ಭಾರತದಲ್ಲಿ ಫುಟ್ಬಾಲ್ ಬೆಳವಣಿಗೆಯಾಗಬೇಕು: ಫಿಫಾ ಅಧ್ಯಕ್ಷ ಗಿಯಾನಿ

ಝೂರಿಕ್,ಫೆ.27: ‘‘ಮುಂಬರುವ ವರ್ಷಗಳಲ್ಲಿ ಭಾರತದಲ್ಲಿ ಫುಟ್ಬಾಲ್ ಬೆಳವಣಿಗೆಯಾಗುವುದನ್ನು ನೋಡಲು ಬಯಸುತ್ತಿರುವೆ’’ ಎಂದು ಫಿಫಾದ ನೂತನ ಅಧ್ಯಕ್ಷ ಗಿಯಾನಿ ಇನ್‌ಫ್ಯಾಂಟಿನೊ ಹೇಳಿದ್ದಾರೆ.
ಶುಕ್ರವಾರ ನಡೆದ ಫಿಫಾ ಅಧ್ಯಕ್ಷೀಯ ಚುನಾವಣೆಯ ಎರಡನೆ ಸುತ್ತಿನ ಮತ ಎಣಿಕೆಯಲ್ಲಿ 207 ಮತಗಳ ಪೈಕಿ 115 ಮತಗಳನ್ನು ಗಳಿಸಿದ್ದ ಗಿಯಾನಿ ಜಾಗತಿಕ ಫುಟ್ಬಾಲ್ ಆಡಳಿತ ಸಂಸ್ಥೆ ಫಿಫಾದ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು.
ಭ್ರಷ್ಟಾಚಾರ ಆರೋಪದಲ್ಲಿ ಆರು ವರ್ಷಗಳ ಕಾಲ ನಿಷೇಧಕ್ಕೆ ಗುರಿಯಾಗಿರುವ ಸೆಪ್ ಬ್ಲಾಟರ್ ಉತ್ತರಾಧಿಕಾರಿಯಾಗಿ ಗಿಯಾನಿ ಆಯ್ಕೆಯಾಗಿದ್ದಾರೆ.
‘‘ಒಶಿಯಾನಿಯ ಶಾಲಾ ಮಕ್ಕಳು ಫುಟ್ಬಾಲ್ ಆಡುವುದನ್ನು ಬಯಸುವೆ. ಏಷ್ಯಾ, ಚೀನಾ, ಭಾರತದಲ್ಲಿ ಫುಟ್ಬಾಲ್ ಬೆಳವಣಿಗೆಯಾಗಬೇಕೆಂಬ ಬಯಕೆ ನನ್ನದು. ವಿಶ್ವದೆಲ್ಲೆಡೆ ಫುಟ್ಬಾಲ್‌ನ್ನು ಕಾಣುವುದು ನನ್ನ ಮಹದಾಸೆ. ವಿಶ್ವವ್ಯಾಪಿ ಫುಟ್ಬಾಲ್ ಬೆಳವಣಿಗೆಗೆ ಫಿಫಾದಂತಹ ಸಂಸ್ಥೆ ಪ್ರತಿ ದೇಶಗಳಿಗೂ ನೆರವು ನೀಡುವುದನ್ನು ಜನರು ನಿರೀಕ್ಷಿಸುತ್ತಿದ್ದಾರೆ ಎಂದು ಯುಇಎಫ್‌ಎ ಅಧ್ಯಕ್ಷ ಮೈಕಲ್ ಪ್ಲಾಟಿನಿ ಅವರ ಬಲಗೈ ಬಂಟನಾಗಿರುವ ಗಿಯಾನಿ ಅಭಿಪ್ರಾಯಪಟ್ಟಿದ್ದಾರೆ.
ಭಾರತದ ಫುಟ್ಬಾಲ್ ತಂಡ ಪ್ರಸ್ತುತ ಫಿಫಾ ರ್ಯಾಂಕಿಂಗ್‌ನಲ್ಲಿ 162ನೆ ಸ್ಥಾನದಲ್ಲಿದೆ. 2017ರಲ್ಲಿ ನಡೆಯಲಿರುವ 17 ವರ್ಷದೊಳಗಿನವರ ವಿಶ್ವಕಪ್ ಟೂರ್ನಿಯ ಆತಿಥ್ಯವನ್ನು ವಹಿಸಿಕೊಂಡಿದೆ







