ಮುಖ್ಯನ್ಯಾಯಮೂರ್ತಿಗೆ ಪ್ರಸ್ತಾವ ಸಲ್ಲಿಕೆ: ಸ್ಪೀಕರ್
ಉಪ ಲೋಕಾಯುಕ್ತ ಪದಚ್ಯುತಿ ವಿಚಾರ

ಬೆಂಗಳೂರು, ಫೆ.27: ಉಪ ಲೋಕಾಯುಕ್ತ ನ್ಯಾ.ಸುಭಾಷ್ ಅಡಿ ಪದಚ್ಯುತಿಗೆ ಸಂಬಂಧಿಸಿದಂತೆ ವಿಧಾನಸಭೆಯಲ್ಲಿ ಅಂಗೀಕರಿಸಲಾಗಿದ್ದ ಪ್ರಸ್ತಾವವನ್ನು ಹೈಕೋರ್ಟ್ ಮುಖ್ಯನ್ಯಾಯಮೂರ್ತಿಗೆ ಕಳುಹಿಸಲಾಗಿದೆ ಎಂದು ಸ್ಪೀಕರ್ ಕಾಗೋಡು ತಿಮ್ಮಪ್ಪ ಸ್ಪಷ್ಟನೆ ನೀಡಿದ್ದಾರೆ.
ಶನಿವಾರ ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ನ್ಯಾ.ಸುಭಾಷ್ ಅಡಿ ವಿರುದ್ಧದ ಆರೋಪಗಳಿಗೆ ಸಂಬಂಧಿಸಿದಂತೆ ಲಭ್ಯವಾಗಿರುವ ಮಾಹಿತಿಗಳು ಹಾಗೂ ದಾಖಲೆಗಳನ್ನು ಪರಿಶೀಲಿಸಿದಾಗ ಮೇಲ್ನೋಟಕ್ಕೆ ಸಮಪರ್ಕವಾಗಿವೆ ಎಂದು ಮನದಟ್ಟಾದ ಹಿನ್ನೆಲೆಯಲ್ಲಿ ಮುಂದಿನ ವಿಚಾರಣೆಯನ್ನು ಕೈಗೆತ್ತಿಕೊಳ್ಳುವಂತೆ ಫೆ.26ರಂದು ಹೈಕೋರ್ಟ್ ಮುಖ್ಯನ್ಯಾಯಮೂರ್ತಿಗೆ ಪ್ರಸ್ತಾವ ರವಾನಿಸಲಾಗಿದೆ ಎಂದರು.
ರಾಜ್ಯಪಾಲರ ಭಾಷಣ: ರಾಜ್ಯಪಾಲರು ವಿಧಾನಸಭೆಯ ಸಭಾಂಗಣದಲ್ಲಿ ಫೆ.29ರಂದು ಮಧ್ಯಾಹ್ನ 12 ಗಂಟೆಗೆ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ನಂತರ ಸದನ ಸೇರಿ ಔಪಚಾರಿಕ ಕಾರ್ಯಕ್ರಮಗಳು ನಡೆಯಲಿವೆ. ಅಲ್ಲದೆ, ಇತ್ತೀಚೆಗೆ ನಿಧನರಾದ ಗಣ್ಯರು, ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಲಾಗುವುದು ಎಂದು ಅವರು ಹೇಳಿದರು.
ಮಾ.1ರಿಂದ 5ರವರೆಗೂ ರಾಜ್ಯಪಾಲರ ಭಾಷಣದ ಮೇಲೆ ವಂದನಾ ನಿರ್ಣಯ ಕುರಿತು ಚರ್ಚೆ ನಡೆಯಲಿದೆ. ಪ್ರಶ್ನೋತ್ತರ ಕಲಾಪ, ಸಾರ್ವಜನಿಕ ಮಹತ್ವದ ವಿಷಯಗಳಿಗೂ ಅವಕಾಶ ನೀಡಲಾಗುವುದು ಎಂದು ಕಾಗೋಡು ತಿಮ್ಮಪ್ಪ ತಿಳಿಸಿದರು.
ವಿಧೇಯಕಗಳ ಮಂಡನೆ: ಕರ್ನಾಟಕ ಕಾಕಂಬಿ ನಿಯಂತ್ರಣ ವಿಧೇಯಕ, ಬೆಂಗಳೂರು ನೀರು ಸರಬರಾಜು ಮತ್ತು ಗ್ರಾಮಸಾರ ಚರಂಡಿ ವ್ಯವಸ್ಥೆ ತಿದ್ದುಪಡಿ ವಿಧೇಯಕ, ಕೃಷಿ ಇಲಾಖೆ ಅಧಿಕಾರಿ ಮತ್ತು ಸಿಬ್ಬಂದಿಗಳ ವರ್ಗಾವಣೆಗೆ ಕರ್ನಾಟಕ ಸಿವಿಲ್ ಸೇವೆಗಳ ತಿದ್ದುಪಡಿ ವಿಧೇಯಕ, ಕರ್ನಾಟಕ ನಗರಾಭಿವೃದ್ಧಿ ಪ್ರಾಧಿಕಾರದ ತಿದ್ದುಪಡಿ ವಿಧೇಯಕ ಅಂಗೀಕಾರಕ್ಕೆ ಬಾಕಿ ಉಳಿದಿದ್ದು, ಅವುಗಳ ಚರ್ಚೆ ಮತ್ತು ಅಂಗೀಕಾರ ಪ್ರಕ್ರಿಯೆಗಳು ನಡೆಯಲಿವೆ ಎಂದು ಅವರು ಹೇಳಿದರು. ಮಾ.1 ರಿಂದ 4ರವರೆಗೆ ಪ್ರಶ್ನೋತ್ತರ ಕಲಾಪ ನಡೆಯಲಿದೆ. ಈವರೆಗೂ 818 ಪ್ರಶ್ನೆಗಳು ಬಂದಿದ್ದು, 60 ಚುಕ್ಕೆ ಗುರುತಿನ ಪ್ರಶ್ನೆಗಳು, 672 ಚುಕ್ಕೆ ರಹಿತ ಪ್ರಶ್ನೆಗಳನ್ನು ಸ್ವೀಕರಿಸಲಾಗಿದೆ. 11 ಗಮನ ಸೆಳೆಯುವ ಸೂಚನೆಗಳು, 30 ಸಾರ್ವಜನಿಕ ಮಹತ್ವದ ವಿಷಯಗಳು ಸಚಿವಾಲಯಕ್ಕೆ ಸಲ್ಲಿಕೆಯಾಗಿವೆ ಎಂದು ಅವರು ಹೇಳಿದರು. ಮೇಕ್ ಇನ್ ಇಂಡಿಯಾ ಕಾರ್ಯಕ್ರಮದಡಿಯಲ್ಲಿ ಎಚ್‌ಎಂಟಿ ಕಾರ್ಖಾನೆಯನ್ನು ಪುನಶ್ಚೇತನಗೊಳಿಸುವಂತೆ ಶಾಸಕ ಕೆ.ಗೋಪಾಲಯ್ಯ ಖಾಸಗಿ ವಿಧೇಯಕ ಮಂಡನೆಗೆ ಅವಕಾಶ ಕೋರಿದ್ದಾರೆ ಎಂದು ಕಾಗೋಡು ತಿಮ್ಮಪ್ಪ ತಿಳಿಸಿದರು.
ಲೋಕಸಭಾ ಸ್ಪೀಕರ್ ಆಶಯದಂತೆ ಇಂಡಿಯನ್ ಪಾರ್ಲಿಮೆಂಟರಿ ಗ್ರೂಪ್‌ನಿಂದ ‘ರಾಷ್ಟ್ರ ನಿರ್ಮಾಣದಲ್ಲಿ ಮಹಿಳಾ ಶಾಸಕಿಯರ ಪಾತ್ರ’ ಎಂಬ ವಿಷಯದ ಬಗ್ಗೆ ಮಾ.5 ಹಾಗೂ 6ರಂದು ಹೊಸದಿಲ್ಲಿಯಲ್ಲಿ ಮಹಿಳಾ ಶಾಸಕಿಯರ ರಾಷ್ಟ್ರೀಯ ಸಮ್ಮೇಳನ ನಡೆಯಲಿದ್ದು, ಅದರಲ್ಲಿ ರಾಜ್ಯದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರ ನೇತೃತ್ವದಲ್ಲಿ ವಿಧಾನಸಭೆಯ ಆರು ಮಂದಿ ಶಾಸಕಿಯರು ಭಾಗವಹಿಸಲಿದ್ದಾರೆ ಎಂದು ಅವರು ಹೇಳಿದರು.







