ರೈಲಿನಲ್ಲಿಯ ಹೊದಿಕೆಗಳಿಗೆ ಎರಡು ತಿಂಗಳಿಗೊಮ್ಮೆ ಒಗೆತದ ಭಾಗ್ಯ!
ರಾಜ್ಯಸಭೆಯಲ್ಲಿ ಸಚಿವರೇ ಒಪ್ಪಿಕೊಂಡ ಸತ್ಯ
ಹೊಸದಿಲ್ಲಿ,ಫೆ.27: ಭಾರತೀಯ ರೈಲುಗಳಲ್ಲಿ ಪ್ರಯಾಣಿಸುವಾಗ ಇಲಾಖೆಯು ಒದಗಿಸುವ ಹೊದಿಕೆಯನ್ನು ಎಂದಾದರೂ ಬಳಸಿದ್ದೀರಾ..? ಹಾಗೆ ಬಳಸಿದಾಗ ಗಬ್ಬು ನಾತ ಮೂಗಿಗೆ ಬಡಿದಿದ್ದರೆ ಅದಕ್ಕೆ ಕಾರಣವಿದೆ. ಈ ಹೊದಿಗೆಗಳನ್ನು ಎರಡು ತಿಂಗಳಿಗೆ ಒಮ್ಮೆ ಒಗೆದರೆ ಅದೇ ಭಾಗ್ಯ! ಸಹಾಯಕ ರೈಲ್ವೆ ಸಚಿವ ಮನೋಜ್ ಸಿನ್ಹಾ ಅವರೇ ಖುದ್ದಾಗಿ ಈ ಸತ್ಯವನ್ನು ರಾಜ್ಯಸಭೆಯಲ್ಲಿ ಒಪ್ಪಿಕೊಂಡಿದ್ದಾರೆ.
ಇದ್ದುದರಲ್ಲಿ ಸಮಾಧಾನದ ವಿಷಯವೆಂದರೆ ಬೆಡ್‌ಶೀಟ್‌ಗಳು,ಬೆಡ್‌ರೋಲ್‌ಗಳು ಮತ್ತು ತಲೆದಿಂಬುಗಳ ಹೊದಿಕೆಗಳನ್ನು ನಿತ್ಯವೂ ತೊಳೆಯಲಾಗುತ್ತದೆ. ಹೊದಿಕೆಗಳನ್ನು ಮಾತ್ರ ಎರಡು ತಿಂಗಳಿಗೊಮ್ಮೆ ತೊಳೆಯಲಾಗುತ್ತದೆ.
ರೈಲುಗಳಲ್ಲಿ ಒದಗಿಸಲಾಗುವ ಬೆಡ್‌ಶೀಟ್,ಹೊದಿಕೆ ಇತ್ಯಾದಿಗಳ ಗುಣಮಟ್ಟ ಮತ್ತು ಸ್ವಚ್ಛತೆಯ ಬಗ್ಗೆ ಶುಕ್ರವಾರ ರಾಜ್ಯಸಭೆಯಲ್ಲಿ ಸದಸ್ಯರ ಪ್ರಶ್ನೆಗಳಿಗೆ ಸಚಿವರು ಈ ಉತ್ತರವನ್ನು ನೀಡಿದ್ದಾರೆ.
ರೈಲು ಪ್ರಯಾಣಿಕರು ತಮ್ಮ ಮನೆಗಳಿಂದಲೇ ಬೆಡ್‌ಶೀಟ್, ಹೊದಿಕೆ,ತಲೆದಿಂಬುಗಳನ್ನು ತರುತ್ತಿದ್ದ ದಿನಗಳೇ ಉತ್ತಮವಾಗಿದ್ದುವೇನೋ ಎಂಬ ಸಭಾಪತಿ ಹಾಮಿದ್ ಅನ್ಸಾರಿಯವರ ಅಭಿಪ್ರಾಯಕ್ಕೆ ಸದಸ್ಯರೂ ಧ್ವನಿಗೂಡಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಿನ್ಹಾ,ಇದೊಂದು ಒಳ್ಳೆಯ ಸಲಹೆ ಮತ್ತು ಪ್ರಯಾಣಿಕರು ಹಿಂದಿನ ಪದ್ಧತಿಯನ್ನೇ ಅಳವಡಿಸಿಕೊಂಡರೆ ರೈಲ್ವೆಗೇನೂ ಸಮಸ್ಯೆಯಿಲ್ಲ ಎಂದರು.
ಭಾರತೀಯ ರೈಲ್ವೆಯು 41 ಯಾಂತ್ರೀಕೃತ ಲಾಂಡ್ರಿಗಳನ್ನು ಹೊಂದಿದ್ದು,ಮುಂದಿನ ಎರಡು ವರ್ಷಗಳಲ್ಲಿ ಕನಿಷ್ಠ 25 ಹೊಸ ಲಾಂಡ್ರಿಗಳನ್ನಾದರೂ ಹೊಂದಲು ಇಲಾಖೆಯು ಯೋಜಿಸಿದೆ. ಇದರಿಂದ ಬೆಡ್‌ಶೀಟ್ ಮತ್ತು ಹೊದಿಕೆಗಳನ್ನು ಬಳಸುವ ಸುಮಾರು ಶೇ.85ರಷ್ಟು ಪ್ರಯಾಣಿಕರ ಅಗತ್ಯಗಳನ್ನು ಪೂರೈಸಲು ಸಾಧ್ಯವಾಗುತ್ತದೆ ಎಂದ ಅವರು,ಯಾಂತ್ರೀಕೃತ ಲಾಂಡ್ರಿಗಳು ಇಲ್ಲದ ಪ್ರದೇಶಗಳಲ್ಲಿ ಹೊರಗುತ್ತಿಗೆ ನೀಡಲಾಗುತ್ತಿದೆ ಎಂದು ತಿಳಿಸಿದರು.





