ಶ್ರೀಮಂತರಿಗಾಗಿ ಬಡವರ ಸಬ್ಸಿಡಿಗೆ ಕತ್ತರಿ

ಕಳೆದ ಕೆಲವು ವರ್ಷಗಳಲ್ಲಿ ಭಾರತವು ಸಹಾಯಧನಗಳ ಮೇಲೆ ಮಾಡುವ ವೆಚ್ಚವು ಒಟ್ಟಾರೆ ದೇಶೀಯ ಉತ್ಪನ್ನದ ಶೇಕಡಾವಾರುವಿನಂತೆ ಕಡಿಮೆಯಾಗುತ್ತಾ ಸಾಗಿದೆ. ಇದಕ್ಕೆ ಪ್ರಧಾನಿ ನರೇಂದ್ರ ಮೋದಿಯವರೂ ಟೀಕೆಗೊಳಗಾಗಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸುತ್ತಾ ಮೋದಿ, ಇದು ಬಡವರಿಗೆ ಸವಲತ್ತನ್ನು ದೊರಕದೆ ಇರುವಂತೆ ಮಾಡುವ ಪಿತೂರಿಯಲ್ಲ. ಬದಲಿಗೆ ಅದರ ನಿಜವಾದ ಅಗತ್ಯವುಳ್ಳವರಿಗೆ ಸಹಾಯಧನ ತಲುಪುವಂತೆ ಮಾಡಲು ಸರಕಾರದ ಗುರಿಯನ್ನು ಉತ್ತಮಗೊಳಿಸುವ ಕ್ರಮ ಎಂದು ಹೇಳಿಕೊಂಡಿದ್ದರು. ಮತ್ತು ಅವರು ಹಾಗೆ ಹೇಳಿರುವುದರಲ್ಲಿ ನಿಜಾಂಶವಿರಬಹುದು.
ಶುಕ್ರವಾರದಂದು ಸಂಸತ್‌ನಲ್ಲಿ ಒಪ್ಪಿಸಲಾದ ಆರ್ಥಿಕ ಸಮೀಕ್ಷೆಯು, ನೆರವು ಪಡೆಯಲು ಅರ್ಹರಾದವರನ್ನು ಗುರುತಿಸುವಲ್ಲಿ ಎಡವಿದ ಕಾರಣದಿಂದ ಒಟ್ಟಾರೆ ಸಹಾಯಧನದಲ್ಲಿ ಒಂದು ಲಕ್ಷ ಕೋಟಿ ರೂ.ಉಳ್ಳವರಿಗೆ ಅಸಮಾನವಾಗಿ ಹಂಚಿಕೆಯಾಗಿದೆ ಎಂಬ ಅಂಶವನ್ನು ಬಹಿರಂಗಪಡಿಸಿತ್ತು. ಈ ಹೊರೆಯು ಕೇವಲ ಆರು ಪ್ರಮುಖ ಸರಕುಗಳಿಗೆ ನೀಡಲಾಗುವ ಸಹಾಯಧನದಿಂದ ಉಂಟಾಗುತ್ತದೆ, ಅವುಗಳೆಂದರೆ ಬಂಗಾರ, ಅಡುಗೆ ಅನಿಲ, ಸೀಮೆ ಎಣ್ಣೆ, ವಿದ್ಯುತ್, ರೈಲ್ವೆ ದರ, ವಾಯುಯಾನ ಮತ್ತು ಟರ್ಬೈನ್ ಇಂಧನ. ಸಮೀಕ್ಷೆ ಸೂಚಿಸುವಂತೆ ಶ್ರೀಮಂತರಿಗೆ ಈ ಆರು ಸರಕುಗಳ ಮೂಲಕ ನೀಡಲಾಗುವ ಸಹಾಯಧನವು ರೂ. 91,000 ಕೋಟಿಯಾಗಿದೆ ಮತ್ತು ಅದನ್ನು ಕಡೆಗಣಿಸಲಾಗಿದೆ. ಸಹಾಯಧನದ ರೂಪದಲ್ಲಿ ನೀಡಲಾಗುವ ಮೊತ್ತವು ರೂ. 91,350 ಕೋಟಿಗಿಂತ ಕಡಿಮೆಯಿಲ್ಲ, ಆದರೆ ಇದು ಶ್ರೀಮಂತರು ಈ ಸರಕುಗಳನ್ನು ಬಳಸುವ ಪ್ರಮಾಣವನ್ನು ಕೀಳಂದಾಜು ಮಾಡಿದ ಕಾರಣ ಅವರಿಗೆ ನೀಡಲಾಗುವ ನಿಜವಾದ ಸಹಾಯಧನದ ಕೇವಲ ಅಂದಾಜು ಅಷ್ಟೇ ಎಂದು ಪತ್ರಿಕಾ ಬಿಡುಗಡೆಯಲ್ಲಿ ತಿಳಿಸಲಾಗಿತ್ತು. ನಾವು ಕೇವಲ ಸಾರ್ವಜನಿಕ ಭವಿಷ್ಯ ನಿಧಿ (ಪಿಪಿಎಫ್)ನಲ್ಲಿ ಒಳಗೊಂಡಿರುವಂಥಾ ಸಹಾಯಧನವನ್ನು ಲೆಕ್ಕಹಾಕಿದರೆ ಸೌಲಭ್ಯವಂತರಿಗೆ ನೀಡುವ ಸಹಾಯಧನವು ಒಂದು ಲಕ್ಷ ಕೋಟಿ ರೂ.ಮೀರುತ್ತದೆ.
ಆರ್ಥಿಕ ಸಮೀಕ್ಷೆಯ ಪ್ರಕಾರ, ಪ್ರಸಕ್ತ ವರ್ಷದಲ್ಲಿ ಪ್ರಮುಖ ಸರಕುಗಳ ಮೇಲಿನ ಭಾರತದ ಸಹಾಯಧನ ಮೊತ್ತವು 2.5 ಲಕ್ಷ ಕೋಟಿ ರೂ.ಗೆ ಏರುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ. ಹಾಗಾಗಿ ಈ ಪ್ರಮುಖ ಸರಕುಗಳ ಮೇಲಿನ ಸಹಾಯಧನದಲ್ಲಿ ಶೇ.40 ನಿಜವಾಗಿ ಸಹಾಯಧನದ ಅಗತ್ಯವಿಲ್ಲದ ಶ್ರೀಮಂತರಿಗೆ ಸೋರಿಕೆಯಾಗಿ ಹೋಗುತ್ತಿದೆ. ವಿತ್ತ ಸಚಿವಾಲಯವು ಈ ಸಮೀಕ್ಷೆಯಲ್ಲಿ, ಸಹಾಯ ಧನದ ತಪ್ಪಾದ ಹಂಚಿಕೆಯು ಸಾರ್ವಜನಿಕ ಹಂಚಿಕೆ ವ್ಯವಸ್ಥೆಯಲ್ಲಿ ಸಂಪೂರ್ಣ ಸೋರಿಕೆಗೆ ಕಾರಣವಾಗಿದ್ದು ಅದನ್ನು ಆಹಾರ ಭದ್ರತಾ ಮಸೂದೆ ಮುಂತಾದ ಕ್ರಮಗಳನ್ನು ಪರಿಚಯಿಸುವ ಮೊದಲು ಸರಿಪಡಿಸುವ ಅಗತ್ಯವಿದೆ ಎಂಬ ಅಂಶದ ಮೇಲೆ ಬೆಳಕು ಚೆಲ್ಲಿತ್ತು. ಸಾರ್ವಜನಿಕ ಹಂಚಿಕೆ ವ್ಯವಸ್ಥೆಯಲ್ಲಿನ ಸೋರಿಕೆ ಶೇ.40ರಿಂದ 50ರವರೆಗೆ ಇರುವುದರಿಂದ ಭಾರತ ಸರಕಾರವು ಸಂಪೂರ್ಣ ಕಂಪ್ಯೂಟರೀಕರಣಗೊಳ್ಳದ, ಇತರರ ಪರಿಶೀಲನೆಗಾಗಿ ಫಲಾನುಭವಿಗಳ ಪಟ್ಟಿಯನ್ನು ಅಂತರ್ಜಾಲದಲ್ಲಿ ಹಾಕದ ಮತ್ತು ಸಾರ್ವಜನಿಕ ಹಂಚಿಕೆ ವ್ಯವಸ್ಥೆಯಲ್ಲಿನ ಸಣ್ಣ ಪ್ರಮಾಣದ ಕಳವನ್ನು ತಡೆಯಲು ಜಾಗೃತ ಸಮಿತಿಯನ್ನು ರಚಿಸದ ರಾಜ್ಯಗಳಲ್ಲಿ ಆಹಾರ ಭದ್ರತಾ ಮಸೂದೆಯನ್ನು ಪರಿಚಯಿಸುವಲ್ಲಿ ವಿಳಂಬ ಮಾಡಬೇಕು ಎಂದು ಸಮೀಕ್ಷೆ ಸೂಚಿಸುತ್ತದೆ. ಈ ಸಹಾಯಧನಗಳು ತಪ್ಪಾದ ಕಡೆಗೆ ಹೋಗುತ್ತಿರುವುದರಿಂದ ಸರಕಾರದ ಯೋಜನೆಗಳ ವಿಶ್ವಾಸಾರ್ಹತೆಗೆ ಧಕ್ಕೆಯುಂಟಾಗುವ ಕಾರಣ ರಾಜಕೀಯ ಅಡ್ಡಪರಿಣಾಮಗಳನ್ನೂ ಎದುರಿಸಬೇಕಾಗುತ್ತದೆ ಎಂದು ಸಮೀಕ್ಷೆ ತಿಳಿಸುತ್ತದೆ. ಸರಕಾರದ ಖಜಾನೆಯಿಂದ ಗಣನೀಯ ಪ್ರಮಾಣದ ಸೋರಿಕೆಯನ್ನು ಇದು ಸೂಚಿಸುತ್ತದೆ ಮತ್ತು ಇದರಿಂದಾಗಿ ನಿಜವಾಗಿಯೂ ಅರ್ಹರಿಗೆ ನೆರವಾಗುವ ಅವಕಾಶವನ್ನು ಕಳೆದುಕೊಂಡಾಗುತ್ತದೆ ಎಂದು ಸಮೀಕ್ಷೆ ಹೇಳುತ್ತದೆ. ಈ ಮಧ್ಯಸ್ಥಿಕೆಗಳಿಗೆ ಸ್ಪಂದಿಸುವುದು ಮತ್ತು ವೈಪರಿತ್ಯಗಳನ್ನು ಸರಿಪಡಿಸುವುದು ಕೇವಲ ಆರ್ಥಿಕ ಮತ್ತು ಹಿತರಕ್ಷಣಾ ದೃಷ್ಟಿಕೋನದಿಂದ ಮಾತ್ರವಲ್ಲ, ಆದರೆ ರಾಜಕೀಯ ಆರ್ಥಿಕ ಹಿತರಕ್ಷಣೆಯ ದೃಷ್ಟಿಯಿಂದಲೂ ಒಳ್ಳೆಯದು, ಆ ಮೂಲಕ ಇತರ ಮಾರುಕಟ್ಟೆ ಆಧಾರಿತ ಸುಧಾರಣೆಗಳಿಗೆ ವಿಶ್ವಾಸಾರ್ಹತೆ ದೊರಕುತ್ತದೆ.







