ಏಷ್ಯಾಕಪ್: ಭಾರತದ ಆಲ್‌ರೌಂಡ್ ಆಟಕ್ಕೆ ಪಾಕ್ ಶರಣು

ಧೋನಿ ಪಡೆಗೆ 5 ವಿಕೆಟ್ ಜಯ
ಮೀರ್ಪುರ, ಫೆ.27: ಆಲ್‌ರೌಂಡ್ ಪ್ರದರ್ಶನ ನೀಡಿದ ಭಾರತ ಏಷ್ಯಾಕಪ್ ಟ್ವೆಂಟಿ-20 ಟೂರ್ನಿಯಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು 5 ವಿಕೆಟ್‌ಗಳ ಅಂತರದಿಂದ ಮಣಿಸಿದೆ. ಟೂರ್ನಿಯಲ್ಲಿ ಸತತ ಎರಡನೆ ಗೆಲುವು ಸಾಧಿಸಿರುವ ಭಾರತ ಫೈನಲ್ ತಲುಪುವ ವಿಶ್ವಾಸ ಹೆಚ್ಚಿಸಿಕೊಂಡಿದೆ.
ಶನಿವಾರ ಇಲ್ಲಿ ನಡೆದ ಪಂದ್ಯದಲ್ಲಿ ಗೆಲ್ಲಲು 84 ರನ್ ಸುಲಭ ಸವಾಲು ಪಡೆದ ಭಾರತ ತಂಡ ವಿರಾಟ್ ಕೊಹ್ಲಿ ಅವರ ವೀರೋಚಿತ ಆಟದ ನೆರವಿನಿಂದ 15.3 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 85 ರನ್ ಗಳಿಸಿತು.
ಭಾರತ ಒಂದು ಹಂತದಲ್ಲಿ ಪಾಕ್ ತಂಡಕ್ಕೆ 5 ವರ್ಷಗಳ ನಂತರ ವಾಪಸಾಗಿರುವ ವೇಗದ ಬೌಲರ್ ಮುಹಮ್ಮದ್ ಆಮಿರ್ ದಾಳಿಗೆ ಸಿಲುಕಿ 8 ರನ್‌ಗೆ 3 ವಿಕೆಟ್ ಕಳೆದುಕೊಂಡು ಆತಂಕಕ್ಕೆ ಸಿಲುಕಿತ್ತು. ಆರಂಭಿಕ ದಾಂಡಿಗರಾದ ರೋಹಿತ್ ಶರ್ಮ(0) ಹಾಗೂ ಅಜಿಂಕ್ಯ ರಹಾನೆ(0) ಹಾಗೂ ಸುರೇಶ್ ರೈನಾ (1) ಆಮಿರ್ 4 ಓವರ್ ಸ್ಪೆಲ್‌ಗೆ ವಿಕೆಟ್ ಒಪ್ಪಿಸಿದರು.
ಆಗ ನಾಲ್ಕನೆ ವಿಕೆಟ್‌ಗೆ 68 ರನ್ ಉಪಯುಕ್ತ ಜೊತೆಯಾಟ ನಡೆಸಿದ ವಿರಾಟ್ ಕೊಹ್ಲಿ (49 ರನ್, 51 ಎಸೆತ, 7 ಬೌಂಡರಿ)ಹಾಗೂ ಯುವರಾಜ್ ಸಿಂಗ್(14 ರನ್, 32 ಎಸೆತ, 2 ಬೌಂಡರಿ) ತಂಡವನ್ನು ಸೋಲಿನ ಭೀತಿಯಿಂದ ಪಾರು ಮಾಡಿದರು. ತಾಳ್ಮೆಯ ಇನಿಂಗ್ಸ್ ಆಡಿದ ಯುವಿ ನಾಯಕ ಧೋನಿ(7) ಜೊತೆಗೂಡಿ ತಂಡವನ್ನು ಗೆಲುವಿನ ದಡ ಸೇರಿಸಿದರು.
ಪಾಕಿಸ್ತಾನ 83 ರನ್‌ಗೆ ಆಲೌಟ್: ಇದಕ್ಕೆ ಮೊದಲು ಭಾರತದ ಶಿಸ್ತುಬದ್ಧ ಬೌಲಿಂಗ್ ಹಾಗೂ ಫೀಲ್ಡಿಂಗ್‌ಗೆ ನಿರುತ್ತರವಾದ ಪಾಕಿಸ್ತಾನ ಏಷ್ಯಾಕಪ್ ಟ್ವೆಂಟಿ-20 ಟೂರ್ನಿಯ ತನ್ನ ಮೊದಲ ಪಂದ್ಯದಲ್ಲಿ 17.3 ಓವರ್‌ಗಳಲ್ಲಿ ಕೇವಲ 83 ರನ್‌ಗೆ ಆಲೌಟಾಯಿತು.
ಟಾಸ್ ಜಯಿಸಿದ ಭಾರತದ ನಾಯಕ ಎಂಎಸ್ ಧೋನಿ ಮೊದಲು ಬೌಲಿಂಗ್ ಆಯ್ದುಕೊಂಡರು. ಬೌಲರ್‌ಗಳು ಧೋನಿಯ ನಿರ್ಧಾರವನ್ನು ಸಮರ್ಥಿಸಿಕೊಂಡರು.
ಮುಹಮ್ಮದ್ ಹಫೀಝ್ ಹಾಗೂ ಶಾರ್ಜಿಲ್ ಖಾನ್ ಪಾಕ್ ಇನಿಂಗ್ಸ್ ಆರಂಭಿಸಿದರು. ಹಿರಿಯ ವೇಗದ ಬೌಲರ್ ಆಶೀಷ್ ನೆಹ್ರಾ ಇನಿಂಗ್ಸ್‌ನ ಮೊದಲ ಓವರ್‌ನ 4ನೆ ಎಸೆತದಲ್ಲೇ ಪಾಕ್‌ನ ಆರಂಭಿಕ ದಾಂಡಿಗ ಮುಹಮ್ಮದ್ ಹಫೀಝ್ ವಿಕೆಟ್ ಉರುಳಿಸಿ ಪಾಕ್ ವಿಕೆಟ್ ಪತನಕ್ಕೆ ನಾಂದಿ ಹಾಡಿದರು.
ಹಫೀಝ್ ಔಟಾದ ನಂತರ ನಿರಂತರವಾಗಿ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿದ ಪಾಕ್ ಪರ ವಿಕೆಟ್‌ಕೀಪರ್-ದಾಂಡಿಗ ಸರ್ಫರಾಝ್ ಅಹ್ಮದ್(25 ರನ್) ಅಗ್ರ ಸ್ಕೋರರ್ ಎನಿಸಿಕೊಂಡರು.
ಪಾಕ್ ಟ್ವೆಂಟಿ-20 ಕ್ರಿಕೆಟ್‌ನಲ್ಲಿ ಮೂರನೆ ಕನಿಷ್ಠ ಸ್ಕೋರ್ ದಾಖಲಿಸಿತು. 2012-13ರಲ್ಲಿ ದುಬೈನಲ್ಲಿ ಆಸ್ಟ್ರೇಲಿಯದ ವಿರುದ್ಧ 74 ರನ್ ಹಾಗೂ 2014ರಲ್ಲಿ ಢಾಕಾದಲ್ಲಿ ವೆಸ್ಟ್‌ಇಂಡೀಸ್‌ನ ವಿರುದ್ಧ 82 ರನ್‌ಗೆ ಆಲೌಟಾಗಿತ್ತು. ಪಾಕ್ ಪರ ಖುರ್ರಮ್ ಮನ್ಸೂರ್(10) ಹಾಗೂ ನಾಯಕ ಶಾಹಿದ್ ಅಫ್ರಿದಿ(2) ರನೌಟಾದರು.
ಭಾರತದ ಪರ ಹಾರ್ದಿಕ್ ಪಾಂಡ್ಯ(3-8) ಜೀವನಶ್ರೇಷ್ಠ ಬೌಲಿಂಗ್ ಮಾಡಿದರು. ರವೀಂದ್ರ ಜಡೇಜ(2-11) ಎರಡು ವಿಕೆಟ್ ಪಡೆದರು. ನೆಹ್ರಾ, ಬುಮ್ರಾ ಹಾಗೂ ಯುವರಾಜ್ ಸಿಂಗ್ ತಲಾ ಒಂದು ವಿಕೆಟ್‌ನ್ನು ಪಡೆದರು. ಬುಮ್ರಾ 3 ಓವರ್‌ಗಳಲ್ಲಿ ಎರಡು ಮೇಡನ್ ಓವರ್ ಎಸೆದು ಗಮನ ಸೆಳೆದರು. ಕೇವಲ 8 ರನ್ ನೀಡಿ 1 ವಿಕೆಟ್ ಪಡೆದರು.
ಸ್ಕೋರ್ ವಿವರ
ಪಾಕಿಸ್ತಾನ: 17.3 ಓವರ್‌ಗಳಲ್ಲಿ 83/10
ಮುಹಮ್ಮದ್ ಹಫೀಝ್ ಸಿ ಧೋನಿ ಬಿ ನೆಹ್ರಾ 4
ಶಾರ್ಜಿಲ್ ಖಾನ್ ಸಿ ರಹಾನೆ ಬಿ ಬುಮ್ರಾ 7
ಖುರ್ರಮ್ ಮನ್ಸೂರ್ ರನೌಟ್(ಕೊಹ್ಲಿ) 10
ಶುಐಬ್ ಮಲಿಕ್ ಸಿ ಧೋನಿ ಬಿ ಪಾಂಡ್ಯ 4
ಉಮರ್ ಅಕ್ಮಲ್ ಎಲ್‌ಬಿಡಬ್ಲು ಯುವರಾಜ್ 3
ಸರ್ಫರಾಝ್ ಅಹ್ಮದ್ ಬಿ ಜಡೇಜ 25
ಶಾಹಿದ್ ಅಫ್ರಿದಿ ರನೌಟ್(ಜಡೇಜ/ಧೋನಿ) 2
ವಹಾಬ್ ರಿಯಾಝ್ ಎಲ್‌ಬಿಡಬ್ಲು ಜಡೇಜ 4
ಮುಹಮ್ಮದ್ ಸಮಿ ಸಿ ರೈನಾ ಬಿ ಪಾಂಡ್ಯ 8
ಮುಹಮ್ಮದ್ ಆಮಿರ್ ಬಿ ಪಾಂಡ್ಯ 1
ಮುಹಮ್ಮದ್ ಇರ್ಫಾನ್ ಔಟಾಗದೆ 0
ಇತರ 15
ವಿಕೆಟ್ ಪತನ: 1-4, 2-22, 3-32, 4-35, 5-35, 6-42, 7-52, 8-70, 9-83, 10-83.
ಬೌಲಿಂಗ್ ವಿವರ:
ಆಶೀಷ್ ನೆಹ್ರಾ 3-0-20-1
ಬುಮ್ರಾ 3-2-8-1
ಹಾರ್ದಿಕ್ ಪಾಂಡ್ಯ 3.3-0-8-3
ಯುವರಾಜ್ ಸಿಂಗ್ 2-0-11-1
ರವೀಂದ್ರ ಜಡೇಜ 3-0-11-2
ಆರ್.ಅಶ್ವಿನ್ 3-0-21-0.
ಭಾರತ: 15.3 ಓವರ್‌ಗಳಲ್ಲಿ 85/5
ರೋಹಿತ್ ಶರ್ಮ ಎಲ್‌ಬಿಡಬ್ಲು ಆಮಿರ್ 0
ಅಜಿಂಕ್ಯ ರಹಾನೆ ಎಲ್‌ಬಿಡಬ್ಲು ಆಮಿರ್ 0
ವಿರಾಟ್ ಕೊಹ್ಲಿ ಎಲ್‌ಬಿಡಬ್ಲು ಸಮಿ 49
ಸುರೇಶ್ ರೈನಾ ಸಿ ರಿಯಾಝ್ ಬಿ ಆಮಿರ್ 1
ಯುವರಾಜ್ ಸಿಂಗ್ ಔಟಾಗದೆ 14
ಹಾರ್ದಿಕ್ ಪಾಂಡ್ಯ ಸಿ ಹಫೀಝ್ ಬಿ ಸಮಿ 0
ಎಂಎಸ್ ಧೋನಿ ಔಟಾಗದೆ 7
ಇತರ 14
ವಿಕೆಟ್ ಪತನ: 1-0, 2-2, 3-8, 4-76, 5-76.
ಬೌಲಿಂಗ್ ವಿವರ: ಮುಹಮ್ಮದ್ ಆಮಿರ್ 4-0-18-3
ಮುಹಮ್ಮದ್ ಸಮಿ 4-0-16-2
ಮುಹಮ್ಮದ್ ಇರ್ಫಾನ್ 4-0-16-0
ವಹಾಬ್ ರಿಯಾಝ್ 3.3-0-31-0
ಪಂದ್ಯಶ್ರೇಷ್ಠ: ವಿರಾಟ್ ಕೊಹ್ಲಿ.







