ಇಂಗ್ಲೆಂಡ್ ತಂಡಕ್ಕೆ ಜಯವರ್ಧನೆ ಸಲಹೆಗಾರ: ಶ್ರೀಲಂಕಾ ಅಸಮಾಧಾನ
ಕೊಲಂಬೊ, ಫೆ.27: ಮುಂಬರುವ ಐಸಿಸಿ ಟ್ವೆಂಟಿ-20 ವಿಶ್ವಕಪ್‌ನಲ್ಲಿ ಮಾಜಿ ನಾಯಕ ಮಹೇಲ ಜಯವರ್ಧನೆ ಇಂಗ್ಲೆಂಡ್ ತಂಡದ ಸಲಹೆಗಾರನಾಗಿ ನೇಮಕಗೊಂಡಿರುವುದಕ್ಕೆ ಶ್ರೀಲಂಕಾ ಕ್ರಿಕೆಟ್ ಮಂಡಳಿ(ಎಸ್‌ಎಲ್‌ಸಿ) ಅಸಮಾಧಾನ ವ್ಯಕ್ತಪಡಿಸಿದೆ.
ಪಾಕಿಸ್ತಾನ ವಿರುದ್ಧ ಯುಎಇನಲ್ಲಿ ಇತ್ತೀಚೆಗೆ ನಡೆದ ಸರಣಿಯ ವೇಳೆ ಇಂಗ್ಲೆಂಡ್ ತಂಡದಲ್ಲಿ ಬ್ಯಾಟಿಂಗ್ ಕೋಚ್ ಆಗಿ ಕಾರ್ಯನಿರ್ವಹಿಸಿದ್ದ ಜಯವರ್ಧನೆ ವಿಶ್ವಕಪ್‌ನಲ್ಲೂ ಇಂಗ್ಲೆಂಡ್ ತಂಡದಲ್ಲಿ ಸಲಹೆಗಾರನ ಪಾತ್ರದಲ್ಲಿ ಮುಂದುವರಿಯಲಿದ್ದಾರೆ.
‘‘ನಿವೃತ್ತಿಯಾದ ತಕ್ಷಣವೇ ಕ್ರಿಕೆಟಿಗನೋರ್ವ ಮತ್ತೊಂದು ತಂಡವನ್ನು ಸೇರಿಕೊಳ್ಳುವುದು ಸರಿಯಲ್ಲ. ನಿವೃತ್ತಿಯಾಗಿ ಎರಡು ವರ್ಷಗಳ ನಂತರ ಬೇರೊಂದು ತಂಡದಲ್ಲಿ ಕೆಲಸ ಮಾಡಿದರೆ ಉತ್ತಮ’’ ಎಂದು ಜಯವರ್ಧನೆ ಹೆಸರು ಉಲ್ಲೇಖಿಸದೇ ಎಸ್‌ಎಲ್‌ಸಿ ಚೇರ್‌ಮನ್ ತಿಲಂಗ ಸುಮಥಿಪಾಲಾ ವರದಿಗಾರರಿಗೆ ತಿಳಿಸಿದರು.
‘‘ನಿವೃತ್ತಿಯ ಬೆನ್ನಿಗೇ ಬೇರೊಂದು ತಂಡವನ್ನು ಸೇರಿಕೊಂಡರೆ ಆ ಆಟಗಾರನಿಗೆ ತನ್ನ ದೇಶದ ಕ್ರಿಕೆಟ್ ತಂಡದ ಆಂತರಿಕ ವಿಷಯ, ತಂಡದ ಶಕ್ತಿ, ದೌರ್ಬಲ್ಯ ಚೆನ್ನಾಗಿ ಗೊತ್ತಿರುತ್ತದೆ. ಇದು ಕ್ರೀಡೆಯಲ್ಲಿನ ನೈತಿಕ ಪ್ರಶ್ನೆಯಾಗಿದೆ. ತನಗೆ ವೈಯಕ್ತಿಕವಾಗಿ ಜಯವರ್ಧನೆಯ ಕುರಿತು ಕೋಪವಿಲ್ಲ. ಅವರಲ್ಲಿ ಕ್ರಿಕೆಟ್ ಕುರಿತು ಇರುವ ವಿಶಾಲ ಅನುಭವಕ್ಕೆ ಗೌರವ ನೀಡುವೆ’’ ಎಂದು ಸುಮಥಿವಾಲಾ ತಿಳಿಸಿದ್ದಾರೆ.
ಜಯವರ್ಧನೆ 2014ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿಯಾಗಿದ್ದರು. ಜಯವರ್ಧನೆ ನಿವೃತ್ತಿಯ ಬಳಿಕ ಶ್ರೀಲಂಕಾದ ಪ್ರದರ್ಶನ ಮಟ್ಟ ಇಳಿಮುಖವಾಗಿದೆ.







