ಮೊಕದ್ದಮೆ ರಾಜಿ ಇತ್ಯರ್ಥದಲ್ಲಿ ರಾಜ್ಯ ಪ್ರಥಮ: ನ್ಯಾ.ಮದನ್
ಬೆಂಗಳೂರು, ಫೆ.27: ನ್ಯಾಯಾಲಯಗಳು ಸೂಚಿಸುವ ಪ್ರಕರಣಗಳನ್ನು ‘ಮಧ್ಯಸ್ಥಿಕೆ ಕೇಂದ್ರ’ಗಳ ಮೂಲಕ ಇತ್ಯರ್ಥ ಮಾಡುವಲ್ಲಿ ಕರ್ನಾಟಕ ದೇಶದಲ್ಲಿಯೆ ಮೊದಲ ಸ್ಥಾನದಲ್ಲಿದೆ ಎಂದು ಸುಪ್ರೀಂ ಕೋರ್ಟ್ ನ್ಯಾ.ಮದನ್ ಬಿ.ಲೋಕೂರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಶನಿವಾರ ರಾಜ್ಯ ಕಾನೂನು ಸೇವಾ ಪ್ರಾಧಿಕಾರ ನಗರದ ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ ‘ಮಧ್ಯಸ್ಥಿಕೆದಾರರು ಎದುರಿಸುತ್ತಿರುವ ಸವಾಲುಗಳು’ ಕುರಿತ ಆಯೋಜಿಸಿದ್ದ ವಿಚಾರ ಸಂಕಿರಣದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಇಂದಿಗೂ ನ್ಯಾಯಾಲಯಗಳಲ್ಲಿ ಲಕ್ಷಾಂತರ ಪ್ರಕರಣಗಳು ಇತ್ಯರ್ಥವಾಗದೆ, ವಿಚಾರಣಾ ಹಂತದಲ್ಲಿವೆ. ಇದನ್ನು ಮನಗಂಡು ಕಳೆದ ಹತ್ತು ವರ್ಷದ ಹಿಂದೆ ‘ಮಧ್ಯಸ್ಥಿಕೆ ಕೇಂದ್ರ’ಗಳನ್ನು ಸ್ಥಾಪಿಸಲಾಯಿತು. ಕರ್ನಾಟಕದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ಮಧ್ಯಸ್ಥಿಕೆ ಕೇಂದ್ರವು ದೇಶಕ್ಕೆ ಮಾದರಿಯಾಗಿದೆ ಎಂದು ಅವರು ತಿಳಿಸಿದರು.
ಕರ್ನಾಟಕದಲ್ಲಿ ನೂರು ವಕೀಲರು ಮಧ್ಯಸ್ಥಿಕೆದಾರರಾಗಿ ತರಬೇತಿ ಹೊಂದಿದ್ದಾರೆ. ಸಿವಿಲ್ ಹಾಗೂ ಹೈಕೋರ್ಟ್‌ನ ನ್ಯಾಯಮೂರ್ತಿಗಳು ಸೂಚಿಸುವ ಪ್ರಕರಣಗಳನ್ನು ಮಧ್ಯಸ್ಥಿಕೆದಾರರು ಕೈಗೆತ್ತಿಕೊಳ್ಳಬಹುದು. ವಕೀಲ ವೃತ್ತಿಯಲ್ಲಿ 15 ವರ್ಷದ ಅನುಭವವಿರುವ ವಕೀಲರು ಮಧ್ಯಸ್ಥಿಕೆದಾರರಾಗಲು ತರಬೇತಿ ಪಡೆಯಬಹುದು ಎಂದು ನ್ಯಾ.ಮದನ್ ಬಿ.ಲೋಕೂರ್ ತಿಳಿಸಿದ್ದಾರೆ.
ಜನತೆಗೆ ಜಾಗೃತಿ ಅಗತ್ಯ: ನ್ಯಾಯಾಲಯ ಗಳಲ್ಲಿ ಸಾಮಾನ್ಯ ಪ್ರಕರಣಗಳ ಇತ್ಯರ್ಥಕ್ಕೆ 3ರಿಂದ 4ವರ್ಷ ಹಿಡಿಯುತ್ತದೆ. ಆದರೆ, ಅದೇ ಪ್ರಕರಣವನ್ನು ಕೇವಲ ಒಂದರಿಂದ ಎರಡು ತಿಂಗಳಲ್ಲಿ ಇತ್ಯರ್ಥ ಪಡಿಸಿರುವ ಅನೇಕ ಉದಾಹರಣೆಗಳು ಇವೆ. ಹೀಗಾಗಿ ಮಧ್ಯಸ್ಥಿಕೆ ಕೇಂದ್ರಗಳ ಕುರಿತು ಸರಿಯಾದ ತಿಳಿವಳಿಕೆ ಕೊಡುವ ಮೂಲಕ ಪ್ರಕರಣಗಳ ಶೀಘ್ರ ವಿಲೇವಾರಿಗೆ ಮಧ್ಯಸ್ಥಿಕೆದಾರರು ಹೆಚ್ಚಿನ ಶ್ರಮವಹಿಸಬೇಕೆಂದು ಅವರು ತಿಳಿಸಿದರು.
ಮಧ್ಯಸ್ಥಿಕೆ ಕೇಂದ್ರಗಳ ಮೂಲಕ ಪ್ರಕರಣಗಳನ್ನು ಇತ್ಯರ್ಥ ಪಡಿಸಿಕೊಳ್ಳು ವುದರಿಂದ ನ್ಯಾಯಾಲಯಕ್ಕೆ ಸಾಕಷ್ಟು ಸಮಯ ಉಳಿತಾಯವಾಗುತ್ತದೆ. ಹಾಗೂ ಪ್ರಕರಣ ದಾಖಲಿಸಿರುವ ವ್ಯಕ್ತಿಗಳು ನ್ಯಾಯಾಲಯಕ್ಕೆ ಅಲೆಯುವುದು, ವಕೀಲರಿಗೆ ಫೀಸ್ ಕಟ್ಟುವುದು ಸೇರಿದಂತೆ ಹಲವು ಸಮಸ್ಯೆಗಳಿಂದ ಮುಕ್ತವಾಗಬಹುದು ಎಂದು ಅವರು ತಿಳಿಸಿದರು.
ಮಧ್ಯಸ್ಥಿಕೆ ಕೇಂದ್ರಗಳ ಸ್ಥಾಪನೆಯಿಂದ ವಕೀಲರಿಗೆ ಕೆಲಸ ಇಲ್ಲವಾಗುತ್ತದೆ ಎಂಬ ತಪ್ಪು ಅಭಿಪ್ರಾಯವಿದೆ. ದೆಹಲಿಯಲ್ಲಿ ಕಳೆದ ಹಲವು ವರ್ಷಗಳಿಂದ ಒಂದು ಲಕ್ಷದ 25 ಸಾವಿರ ಪ್ರಕರಣಗಳನ್ನು ಮಧ್ಯಸ್ಥಿಕೆ ಮೂಲಕ ಇತ್ಯರ್ಥ ಪಡಿಸಲಾಗಿದೆ. ಆದರೆ, ಅಲ್ಲಿನ ನ್ಯಾಯಾಲಯಗಳಲ್ಲಿ ಇನ್ನೂ ಸಾಕಷ್ಟು ಪ್ರಕರಣಗಳು ಬಾಕಿಯಿವೆ. ಇದರಿಂದ ಅಲ್ಲಿನ ವಕೀಲರು ಮಧ್ಯಸ್ಥಿಕೆ ಕೇಂದ್ರದ ಕುರಿತು ಯಾವುದೆ ತಪ್ಪು ಅಭಿಪ್ರಾಯವನ್ನು ವ್ಯಕ್ತಪಡಿಸಿಲ್ಲ ಎಂದು ಅವರು ತಿಳಿಸಿದರು.
ವಿಚಾರ ಸಂಕಿರಣದಲ್ಲಿ ಕರ್ನಾಟಕ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಸುಬ್ರೋ ಕಮಲ್ ಮುಖರ್ಜಿ, ನ್ಯಾ.ಎನ್.ಕೆ.ಪಾಟೀಲ್ ಮೊದಲಾದವರು ಉಪಸ್ಥಿತರಿದ್ದರು.







