ನಿರಾಶ್ರಿತರಿಗೆ ಗಡಿಯನ್ನು ಮುಕ್ತಗೊಳಿಸಿ ವಿಶ್ವಸಂಸ್ಥೆ ಮುಖ್ಯಸ್ಥ ಕರೆ
ವಿಶ್ವಸಂಸ್ಥೆ, ಫೆ. 27: ಯುರೋಪ್‌ನತ್ತ ಧಾವಿಸುತ್ತಿರುವ ವಲಸಿಗರು ಮತ್ತು ನಿರಾಶ್ರಿತರಿಗೆ ಬಾಲ್ಕನ್ಸ್ ಮತ್ತು ಆಸ್ಟ್ರಿಯಗಳ ಗಡಿಗಳಲ್ಲಿ ನಿರ್ಬಂಧ ಒಡ್ಡಲಾಗುತ್ತಿರುವ ಬಗ್ಗೆ ವಿಶ್ವಸಂಸ್ಥೆಯ ಮಹಾಕಾರ್ಯದರ್ಶಿ ಬಾನ್ ಕಿ ಮೂನ್ ಶುಕ್ರವಾರ ಕಳವಳ ವ್ಯಕ್ತಪಡಿಸಿದ್ದಾರೆ ಹಾಗೂ ತಮ್ಮ ಗಡಿಗಳನ್ನು ವಲಸಿಗರಿಗೆ ತೆರೆದಿಡುವಂತೆ ಅವರು ಎಲ್ಲ ದೇಶಗಳನ್ನು ಒತ್ತಾಯಿಸಿದ್ದಾರೆ.
ಟರ್ಕಿಯಲ್ಲಿ 26 ಲಕ್ಷಕ್ಕೂ ಅಧಿಕ ನಿರಾಶ್ರಿತರು ಆಶ್ರಯ ಪಡೆದಿದ್ದಾರೆ ಹಾಗೂ ಟರ್ಕಿಯಿಂದ ಗ್ರೀಸ್‌ನತ್ತ ಸಾಗುತ್ತಿರುವ ವಲಸಿಗರ ಪ್ರವಾಹ ಹಾಗೆಯೇ ಮುಂದುವರಿದಿದೆ ಎಂದು ಬಾನ್‌ರ ವಕ್ತಾರ ಸ್ಟೀಫನ್ ಡುಜಾರಿಕ್ ಹೇಳಿದರು.
ಏಳು ಐರೋಪ್ಯ ದೇಶಗಳು ಶೆಂಝನ್ ಪಾಸ್‌ಪೋರ್ಟ್ ಮುಕ್ತ ವಲಯದಲ್ಲಿ ಗಡಿ ನಿಯಂತ್ರಣಗಳನ್ನು ಮತ್ತೆ ಜಾರಿಗೆ ತಂದಿವೆ. ಸಂಘರ್ಷಪೀಡಿತ ಸಿರಿಯ, ಇರಾಕ್, ಅಫ್ಘಾನಿಸ್ತಾನ ಮತ್ತು ಇತರ ದೇಶಗಳಿಂದ ಬರುವ ವಲಸಿಗರ ಪ್ರವಾಹವನ್ನು ನಿಯಂತ್ರಿಸಲು ಟರ್ಕಿಯೊಂದಿಗೆ ನಡೆಸಲಾದ ಒಪ್ಪಂದ ವಿಫಲವಾದರೆ, ಏಕಪಕ್ಷೀಯವಾಗಿ ಗಡಿ ನಿಯಂತ್ರಣಗಳನ್ನು ಹೇರುವುದಾಗಿ ಇತರ ದೇಶಗಳು ಹೇಳಿವೆ. ಗಡಿ ನಿಯಂತ್ರಣಗಳು ನಿರಾಶ್ರಿತರಿಗೆ ಸಂಬಂಧಿಸಿದ 1951ರ ವಿಶ್ವಸಂಸ್ಥೆ ಸನ್ನದಿಗೆ ಅನುಗುಣವಾಗಿಲ್ಲ ಎಂದು ಡುಜಾರಿಕ್ ಹೇಳಿದರು.ಆಸ್ಟ್ರಿಯ, ಸ್ಲೊವೇನಿಯ, ಕ್ರೊಯೇಶಿಯ, ಸರ್ಬಿಯ ಮತ್ತು ಮೆಸಡೋನಿಯಗಳಲ್ಲಿ ಗಡಿ ನಿರ್ಬಂಧಗಳು ಚಾಲ್ತಿಯಲ್ಲಿವೆ ಎಂದು ಅವರು ತಿಳಿಸಿದರು.





