ಅತ್ಯಾಚಾರವೆಸಗಿ ಬೆಂಕಿ ಹಚ್ಚಿದ ದುಷ್ಕರ್ಮಿಗಳು
ಗಾಝಿಪುರ,ಫೆ.27: ಇಲ್ಲಿಯ ಗಡಸೈಯಾ ಗ್ರಾಮದಲ್ಲಿ ಮಾನವ ಜನಾಂಗವೇ ತಲೆ ತಗ್ಗಿಸಬೇಕಾದ ಹೇಯ ಘಟನೆಯೊಂದು ನಡೆದಿದೆ. ಮೂವರು ದುಷ್ಕರ್ಮಿಗಳ ಗುಂಪೊಂದು 14ರ ಹರೆಯದ ದಲಿತ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ ಬಳಿಕ ಆಕೆಯ ಮೈಗೆ ಬೆಂಕಿ ಹಚ್ಚಿ ಕ್ರೌರ್ಯವನ್ನು ಮೆರೆದಿದ್ದಾರೆ. ಶೇ.80ರಷ್ಟು ಸುಟ್ಟ ಗಾಯಗಳಾಗಿರುವ ನತದೃಷ್ಟ ಬಾಲಕಿ ಈಗ ಆಸ್ಪತ್ರೆಯಲ್ಲಿ ಸಾವು ಬದುಕಿನ ಹೋರಾಟ ನಡೆಸುತ್ತಿದ್ದಾಳೆ.
ಶುಕ್ರವಾರ ಸಂಜೆ ಬಹಿರ್ದೆಸೆಗೆಂದು ಮನೆಯ ಸಮೀಪದ ಹೊಲಕ್ಕೆ ತೆರಳಿದ್ದ ಬಾಲಕಿಯ ಮೇಲೆ ಎರಗಿದ ಗುಂಪು ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರವನ್ನೆಸಗಿದೆ. ದುಷ್ಕರ್ಮಿಗಳು ಪರಾರಿಯಾಗುವ ಮುನ್ನ ಆಕೆಯ ಮೈಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ್ದರು.
ಸ್ಥಳೀಯರು ಆಕೆಯನ್ನು ರಕ್ಷಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಧಾವಿಸಿದ ಪೊಲೀಸರು ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಬಾಲಕಿಯ ಕುಟುಂಬವು ಸ್ಥಳೀಯರಾದ ಸೋನು ಯಾದವ್, ಪ್ರದೀಪ್ ಯಾದವ್‌ಮತ್ತು ಇನ್ನೋರ್ವ ವ್ಯಕ್ತಿಯ ವಿರುದ್ಧ ದೂರು ದಾಖಲಿಸಿದೆ ಎಂದು ಎಸ್‌ಪಿ ರಾಮ ಕಿಶೋರ ವರ್ಮಾ ತಿಳಿಸಿದ್ದಾರೆ.





