ಪತ್ರಕರ್ತ

ಕಾಂಗ್ರೆಸ್‌ಗೇ ಐಯ್ಯರ್ ‘ಚಾಟಿ’
ಪಾ ಕಿಸ್ತಾನದ ಜನಪ್ರಿಯ ರಾಜಕಾರಣಿ ಸಯೀದಾ ಆಬಿದಾ ಹುಸೇನ್ ಬರೆದಿದ್ದ ಪುಸ್ತಕವೊಂದರ ಬಿಡುಗಡೆ ಸಮಾರಂಭ ಅದಾಗಿತ್ತು, ಮಣಿಶಂಕರ್ ಅಯ್ಯರ್ ಕಾರ್ಯಕ್ರಮದ ಭಾಷಣಕಾರರಲ್ಲೊಬ್ಬರಾಗಿದ್ದರು. ಸಭೆಯಲ್ಲಿದ್ದ ಯಾರೋ ಒಬ್ಬರು ಪಾಕಿಸ್ತಾನದಲ್ಲಿ ‘ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ’ ಹಾಗೂ ಭಾರತದ ‘ಕಾಂಗ್ರೆಸ್’ ಪಕ್ಷದ ಭವಿಷ್ಯಗಳ ಬಗ್ಗೆ ಪ್ರಶ್ನಿಸಿದಾಗ, ಪ್ರಸಿದ್ಧ ಸಂಪಾದಕ ಶೇಖರ್ ಗುಪ್ತಾ ಹಾಗೂ ಹುಸೈನ್ ಅವರು ಪಿಪಿಪಿ ಬಗ್ಗೆ ಉತ್ತರಿಸಿದರು ಹಾಗೂ ಕಾಂಗ್ರೆಸ್ ಬಗ್ಗೆ ಉತ್ತರಿಸುವ ಹೊಣೆಗಾರಿಕೆಯನ್ನು ಅಯ್ಯರ್‌ಗೆ ವಹಿಸಿದರು. ಏನಿದ್ದರೂ ಅಯ್ಯರ್, ಕಾಂಗ್ರೆಸ್ ಬಗ್ಗೆ ಕೆಟ್ಟದಾದ ಚಿತ್ರಣವನ್ನು ನೀಡಲಾರರೆಂದು, ಶೇಖರ್ ಕಣ್ಣುಮಿಟುಕಿಸಿ, ನಗುತ್ತಾ ಹೇಳಿದರು. ಆದರೆ ಅದಕ್ಕೆ ಅಯ್ಯರ್ ನೀಡಿದ ಉತ್ತರ ಮಾತ್ರ ಎಲ್ಲರನ್ನೂ ತಬ್ಬಿಬ್ಬುಗೊಳಿಸಿತು. ಎರಡೂ ಪಕ್ಷಗಳ ಪರಿಸ್ಥಿತಿ ತಮ್ಮ ತಮ್ಮ ದೇಶಗಳಲ್ಲಿ ಶೋಚನೀಯವಾಗಿದೆ ಎಂದರು.ಆಗ ಹಾಲ್‌ನಲ್ಲಿದ್ದವರೆಲ್ಲಾ ಜೋರಾಗಿ ನಗತೊಡಗಿದರು. ನಗೆಯ ಸದ್ದು ಅಡಗುತ್ತಿದ್ದಂತೆಯೇ, ಮಾತು ಮುಂದುವರಿಸಿದ ಅಯ್ಯರ್ ಕಾಂಗ್ರೆಸ್‌ನ ಪರಿಸ್ಥಿತಿಯು ಪಿಪಿಪಿಗಿಂತ ಸ್ವಲ್ಪ ಮಟ್ಟಿಗೆ ಉತ್ತಮವಾಗಿದೆ. ಯಾಕೆಂದರೆ, ಕೇಂದ್ರ ಸರಕಾರವು ‘ಆತ್ಮಹತ್ಯೆ’ಯ ದಾರಿಯನ್ನು ಹಿಡಿದಿದೆಯೆಂದರು. ಆಗ ಸಭಿಕರು ಮತ್ತೊಮ್ಮೆ ಜೋರಾಗಿ ನಕ್ಕರು.
ಸಿಎಂ ಪಟ್ಟದತ್ತ ಸ್ಮತಿ ಕಣ್ಣು?
ಸ್ಮತಿ ಇರಾನಿ ಇತ್ತೀಚೆಗೆ ಸಂಸತ್‌ನಲ್ಲಿ ಪ್ರಖರ ‘ರಾಷ್ಟ್ರೀಯವಾದಿ’ ಭಾಷಣ ಮಾಡುವ ಮೂಲಕ ಸಂಘಪರಿವಾರದ ಮೆಚ್ಚುಗೆ ಗಳಿಸುವ ಪ್ರಯತ್ನ ಮಾಡಿದರು. ಈ ಪ್ರಯತ್ನಗಳ ಹಿಂದೆ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವೆಯ ರಾಜಕೀಯ ಆಕಾಂಕ್ಷೆಯು ಇಣುಕುತ್ತಿರುವುದು ಸ್ಪಷ್ಟವಾಗಿ ಕಾಣುತ್ತಿತ್ತು. ರಾಹುಲ್‌ಗಾಂಧಿ ಹಾಗೂ ಮಾಯಾವತಿ ಆಕೆಯ ದಾಳಿಯ ಮುಖ್ಯ ಗುರಿಗಳಾಗಿದ್ದರೆಂಬುದನ್ನು ಇಲ್ಲಿ ಗಮನಿಸಬೇಕಾದ ಅಂಶ. ಜವಾಹರಲಾಲ್ ನೆಹರೂ ವಿಶ್ವವಿದ್ಯಾನಿಲಯ(ಜೆಎನ್‌ಯು)ದಲ್ಲಿ ಪೊಲೀಸ್ ಕಾರ್ಯಾಚರಣೆಯನ್ನು ಸಮರ್ಥಿಸಿದ ಸ್ಮತಿ ಬಿಜೆಪಿಯ ಹಿಂದುತ್ವವಾದಿ ನಿಲುವುಗಳನ್ನು ಪ್ರತಿಪಾದಿಸಲು ತನಗೆ ದೊರೆತ ಅವಕಾಶವನ್ನು ಆಕೆ ಬಿಟ್ಟು ಕೊಡಲಿಲ್ಲ. ಅಟಲ್‌ಬಿಹಾರಿ ವಾಜಪೇಯಿ ಭಾಷಣದ ಸಾಲೊಂದನ್ನು ಉದ್ಧರಿಸಿದ ಸ್ಮತಿ, ಗಂಗಾ,ಶಿವ ಹಾಗೂ ಭಾರತಮಾತೆಯನ್ನು ಸ್ತುತಿಸಿದರು. ರಾಜ್ಯಸಭೆಯಲ್ಲಿ ಅವರು ಮಾಯಾವತಿಯನ್ನು ಯಾಕೆ ತರಾಟೆಗೆ ತೆಗೆದುಕೊಂಡರೆಂಬುದನ್ನು, ಪತ್ರಿಕಾ ಗ್ಯಾಲರಿಯಲ್ಲಿದ್ದ ಅನೇಕರು ಕಾರಣವನ್ನು ಕಂಡುಹಿಡಿದರು. ರಾಹುಲ್ ಹಾಗೂ ಮಾಯಾವತಿ ವಿರುದ್ಧ ತಾನು ನೇರ ಹೋರಾಟಕ್ಕಿಳಿದರೆ, ಉತ್ತರಪ್ರದೇಶದಲ್ಲಿ ಬಿಜೆಪಿಯ ಮುಖ್ಯಮಂತ್ರಿ ಅಭ್ಯರ್ಥಿ ತಾನಾಗಬಹುದೆಂಬ ಯೋಚನೆೆ ಸ್ಮತಿಗಿದೆ. ಕನಿಷ್ಠ ಪಕ್ಷ ಸ್ಮತಿ ತನ್ನ ಈ ಭಾಷಣ ದಿಂದಾಗಿ ಕನಿಷ್ಠ ಪಕ್ಷ ಮೋದಿಯ ಗಮನವನ್ನಾದರೂ ಸೆಳೆಯುವಲ್ಲಿ ಸಫಲರಾ ಗಿದ್ದಾರೆ. ಅವರು ಇರಾನಿ ಭಾಷಣದ ಯೂಟ್ಯೂಬ್ ಲಿಂಕ್‌ನ್ನು ಲಗತ್ತಿಸಿ ಟ್ವೀಟ್ ಮಾಡಿದ್ದಾರೆ. ಸ್ಮತಿಯ ಮಟ್ಟಿಗೆ ಇದು ಸಣ್ಣ ಮಟ್ಟದ ಸಾಧನೆಯೇನೂ ಅಲ್ಲ.
ಭಾರತಕ್ಕೆ ಎರಡನೆ ರಾಜಧಾನಿ?
ಭಾರತಕ್ಕೆ ಇನ್ನೊಂದು ರಾಜಧಾನಿ ಬೇಕೆಂಬ ಯೋಚನೆ ಮಧ್ಯಪ್ರದೇಶದ ಗೃಹಸಚಿವ ಬಾಬುಲಾಲ್ ಗೌರ್‌ಗೆ ಹೊಳೆದಿದೆ. ಭೋಪಾಲ್‌ನ್ನು ದೇಶದ ಎರಡನೆ ರಾಜಧಾನಿಯೆಂದು ಪ್ರಧಾನಿ ಪರಿಗಣಿಸಬೇಕೆಂದು ಅವರು ಬಯಸುತ್ತಿದ್ದಾರೆ. ಈ ಮೊದಲು ಮಧ್ಯಪ್ರದೇಶದ ಮುಖ್ಯಮಂತ್ರಿಯಾಗಿದ್ದ ಗೌರ್ ಇತ್ತೀಚೆಗೆ ಭೋಪಾಲ್‌ನ ರಾಜಾ ಭೋಜ ವಿಮಾನ ನಿಲ್ದಾಣದಲ್ಲಿ ಮೋದಿಯನ್ನು ಭೇಟಿಯಾದರು. ರೈತ ರ್ಯಾಲಿಯೊಂದನ್ನು ಉದ್ದೇಶಿಸಿ ಭಾಷಣ ಮಾಡಲು ಮೋದಿ ಅಲ್ಲಿಂದ ತೆರಳುವವರಿದ್ದರು.ಈ ಸಂದರ್ಭವನ್ನು ಬಳಸಿಕೊಂಡ ಗೌರ್, ಭೋಪಾಲನ್ನು ಭಾರತದ ಎರಡನೆ ರಾಜಧಾನಿಯೆಂದು ಘೋಷಿಸಬೇಕೆಂಬ ಮನವಿಯನ್ನು ಮೋದಿಗೆ ಸಲ್ಲಿಸಿದರು. ಗೌರ್ ಹೇಳುವ ಪ್ರಕಾರ, ಭೋಪಾಲ್ ಾನಗರವು ಅತ್ಯಂತ ವ್ಯೆಹಾತ್ಮಕ ಹಾಗೂ ಪ್ರಬಲವಾದ ಭದ್ರತೆಯುಳ್ಳ ನಗರವಾಗಿದ್ದು, ದಿಲ್ಲಿಗೆ ಪರ್ಯಾಯವಾಗಿದೆ. ಭೋಪಾಲ್‌ನ ಹವಾಮಾನ, ಇತಿಹಾಸ, ಮೂಲಸೌಕರ್ಯ ಹಾಗೂ ಸಂಪರ್ಕಜಾಲದ ಬಗೆಗೂ ಗೌರ್ ಗುಣಗಾನ ಮಾಡಿದ್ದರು. ಮಾಜಿ ಬಿಬಿಸಿ ಪತ್ರಕರ್ತ ಮಾರ್ಕ್ ಟುಲಿ ಕೂಡಾ, ಭೋಪಾಲ್ ಆಯಕಟ್ಟಿನ ಸ್ಥಳವಾಗಿರುವುದರಿಂದ ರಾಜಧಾನಿಯಾಗಲು ಸೂಕ್ತವೆಂದು ಪ್ರತಿಪಾದಿಸಿದ್ದರೆಂದು, ಭೋಪಾನ ಹಿರಿತಲೆಗಳು ನೆನಪಿಸಿಕೊಳ್ಳುತ್ತಾರೆ. ಆದರೆ ಪ್ರಧಾನಿಯವರು ಗೌರ್‌ಗೆ ಈ ಬಗ್ಗೆ ಏನು ಉತ್ತರ ನೀಡಿದರೆಂಬುದು ಯಾರಿಗೂ ತಿಳಿದಿಲ್ಲ. ಆದರೆ ಪ್ರಧಾನಿಯು ತನ್ನ ಮಾತನ್ನು ತಾಳ್ಮೆಯಿಂದ ಆಲಿಸಿದರೆಂದು ಗೌರ್ ಹಿಗ್ಗಿನಿಂದ ಹೇಳಿಕೊಳ್ಳುತ್ತಿದ್ದಾರೆ.
ಶರ್ಮಾ ಗೂಂಡಾಗಿರಿ
ದಿಲ್ಲಿಯ ಬಿಜೆಪಿ ಶಾಸಕ ಓ.ಪಿ. ಶರ್ಮಾ, ತೀರಾ ಇತ್ತೀಚೆಗೆ ಬೇಡದ ಕಾರಣಕ್ಕಾಗಿ ಸುದ್ದಿಯಾಗಿದ್ದಾರೆ. ದಿಲ್ಲಿಯ ನ್ಯಾಯಾಲಯವೊಂದರಲ್ಲಿ ಜೆಎನ್‌ಯು ವಿದ್ಯಾರ್ಥಿ ನಾಯಕ ಕನ್ಹಯ್ಯಾ ಕುಮಾರ್‌ನನ್ನು ಹಾಜರುಪಡಿಸಲು ಕರೆತರುತ್ತಿದ್ದಾಗ,ಆತನ ಮತ್ತು ಇತರ ಕೆಲವರ ಮೇಲೆ ಹಲ್ಲೆ ನಡೆಸಿದ ವ್ಯಕ್ತಿಗಳ ಪೈಕಿ ಶಾಸಕ ಶರ್ಮಾ ಅತ್ಯಂತ ಆಕ್ರಮಣಕಾರಿಯಾಗಿ ವರ್ತಿಸಿದ್ದರು.ಶರ್ಮಾಗೆ ಕನ್ಹಯ್ಯಿ ಬಗ್ಗೆ ಅಷ್ಟೊಂದು ಕ್ರೋಧವಿರಲಿಲ್ಲ. ಆದರೆ ಎಡಪಂಥೀಯ ಗುಂಪುಗಳ ಜೊತೆ ನಂಟಿರುವ ಕೆಲವು ವ್ಯಕ್ತಿಗಳು ಕೇಂದ್ರ ವಿತ್ತ ಸಚಿವ ಅರುಣ್‌ಜೇಟ್ಲಿಗೆ ಮುತ್ತಿಗೆ ಹಾಕಲು ಯತ್ನಿಸಿದ್ದುದು ಅವರನ್ನು ಕೆರಳಿಸಿತು. ಅರವಿಂದ್ ಕೇಜ್ರಿವಾಲ್ ವಿರುದ್ಧ ತಾನು ಹೂಡಿದ ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿ ಜೇಟ್ಲಿ ನ್ಯಾಯಾಲಯದ ಆವರಣಕ್ಕೆ ಆಗಮಿಸಿದ್ದರು. ತನ್ನ ಉದ್ದಟತನದ ವರ್ತನೆಗಳ ಹೊರತಾಗಿಯೂ ಶರ್ಮಾ ಸದಾ ಉಲ್ಲಾಸಭರಿತ ವ್ಯಕ್ತಿಯೆಂದೇ ಪರಿಗಣಿಸಲ್ಪಟ್ಟವರು. ಆದರೆ ಈ ಘಟನೆಯಿಂದಾಗಿ ಭಾರತ ಅವರನ್ನು ಯಾವ ರೀತಿಯಾಗಿ ನೆನಪಿನಲ್ಲಿಟ್ಟುಕೊಳ್ಳುವುದೆಂಬುದನ್ನು ಈಗಲೇ ಸ್ಪಷ್ಟವಾಗಿ ಹೇಳಲು ಸಾಧ್ಯವಿಲ್ಲ.
ಅಮ್ಮಾ ಅಥವಾ ದೇಶ
ಸಂಸತ್ತಿನಲ್ಲಿ ಬುಧವಾರ ಜೆಎನ್‌ಯು ಹಾಗೂ ಹೈದರಾಬಾದ್ ವಿವಿಯ ಸಮಸ್ಯೆಗಳ ಬಗ್ಗೆ ಚರ್ಚಿಸುತ್ತಿದ್ದಾಗ, ಎಡಿಎಂಕೆ ಸದಸ್ಯರ ಸುಳಿವೇ ಇರಲಿಲ್ಲ. ಇದಕ್ಕೆ ಕಾರಣವೂ ಇತ್ತು. ಚೆನ್ನೈನಲ್ಲಿರುವ ಅಮ್ಮಾ ಜನ್ಮದಿನಾಚರಣೆ ಸಮಾರಂಭಗಳಲ್ಲಿ ಪಾಲ್ಗೊಳ್ಳಲು ಅವರು ತೆರಳಿದ್ದರು. ಎಡಿಎಂಕೆ ಸಂಸದರ ಗೈರುಹಾಜರಿಯಿಂದ ವಿವಿಧ ರಾಜಕೀಯ ಪಕ್ಷಗಳ ಕೆಲವು ನಾಯಕರು ತುಂಬಾ ಖುಷಿಯಾಗಿದ್ದರು. ಯಾಕೆಂದರೆ ಎಡಿಎಂಕೆ ಸಂಸದರ ಅನುಪಸ್ಥಿತಿಯಿಂದ ತಮಗೆ ಸಂಸತ್‌ನಲ್ಲಿ ಮಾತನಾಡಲು ಹೇರಳವಾದ ಕಾಲಾವಕಾಶ ದೊರೆಯುವುದೆಂದು ಅವರು ಸಂತಸಗೊಂಡಿದ್ದರು. ಇನ್ನು ಕೆಲವರು, ಭಟ್ಟಂಗಿತನದ ರಾಜಕೀಯವು ಸಂಸತ್‌ಗೆ ಸಂಬಂಧಿಸಿದ ಮಹತ್ವದ ವಿಷಯಗಳನ್ನು ಕೂಡಾ ಮೂಲೆಗುಂಪು ಮಾಡಬಲ್ಲದು ಎಂಬುದಾಗಿ ಚಟಾಕಿ ಹಾರಿಸಿದ್ದರು.







