ರೈತ ಮುಖಂಡರೊಂದಿಗೆ ಸಿಎಂ ಸಮಾಲೋಚನೆ
ಬಜೆಟ್ ಪೂರ್ವಭಾವಿ ಸಭೆ

ಬೆಂಗಳೂರು, ಫೆ.27: ರಾಜ್ಯ ಬಜೆಟ್ ಮಂಡನೆಗೆ ಪೂರ್ವಭಾವಿಯಾಗಿ ರೈತ ಮುಖಂಡರು ಹಾಗೂ ರೈತ ಸಂಘದ ಪ್ರತಿನಿಧಿಗಳೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಮಾಲೋಚನೆ ನಡೆಸಿದರು.
ಶನಿವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ 15ಕ್ಕೂ ಹೆಚ್ಚು ರೈತ ಸಂಘಗಳ ಪದಾಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ರೈತರು ತಾವು ಎದುರಿಸುತ್ತಿರುವ ಸಮಸ್ಯೆಗಳನ್ನು ವಿವರವಾಗಿ ಮುಖ್ಯಮಂತ್ರಿಗೆ ಮನದಟ್ಟು ಮಾಡಿದರು.
ಸಹಕಾರಿ ಸಾಲ ಮನ್ನಾ ಮಾಡುವಂತೆ ಸಿಎಂಗೆ ಆಗ್ರಹ: ಸಹಕಾರಿ ವಲಯದಲ್ಲಿ ರೈತರಿಗೆ ಸಂಬಂಧಿಸಿದಂತೆ 10 ಸಾವಿರ ಕೋಟಿ ರೂ.ಸಾಲವಿದೆ. ಕೇವಲ ಬಡ್ಡಿ ಮನ್ನಾ ಮಾಡಿದರೆ ಸಾಲದು, ಸಂಪೂರ್ಣ ಸಾಲ ಮನ್ನಾ ಮಾಡಬೇಕು ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಚಾಮರಸ ಮಾಲಿ ಪಾಟೀಲ್ ಆಗ್ರಹಿಸಿದ್ದಾರೆ.
ಬಡ್ಡಿ ರಹಿತ ಸಾಲ ಶೇ.16ರಷ್ಟು ರೈತರಿಗೆ ಮಾತ್ರ ಸಿಗುತ್ತಿದೆ. ಎಲ್ಲ ರೈತರಿಗೂ ಸಹಕಾರಿ ಸಾಲ ಲಭ್ಯವಾದರೆ ಆತ್ಮಹತ್ಯೆಗಳನ್ನು ತಡೆಯಬಹುದು. ಕೃಷಿ ಬೆಲೆ ಆಯೋಗ ಶಿಫಾರಸ್ಸು ಮಾಡಿರುವಂತೆ ಬೆಲೆಗಳಿಗೆ ದರವನ್ನು ನಿಗದಿಗೊಳಿಸಬೇಕು. ಮೀಟರ್ ಬಡ್ಡಿ, ಮೈಕ್ರೊ ಫೈನಾನ್ಸ್‌ನವರು ವಿಧಿಸುತ್ತಿರುವ ಶೇ.30, 40ರಷ್ಟು ಬಡ್ಡಿ ದರವನ್ನು ನಿಯಂತ್ರಿಸಬೇಕು ಎಂದು ಮನವಿ ಮಾಡಿದ್ದೇವೆ ಎಂದು ಅವರು ಹೇಳಿದರು.
ನಮ್ಮ ಮನವಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಂದಿಸಿದ್ದು, ಬಜೆಟ್ ಇತಿಮಿತಿಯಲ್ಲಿ ನಮ್ಮ ಬೇಡಿಕೆಗಳನ್ನು ಈಡೇರಿಸುವ ಭರವಸೆಯನ್ನು ನೀಡಿದ್ದಾರೆ. ಅಲ್ಲದೆ, ನೀರಾವರಿ ಯೋಜನೆಗಳಿಗೆ ಒತ್ತು ನೀಡಲು ಮನವಿ ಸಲ್ಲಿಸಲಾಗಿದೆ ಎಂದು ಅವರು ತಿಳಿಸಿದರು.
ಸಲಹೆಗಳು:ಪ್ರಸಕ್ತ ಸಾಲಿನ ಕಬ್ಬಿನ ದರದ ಎಫ್‌ಆರ್‌ಪಿ ಪ್ರಕಾರ ಸುಮಾರು 4 ಸಾವಿರ ಕೋಟಿ ರೂ., 2013-14ನೆ ಸಾಲಿನ ಬಾಕಿ 300 ಕೋಟಿ ರೂ., 2014-15ನೆ ಸಾಲಿನ ಸುಮಾರು 540 ಕೋಟಿ ರೂ.ಗಳನ್ನು ಕಾರ್ಖಾನೆಗಳಿಂದ ಕೊಡಿಸಲು ಕ್ರಮ ಕೈಗೊಳ್ಳಬೇಕು.ರೈತರಿಗೆ ಕನಿಷ್ಠ ಆದಾಯ ಭದ್ರತೆ ಖಾತ್ರಿ ಯೋಜನೆ ಜಾರಿಗೆ ತರಬೇಕು. ಕೃಷಿಗಾಗಿ ಬಜೆಟ್‌ನಲ್ಲಿ 40 ಸಾವಿರ ಕೋಟಿರೂ.ಒದಗಿಸಬೇಕು.
ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಶೂನ್ಯಬಡ್ಡಿ ದರದ ಸಾಲ ನೀಡುವ ಯೋಜನೆ ಜಾರಿಗೆ ತರಬೇಕು. ರೈತರ ಮೇಲೆ ದಾಖಲಾಗಿರುವ ಮೊಕದ್ದಮೆಗಳನ್ನು ಹಿಂಪಡೆಯಬೇಕು. ಕೃಷಿ ಬೆಲೆ ಆಯೋಗಕ್ಕೆ ಸ್ವಾಯತ್ತತೆ ನೀಡಬೇಕು ಹಾಗೂ ಆಯೋಗಕ್ಕೆ ಕನಿಷ್ಠ ಐದು ಮಂದಿ ರೈತ ಪ್ರತಿನಿಧಿಗಳನ್ನು ನೇಮಕ ಮಾಡಬೇಕು.
ನೀರಾ ನೀತಿಯನ್ನು ರೂಪಿಸುವುದಾಗಿ ಕಳೆದ ಸಾಲಿನ ಬಜೆಟ್‌ನಲ್ಲಿ ಘೋಷಣೆ ಮಾಡಲಾಗಿತ್ತು. ಆದರೆ, ಈವರೆಗೆ ಅದು ಜಾರಿಯಾಗಿಲ್ಲ. ಈ ಸಾಲಿನಲ್ಲಾದರೂ ನೀರಾ ನೀತಿಯನ್ನು ಜಾರಿಗೆ ತರಬೇಕು ಎಂದು ರೈತ ಸಂಘದ ಪದಾಧಿಕಾರಿಗಳು ಮನವಿ ಮಾಡಿದ್ದಾರೆ.
ರೈತರ ಬೇಡಿಕೆಗಳ ಪರಿಗಣನೆ ಕೃಷಿ ಹಾಗೂ ರೈತರಿಗೆ ಸಂಬಂಧಿಸಿದಂತೆ ಹಲವಾರು ಸಲಹೆಗಳನ್ನು ನೀಡಿದ್ದಾರೆ. ಬಜೆಟ್ ಸಿದ್ಧತೆ ಸಂದರ್ಭದಲ್ಲಿ ಅವರ ಸಲಹೆಗಳನ್ನು ಪರಿಗಣನೆಗೆ ತೆಗೆದುಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.





