Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಬೇಕು: ಪ್ರತ್ಯೇಕ ವಿಜ್ಜಾನ ವಾಹಿನಿ

ಬೇಕು: ಪ್ರತ್ಯೇಕ ವಿಜ್ಜಾನ ವಾಹಿನಿ

ವಾರ್ತಾಭಾರತಿವಾರ್ತಾಭಾರತಿ27 Feb 2016 11:18 PM IST
share
ಬೇಕು: ಪ್ರತ್ಯೇಕ ವಿಜ್ಜಾನ  ವಾಹಿನಿ

ಬೆಳಕು-ಕಿಟಕಿ ಜಾಲಂಧ್ರದಿಂದ ಇಬ್ಬನಿ ಹನಿ ಸಮೇತ ಹರಿದುಬಂದ ಸೂರ್ಯನ ಮರಿಕಿರಣವೊಂದು ನನ್ನ ಮೇಜಿನ ಮೇಲೆ ಚದರಿ ಚೆಲ್ಲಾಟವಾಡುತ್ತಿತ್ತು. ಚೆಲ್ಲಿದ ಹಾಲಿನಂತೆ ಸುತ್ತಲೂ ಚೆಲ್ಲಾಪಿಲ್ಲಿಯಾಗಿ ಹರಡಿದ ಆ ಬೆಳಕಿನಾಟ: ‘ರಾಮನ್ ಪರಿಣಾಮ’

ಏನಿದು ರಾಮನ್ ಪರಿಣಾಮ?
ಇವತ್ತಿಗೆ 88 ವರ್ಷಗಳ ಹಿಂದೆ, ಭಾರತದ ಪ್ರಪ್ರಥಮ ನೊಬೆಲ್ ಪ್ರಶಸ್ತಿ ವಿಜೇತ ವಿಜ್ಞಾನಿ ಸರ್. ಸಿ.ವಿ.ರಾಮನ್, ದ್ರವಗಳ ಮೂಲಕ ಚದುರಿದ ಬೆಳಕಿನ ರೋಹಿತವನ್ನು ಶೋಧಿಸಿದರು. ಈ ಸಂಶೋಧನೆಯೇ, ಮುಂದೆ ‘ರಾಮನ್ ಎಫೆಕ್ಟ್’ ಎಂದು ಜಗದ್ವಿಖ್ಯಾತವಾಯಿತು.‘ರಾಮನ್ ಎಫೆೆಕ್ಟ್’ನ ಪದಶ: ಕನ್ನಡ ಅನುವಾದ ‘ರಾಮನ್ ಪರಿಣಾಮ’.
ರಾಮನ್ ಪರಿಣಾಮ ಎಂದರೆ, ರೋಹಿತೀಯ ವಿಶ್ಲೇಷಣೆಯಲ್ಲಿ ಬಳಸುವ ಮಾಧ್ಯಮದ ಮೂಲಕ ಹಾದು ಹೋಗುವ ರಶ್ಮಿ ಚದುರುವಾಗ ಆಗುವ ಆವೃತ್ತಿಯ ವ್ಯತ್ಯಯ ಎನ್ನುತ್ತಾರೆ ನಿಘಂಟುಕಾರರು.
ಬೆಂಜೀನ್, ಕಾರ್ಬನ್ ಟೆಟ್ರಾಕ್ಲೋರೈಡ್‌ನಂತಹ ದ್ರವಗಳ ಮೂಲಕ ಏಕ ವರ್ಣೀಯ ಬೆಳಕನ್ನು ಹಾಯಿಸಿ, ಚದುರಿದ ಬೆಳಕನ್ನು ರೋಹಿತ ಮಾಪನದ ಮೂಲಕ ವೀಕ್ಷಿಸಿದಾಗ ದ್ರವದ ಮೂಲಕ ಚದುರಿದ ಏಕವರ್ಣೀಯ ಬೆಳಕಿನಮೂಲ ರೋಹಿತ ರೇಖೆಯ ಜೊತೆಗೆ ಬೇರೆ ಆವೃತ್ತಿಗಳಿರುವ ಹೊಸ ರೇಖೆಗಳು ಕಂಡುಬಂದವು. ಈ ಹೊಸ ರೇಖೆಗಳು ಮೂಲ ರೇಖೆಯ ಎರಡೂ ಬದಿಗಳಲ್ಲಿ ಸಮದೂರದಲ್ಲಿದ್ದವು. ಹೀಗೆ ಮಾಧ್ಯಮವೊಂದರಿಂದ ಚದುರಿದ ಬೆಳಕಿನಲ್ಲಿ ಮೂಲಬೆಳಕಿನ ಆವೃತ್ತಿಗಿಂತ ಹೆಚ್ಚು ಮತ್ತು ಕಡಿಮೆ ಆವೃತಿಗಳ ರೇಖೆಗಳು ನಿಶ್ಚಿತ ರೀತಿಯಲ್ಲಿ ಕಂಡುಬರುವುದೇ ರಾಮನ್ ಎಫೆೆಕ್ಟ್ ಅಥವಾ ಪರಿಣಾಮ ಎಂದು ವಿಶ್ವ ಕೋಶ ಹೇಳುತ್ತದೆ.
 ಸರಳವಾಗಿ ಹೇಳುವುದಾದರೆ, ಸೂರ್ಯ ರಶ್ಮಿಯೊಂದು ದ್ರವದಲ್ಲಿನ ಅಣುಗಳಿಂದ ದಾರಿ ತಪ್ಪಿಸಲ್ಪಟ್ಟಾಗ ಬೆಳಕಿನ ತರಂಗಾಂತರದಲ್ಲಿ ಆಗುವ ಬದಲಾವಣೆಯನ್ನೇ ರಾಮನ್ ಕಂಡುಹಿಡಿದದ್ದು. ಇಂತಹ ಬದಲಾವಣೆಯಿಂದಾಗಿ ಚದುರಿಹೋದ ಬೆಳಕನ್ನೇ ‘ರಾಮನ್ ರೋಹಿತ’ ಎಂದು ಕರೆಯಲಾಗುತ್ತಿದೆ.
ರಾಮನ್ ರೋಹಿತದಲ್ಲಿ ಮೂಲ ರೇಖೆಗಿಂತ ಕಡಿಮೆ ಆವೃತ್ತಿಯ ರೇಖೆಗಳನ್ನು ‘ಸೋಕ್ಸ್ ರೇಖೆಗಳು’ ಎಂದು ಕರೆಯಲಾಗುತ್ತದೆ. ಮೂಲ ರೋಹಿತ ರೇಖೆಯ ಆವೃತ್ತಿ ಮತ್ತು ಚದುರಿದ ಬೆಳಕಿನ ರೇಖೆಯ ಆವೃತ್ತಿ ಇವುಗಳ ನಡುವಣ ಅಂತರವನ್ನು ‘ರಾಮನ್ ಪಲ್ಲಟ’ ಎಂದು ಕರೆಯಲಾಗುತ್ತದೆ. ದ್ರವಗಳಲ್ಲಿ ಮಾತ್ರವಲ್ಲದೆ ಘನವಸ್ತುಗಳು ಮತ್ತು ಅನಿಲಗಳ ಮೂಲಕ ಬೆಳಕು ಚದುರಿದಾಗಲೂ ರಾಮನ್ ಪರಿಣಾಮ ಕಂಡುಬರುತ್ತದೆ.
ಘನ, ದ್ರವ ಮತ್ತು ಅನಿಲಗಳಲ್ಲಿ ಅಣವಿನ ಸಂರಚನೆಯನ್ನು ಅರಿಯಲು ರಾಮನ್ ಪರಿಣಾಮ ಸಹಕಾರಿಯಾಗಿದೆ. ಕಡು ತೀವ್ರತೆಯ ಏಕವರ್ಣೀಯ ಲೇಸರ್ ಆಕರಗಳನ್ನು ಬಳಸಿ ರಾಮನ್ ಪರಿಣಾಮದಿಂದ ಅನೇಕಾನೇಕ ಅಣುಗಳ ಸಂರಚನೆಯನ್ನು, ವೈಲಕ್ಷಣ್ಯಗಳನ್ನು ವಿಶ್ಲೇಷಿಸುವುದು ಸಾಧ್ಯವಾಗಿದೆ.
1980ರಿಂದೀಚೆಗೆ ಸುಧಾರಿತ ಸಾಧನ ತಂತ್ರಜ್ಞಾನಗಳಿಂದಾಗಿ ರಾಮನ್ ಎಫೆಕ್ಟ್ ಶೋಧದ ಹಲವಾರು ಪ್ರಯೋಜನಗಳು ಕಂಡು ಬಂದಿವೆ. ಕಿಂಚಿತ್ ಪ್ರಮಾಣದಲ್ಲಿರಬಹುದಾದ ರಾಸಾಯನಿಕ ಮತ್ತು ಜೈವಿಕ ಅಣುಗಳನ್ನು ಪತ್ತೆಹಚ್ಚುವ ಸಾಮರ್ಥ್ಯ ರಾಮನ್ ಎಫೆಕ್ಟಿಗಿದೆ. ಈ ಸಾಮರ್ಥ್ಯದ ಪ್ರಯೋಜನ ಪಡೆದುಕೊಂಡು ಕ್ಯಾನ್ಸರ್, ಮಲೇರಿಯಾ ಎಚ್.ಐ.ವಿ ಮೊದಲಾದ ರೋಗಗಳಿಗೆ ಚಿಕಿತ್ಸೆ ನೀಡಬಹುದಾಗಿದೆ. ಪರಮಾಣು ತ್ಯಾಜ್ಯಗಳ ವಿಶ್ಲೇಷಣೆಯಲ್ಲೂ ಇದು ಪ್ರಯೋಜನಕಾರಿಯಾಗಿದೆ ಎನ್ನುತ್ತಾರೆ ತಜ್ಞರು. ಈಚಿನ ದಿನಗಳಲ್ಲಿ ಖಗೋಳ ವಿಜ್ಞಾನ ಕ್ಷೇತ್ರದಲ್ಲೂ ರಾಮನ್ ಎಫೆಕ್ಟ್ ಪ್ರಮುಖ ಪಾತ್ರ ನಿರ್ವಹಿಸುತ್ತಿದೆ. ಅನ್ಯ ಗ್ರಹಗಳ ಅನಿಲಾವರಣ-ವಾತಾವರಣಗಳ ಭೌತಿಕ ವ್ಯವಸ್ಥೆ-ವಿನ್ಯಾಸಗಳನ್ನು ಅರಿತುಕೊಳ್ಳುವ ಕಾರ್ಯದಲ್ಲಿ ‘ರಾಮನ್ ರೋಹಿತ’ವನ್ನು ಬಳಸಲಾಗುತ್ತಿದೆ. ರಾಮನ್ ರೋಹಿತ ದರ್ಶಕದಿಂದ ಜೈವಿಕ ಮತ್ತು ಅಜೈವಿಕ ದ್ರವ್ಯಗಳಲ್ಲಿನ ವೈಶಿಷ್ಟ್ಯ-ವೈಲಕ್ಷಣ್ಯಗಳನ್ನು ತಿಳಿಯುವುದು ಸಾಧ್ಯವಾದ್ದರಿಂದ ಸೌರವ್ಯೆಹದಾಚೆ ಇರಬಹುದಾದ ಜೀವಚೈತನ್ಯಗಳ ಅನ್ವೇಷಣೆಯಲ್ಲಿ ತೊಡಗಿರುವ ಅಂತರಗ್ರಹ ಯಾನಗಳಲ್ಲೂ ಇದು ಮಹತ್ವದ ಪಾತ್ರ ವಹಿಸಬಲ್ಲದೆಂದು ವಿಜ್ಞಾನಿಗಳ ನಿರೀಕ್ಷೆ. ಭವಿಷ್ಯದಲ್ಲಿ ಅಮೆರಿಕದ ವೈಮಾನಿಕ ಮತ್ತು ಬಾಹ್ಯಾಕಾಶ ವಿಜ್ಞಾನ ಸಂಸ್ಥೆ ಕೈಗೊಳ್ಳಲಿರುವ ಗುರು ಮತ್ತು ಮಂಗಳ ಗ್ರಹ ಯಾನಗಳಲ್ಲಿ ರಾಮನ್ ರೋಹಿತ ದರ್ಶಕಗಳನ್ನು ಅಳವಡಿಸಲಾಗುವುದೆಂದು ವರದಿಯಾಗಿದೆ. ಸಣ್ಣ ಆಕಾರದ ರಾಮನ್ ರೋಹಿತ ದರ್ಶಕಗಳನ್ನು ಗುರು-ಮಂಗಳ ಗ್ರಹಯಾನ ನೌಕೆಗಳಲ್ಲಿ ಅಳವಡಿಸುವುದರಿಂದ ಈ ಗ್ರಹಗಳಲ್ಲಿನ ಕ್ಲೋರೊಫಿಲ್, ಅಮೀನೊ ಆಮ್ಲ, ಸೈನೊಬ್ಯಾಕ್ಟೀರಿಯ ಮೊದಲಾದ ಜೈವಿಕ ಸಂಯುಕ್ತಗಳನ್ನು ಪತ್ತೆಹಚ್ಚಬಹುದೆಂದು ವಿಜ್ಞಾನಿಗಳ ಅಂಬೋಣ,
ಗುರು ಗ್ರಹದ ಮುಖ್ಯ ಉಪಗ್ರಹವಾದ ಯೂರೋಪಾ ಗ್ರಹಯಾನದಲ್ಲಿ ಅಲ್ಲಿನ ಉಷ್ಣಾಂಶ, ಆಮ್ಲತೆಗಳನ್ನು ತಿಳಿಯಲು ಅಮೆರಿಕ ಬಾಹ್ಯಾಕಾಶ ವಿಜ್ಞಾನ ಸಂಸ್ಥೆ ರಾಮನ್ ರೋಹಿತಗಳನ್ನು ಬಳಸಲು ನಿರ್ಧರಿಸಿದೆಯಂತೆ. ಹೀಗೆ ರಾಮನ್ ಸಂಶೋಧನೆ ಬಲು ಉಪಯುಕ್ತವೆನಿಸಿದ್ದು ವಿಜ್ಞಾನಪ್ರಪಂಚಕ್ಕೆ ರಾಮನ್ ಅವರ ಕೊಡುಗೆ ಮಹತ್ವಪೂರ್ಣವಾದುದಾಗಿದೆ.
1888ರಲ್ಲಿ ಜನಿಸಿದ ಚಂದ್ರಶೇಖರ ವೆಂಕಟ ರಾಮನ್ 1907ರಲ್ಲಿ ಕೊಲ್ಕತ್ತಯಲ್ಲಿ ಸಿವಿಲ್ ಅಧಿಕಾರಿಯಾಗಿ ವೃತ್ತಿಜೀವನ ಆರಂಭಿಸಿದರು. ಭೌತ ವಿಜ್ಞಾನ ರಾಮನ ಅವರ ಗಾಢ ಅನುರಕ್ತಿಯ ವಿಷಯವಾಗಿತ್ತು. 1917ರಲ್ಲಿ ಕಲ್ಕತ್ತೆ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರಾಗಿ ನೇಮಕಗೊಂಡ ಅವರು 15 ವರ್ಷಗಳಕಾಲ ಅಲ್ಲಿ ಭೌತ ವಿಜ್ಞಾನದಲ್ಲಿ ಸಂಶೋಧನೆ ಮತ್ತು ಪ್ರಯೋಗಗಳನ್ನು ಅವ್ಯಾಹತವಾಗಿ ನಡೆಸಿದರು. 1934 ರಿಂದ 1948ರ ವರೆಗೆ ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್‌ನ ನಿರ್ದೇಶಕರಾಗಿದ್ದರು. 1949ರಿಂದ ಮರಣಕಾಲದವರೆಗೆ(1970) ರಾಮನ್ ರಿಸರ್ಚ್ ಇನ್‌ಸ್ಟಿಟ್ಯೂಟಿನ ನಿರ್ದೇಶಕರಾಗಿದ್ದರು.

1930ರಲ್ಲಿ ನೊಬೆಲ್ ಪ್ರಶಸ್ತಿ ರಾಮನ್ ಅವರನ್ನು ಅರಸಿ ಬಂತು. 1998ರಲ್ಲಿ ಅಮೆರಿಕನ್ ಕೆಮಿಕಲ್ ಸೊಸೈಟಿ ಅವರ ವಿಶ್ವವಿಖ್ಯಾತ ‘ರಾಮನ್ ಎಫೆಕ್ಟ್’ನ್ನು ರಾಸಾಯನಿಕ ಶಾಸ್ತ್ರದ ಇತಿಹಾಸದಲ್ಲಿ ಒಂದು ರಾಷ್ಟೀಯ ಪರ್ವವೆಂದು ಮಾನ್ಯ ಮಾಡಿತು. ಮುಂದೆ ಇದೇ ಸಂಸ್ಥೆ 2013ರಲ್ಲಿ ರಾಮನ್ ಎಪೆಕ್ಟನ್ನು ಅಂತಾರಾಷ್ಟ್ರೀಯ ಯುಗ ಪ್ರವರ್ತಕ ಘಟನೆ ಎಂದು ಘೋಷಿಸಿತು. ‘ರಾಮನ್ ಎಫೆಕ್ಟ್’ ಅನ್ವೇಷಣೆಯ ನೆನಪಿಗಾಗಿ ಪ್ರತಿವರ್ಷ ಫೆೆ.28ರಂದು ನಾವು ರಾಷ್ಟ್ರೀಯ ವಿಜ್ಞಾನ ದಿನವನ್ನು ಆಚರಿಸುತ್ತಿದ್ದೇವೆ. ವಿಜ್ಞಾನ ಪ್ರಪಂಚದಲ್ಲಿ ಪ್ರಾತ: ಸ್ಮರಣೀಯರಾದ ರಾಮನ್ ಅವರಂಥ ಮಹಾನುಭಾವರ ಸ್ಮರಣೆ ಕೇವಲ ಒಂದು ಶುಷ್ಕ ವಾರ್ಷಿಕ ತಿಥಿಯಾಗಬಾರದು. ಮಾನವ ಕುಲದ ಏಳಿಗೆಗಾಗಿ ಜೀವಮಾನ ಮುಡುಪಿಟ್ಟ ಇಂತಹ ಮಹನೀಯರು ಮಾಡಿದ ಸಾಧನೆಗಳನ್ನು ಸ್ಮರಿಸುವುದರ ಜೊತೆಗೆ ಅವರ ಸಂಶೋಧನೆ-ಸಾಧನೆಗಳನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳುವುದು, ಆ ದಿಸೆಯಲ್ಲಿ ಮತ್ತಷ್ಟು ಕೆಲಸಮಾಡಿ ಅವುಗಳಿಗೆ ಹೊಸ ಆಯಾಮಗಳನ್ನು ಮೂಡಿಸುವುದು ಅತ್ಯಗತ್ಯ. ಹಾಗಾದಾಗಲೆ ಸಾಧಕರ ಸ್ಮರಣೆ ಅರ್ಥಪೂರ್ಣವಾಗುವುದು.
ರಾಷ್ಟ್ರೀಯ ವಿಜ್ಞಾನ ದಿನದಂದು ನಾವು ಏನು ಮಾಡುತ್ತೇವೆ?
 ಪ್ರತಿವರ್ಷ ರಾಷ್ಟ್ರೀಯ ವಿಜ್ಞಾನ ದಿನದ ಆಚರಣೆಗೆ ಈ ಕೆಳಗಿನ ರೂಪುರೇಖೆಗಳನ್ನು ವಿನ್ಯಾಸಗೊಳಿಸಲಾಗಿದೆ:
1. ವಿಜ್ಞಾನದ ಬೆಳವಣಿಗೆಗಾಗಿ ಹೊಸ ತಂತ್ರಜ್ಞಾನಗಳ ಅನುಷ್ಠಾನದ ಸಂದೇಶವನ್ನು ವ್ಯಾಪಕವಾಗಿ ಪ್ರಚುರ ಪಡಿಸುವುದು.
2. ವೈಜ್ಞಾನಿಕ ಮನೋಭಾವ ಬೆಳೆಸುವುದು.
3. ರಾಷ್ಟ್ರದಲ್ಲಿನ ವೈಜ್ಞಾನಿಕ ಮನೋಭಾವದ ಜನರಿಗೆ ಆ ನಿಟ್ಟಿನಲ್ಲಿ ಮುಂದುವರಿಯಲು ಅವಕಾಶಗಳನ್ನು ಕಲ್ಪಿಸುವುದು.
4. ವಿಜ್ಞಾನ ಮತ್ತು ತಂತ್ರಜ್ಞಾನಗಳನ್ನು ಜನಾದರಣೀಯಗೊಳಿಸುವುದು.
ಜನತೆಯಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸಬೇಕು ಎನ್ನುವ ಮಾತು ನಮ್ಮ ಸಂವಿಧಾನದಲ್ಲೇ ಇದೆ. ನಮ್ಮ ಸಂವಿಧಾನದ 4-ಎ ಭಾಗದಲ್ಲಿ ಪ್ರಜೆಗಳ ಮೂಲಭೂತ ಕರ್ತವ್ಯಗಳನ್ನು ನಿರೂಪಿಸಲಾಗಿದ್ದು, ವೈಜ್ಞಾನಿಕ ಮನೋಭಾವ, ಮಾನವೀಯತೆ ಹಾಗೂ, ಕೇಳುವ, ಕೇಳಿ ತಿಳಿದುಕೊಳ್ಳುವ ಮತ್ತು ಸುಧಾರಣೆ ಹೊಂದುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಹೇಳಲಾಗಿದೆ.
ವೈಜ್ಞಾನಿಕ ಮನೋಭಾವದೊಂದಿಗೆ ಸಹಿಷ್ಣುತೆ ಮತ್ತು ಸುಧಾರಣೆಯ ಕರ್ತವ್ಯಗಳನ್ನೂ ಬೋಧಿಸುವ ಈ ವಿಧಿ ನಮ್ಮಲ್ಲಿ ಪ್ರತಿಯೊಬ್ಬರ ಬದುಕಿನಲ್ಲ್ಲೂ ಅಳವಡಿಸಿಕೊಳ್ಳಲೇ ಬೇಕಾದದ್ದು. ಇದನ್ನೆಲ್ಲ ನಾವು ಪಾಲಿಸಿತ್ತಿದ್ದೇವೆಯೇ ಎಂಬುದು ಕೋಟಿ ರೂಪಾಯಿಯ ಪ್ರಶ್ನೆ.

ವಿಕಸನಶೀಲ ಸಮಾಜವೊಂದರ ವಿಕಸನಗತಿಯನ್ನು ಪ್ರಮಾಣಿಸಿ ನೋಡಲು ಅದು ವಿಜ್ಞಾನವನ್ನು, ವಿಜ್ಞಾನಿಗಳನ್ನು ಹೇಗೆ ಪರಿಭಾವಿಸುತ್ತದೆ, ಹೇಗೆ ನಡೆಸಿಕೊಳ್ಳುತ್ತದೆ ಎಂಬುದಕ್ಕಿಂತ ಮಿಗಿಲಾದ ಮತ್ತೊಂದು ಮಾನದಂಡವಿರಲಾರದು. ಈ ಮಾನದಂಡದಿಂದ ನೋಡಿದರೆ ನಮ್ಮ ದೇಶ ಏರುಗತಿಗಿಂತ ಇಳಿಮುಖವಾಗಿ ಪ್ರಪಾತದತ್ತ ಜಾರುತ್ತಿರುವುದೇ ಹೆಚ್ಚು ಢಾಳಾಗಿ ಕಾಣಿಸುತ್ತದೆ. ಇಪ್ಪತ್ತೊಂದನೆಯ ಈ ಶತಮಾನದಲ್ಲೂ ನಾವು ಪ್ರತಿನಿರ್ಧಾರಕ್ಕ್ಕೆ ಮುನ್ನ ಮನುಸ್ಮತಿ ಏನು ಹೇಳುತ್ತದೆ? ಜ್ಯೋತಿಷಿಗಳು ಏನು ಹೇಳುತ್ತಾರೆ ಎಂದು ಯೋಚಿಸುತ್ತೇವೆ. ಬೆಕ್ಕು ಅಡ್ಡ ಬಂದರೆ ಮಹತ್ವದ ಕೆಲಸವನ್ನು ಮರೆತು ಮನೆಗೆ ವಾಪಸಾಗುತ್ತೇವೆ. ಮಡಿ-ಮೈಲಿಗೆ, ಮುಟ್ಟು-ಚಟ್ಟು ಎಂದು ಮನೆಗಳಲ್ಲ್ಲಿ, ದೇವಸ್ಥಾನಗಳಲ್ಲಿ ಅಸ್ಪಶ್ಯತೆ ಆಚರಿಸುತ್ತೇವೆ. ಹಸಿದ ಸಹಸ್ರಾರು ಹೊಟ್ಟೆಗಳನ್ನು ಮರೆತು ಯಾಗಯಜ್ಞಗಳಲ್ಲಿ ಅನ್ನ, ಪಾಯಸ, ತುಪ್ಪ, ಕೊಬ್ಬರಿ ಗಿಟಕು, ಹಣ್ಣುಹಂಪಲು, ಸೀರೆಖಣಗಳು ಇತ್ಯಾದಿಗಳನ್ನು ಅಗ್ನಿಗೆ ಅರ್ಪಿಸುತ್ತೇವೆ. ಜನಪ್ರಿಯ ಸಂವಹನ ಮಾಧ್ಯಮಗಳಾದ ಸಿನೆಮಾ, ದೂರದರ್ಶನಗಳಲ್ಲಿ ಜ್ಯೋತಿಷ್ಯವನ್ನು ವೈಭವೀಕರಿಸುತ್ತೇವೆ. ಸಂಜೆಯ ಧಾರಾವಾಹಿಗಳಲ್ಲಿ ವಾಸ್ತವವನ್ನು ಮರೆಮಾಚಿ ಭವ್ಯ ಕನಸುಗಳನ್ನು, ರೋಮಾಂಚಕ ಅಪರಾಧಗಳನ್ನು ಉಣಬಡಿಸುತ್ತೇವೆ, ಮೂಢನಂಬಿಕೆಗಳನ್ನು ಬಿತ್ತುತ್ತೇವೆ. ಆಧುನಿಕ ವಿಚಾರಗಳಿಗೆ ವೇದಿಕೆಯಾಗಬೇಕಾದ ವಿಜ್ಞಾನ ಸಮ್ಮೇಳನಗಳಲ್ಲಿ ಓಬೀರಾಯನಕಾಲದ ಅವೈಜ್ಞಾನಿಕ ವಿಷಯಗಳನ್ನು ಮಂಡಿಸಿ ನಗೆಪಾಟಲಿಗೆ ಗುರಿಯಾಗುತ್ತೇವೆ. ಸುಶಿಕ್ಷಿತರೂ ದೈನಂದಿನ ಸಮಸ್ಯೆ, ಕಷ್ಟಕೋಟಲೆಗಳಿಗೆ ಮಿಥ್ಯಾ ಶಾಸ್ತ್ರಗಳತ್ತ, ದೇವಮಾನವರತ್ತ ಧಾವಿಸುತ್ತಾರೆ. ವಿಚಾರವಾದಿಗಳನ್ನು ನಾಸ್ತಿಕರು, ಧರ್ಮಲಂಡರು ಎಂದು ಜರಿಯುತ್ತೇವೆ. ಇಂತಹ ಪರಿಸ್ಥಿತಿಯಲ್ಲಿ ವೈಜ್ಞಾನಿಕ ಮನೋಭಾವ ಬೆಳೆಯುವುದಾದರೂ ಎಂತು? ಧಾರ್ಮಿಕ ಅಂಧಾಶ್ರದ್ಧೆ ಮೂಢನಂಬಿಕೆಗಳು, ಅರ್ಥಹೀನ ಸಂಪ್ರದಾಯಗಳನ್ನು ಮೀರಿದ ವಿವೇಕ, ವಿಚಾರವಂತಿಕೆ ಮತ್ತು ಆಧುನಿಕ ಆಲೋಚನೆಗಳನ್ನು ಪ್ರತಿಪಾದಿಸುತ್ತಿದ್ದ ರಾಜಾರಾಮ್ ಮೋಹನರಾಯ್, ನೆಹರೂ ಅವರಂತಹ ರಾಜಕೀಯ ಮುತ್ಸದ್ದಿಗಳ ಕೊರತೆಯೂ ವೈಜ್ಞಾನಿಕ ಚಿಂತನೆ ಮನೋಭಾವ ಕ್ಷಯಿಸುತ್ತಿರಲು ಕಾರಣವಿದ್ದೀತು.
ಕೈತುಂಬ ರೊಕ್ಕ ಕೊಡುವ ತಂತ್ರಜ್ಞಾನ ವಿಜ್ಞಾನಕ್ಕಿಂತ ಮಿಗಿಲಾದುದು ಎನ್ನುವ ನವ ಮಧ್ಯಮವರ್ಗದ ಆಸೆಬುರುಕುತನದಿಂದಾಗಿ ಪರಿಸ್ಥಿತಿ ಮತ್ತಷ್ಟು ಜಟಿಲಗೊಂಡಿದೆ. ಇಂತಹ ಸ್ಥಿತಿಯಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸುವ ಕೆಲಸವನ್ನು ಯಾರು ಮಾಡಬೇಕು?
ಭಾಷಣ-ಉಪನ್ಯಾಸಗಳಿಂದ ಇದು ಸಾಧ್ಯವಾದೀತು ಎನ್ನುವುದು ಭ್ರಮೆಯಷ್ಟೆ. ಮನರಂಜನೆಯ ಜೊತೆಜೊತೆಯಲ್ಲೆ ವೈಜ್ಞಾನಿಕತೆ ಮತ್ತು ಆಧುನಿಕ ಚಿಂತನೆಗಳನ್ನು ಬಿತ್ತರಿಸುವ, ಬೋಧಿಸುವ ಕೆಲಸವನ್ನು ವಿದ್ಯುನ್ಮಾನ ಮಾಧ್ಯಮಗಳು ಮಾಡಬೇಕು. ಆರ್‌ಪಿಟಿ ಹೆಚ್ಚಿಸಿಕೊಳ್ಳುವ ದೊಂಬರಾಟದಲ್ಲಿರುವ ಖಾಸಗಿ ವಾಹಿನಿಗಳಿಂದ ಇದನ್ನು ನಿರೀಕ್ಷಿಸಲಾದೀತೇ? ಪ್ರಸಾರ ಭಾರತಿಯೇ ಮಾಡಬೇಕು. ಎಂದೇ ವಿಜ್ಞಾನ-ತಂತ್ರಜ್ಞಾನಗಳಿಗೇ ಮೀಸಲಾದ ಪ್ರತ್ಯೇಕ ದೂರದರ್ಶನ ವಾಹಿನಿಯೊಂದನ್ನು ಸ್ಥಾಪಿಸುವ ಅಗತ್ಯವಿದೆಯೆಂದು ಖ್ಯಾತ ಚಲನಚಿತ್ರ ನಿರ್ದೇಶಕ ಶ್ಯಾಂ ಬೆನಗಲ್ ಅವರು ನೀಡಿರುವ ಸಲಹೆ ಸ್ವಾಗತಾರ್ಹವಾದುದು. ವಿಜ್ಞಾನ, ತಂತ್ರಜ್ಞಾನ, ಪರಿಸರ, ಆರೋಗ್ಯ, ನೈರ್ಮಲ್ಯಗಳಿಗೆ ಮೀಸಲಾದ ವಾಹಿನಿಯಿಂದ ಜನರಲ್ಲಿ ವೈಜ್ಞಾನಿಕ ಮನೋಭಾವ ಮತ್ತು ಆಧುನಿಕ ವೈಚಾರಿಕತೆ ಬೆಳೆಸಲು ಸಾಧ್ಯವಾಗುತ್ತದೆ ಎನ್ನುವ ಮಾತಿನಲ್ಲಿ ತಥ್ಯವಿದೆ. ಇಂತಹದೊಂದು ವಿಜ್ಞಾನ ವಾಹಿನಿ ರಾಮನ್ ಅವರಿಗೆ ದೇಶ ಸಲ್ಲಿಸಬಹುದಾದ ದೊಡ್ಡ ಗೌರವವಾದೀತು, ಕೃತಜ್ಞತಾಪೂರ್ವಕವಾದ ನಿಜವಾದ ಸ್ಮಾರಕವಾದೀತು. ಕನ್ನಡಿಗರೇ ಆದ ಪ್ರಸಾರ ಭಾರತಿಯ ಅಧ್ಯಕ್ಷ ಸೂರ್ಯಪ್ರಕಾಶರಿಗೆ ಇದು ಕೇಳಿಸೀತೆ?
ಭರತ ವಾಕ್ಯ:
ವಿಜ್ಞಾನವೆಂದರೆ ಸುಜ್ಞಾನ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X