಮನಸೆಳೆಯಬೇಕಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಕೆ.ಬೈರಪ್ಪ ಅವರು ವಹಿಸಿದ್ದರು.
ವಿಶ್ವವಿದ್ಯಾನಿಲಯದ ಕುಲಸಚಿವ ಟಿ.ಡಿ.ಕೆಂಪರಾಜು ಸ್ವಾಗತಿಸಿದರು. ಕಾರ್ಯಕ್ರಮದ ಸಂಘಟಕ ವಿಜ್ಞಾನ ನಿಕಾಯದ ಪ್ರೊ.ಚಂದ್ರಶೇಖರ್ ವಂದಿಸಿದರು.







