ಯಮುನಾ ನದಿ ಮಲಿನ: 120 ಕೋಟಿ ರೂ. ದಂಡ ಪಾವತಿಸಲಿರುವ ಆರ್ಟ್ ಆಫ್ ಲಿವಿಂಗ್ ಸಂಸ್ಥೆ

ಹೊಸದಿಲ್ಲಿ: ಯಮುನಾ ನದಿ ತೀರದಲ್ಲಿ ಮಾರ್ಚ್ 11 ರಿಂದ 13ರವರೆಗೆ ನಡೆಯುವ ಬೃಹತ್ ಕಾರ್ಯಕ್ರಮದಿಂದ ಯಮುನಾ ನದಿಗೆ ಆಗುವ ಹಾನಿಗೆ ಸುಮಾರು 120 ಕೋಟಿ ರೂಪಾಯಿ ದಂಡ ಪಾವತಿಸುವ ಸರದಿ ಇದೀಗ ಆರ್ಟ್ ಆಫ್ ಲಿವಿಂಗ್ ಸಂಘಟನೆಗೆ ಬಂದಿದೆ. ಈ ಬೃಹತ್ ಸಮಾವೇಶದಲ್ಲಿ ಸುಮಾರು 35 ಲಕ್ಷ ಮಂದಿ ಪಾಲ್ಗೊಳ್ಳುವ ನಿರೀಕ್ಷೆ ಇದೆ ಎನ್ನಲಾಗಿದೆ.
ರಾಷ್ಟ್ರೀಯ ಹಸಿರು ನ್ಯಾಯಪೀಠದ ತಂಡ ಸುಮಾರು 100ರಿಂದ 120 ಕೋಟಿ ರೂಪಾಯಿ ಹಾನಿಯಾಗಬಹುದು ಎಂದು ಅಂದಾಜಿಸಿದೆ. ಯಮುನಾ ನದಿಯ ಪಶ್ಚಿಮ ದಂಡೆಗೆ ಆಗುವ ಹಾನಿಯ ಪ್ರಮಾಣವನ್ನು ಸರಿಪಡಿಸಲು ಆಗುವ ವೆಚ್ಚವನ್ನು ಅಂದಾಜು ಮಾಡಿದ್ದು, ಸಮಾರಂಭಕ್ಕೆ ಮುನ್ನವೇ ಅದನ್ನು ಸಂಗ್ರಹಿಸುವಂತೆ ಸೂಚಿಸಲಾಗಿದೆ.
ಈ ಸಮಾರಂಭವನ್ನು ಆಯೋಜಿಸುತ್ತಿರುವ ಆರ್ಟ್ ಆಫ್ ಲಿವಿಂಗ್ ಫೌಂಡೇಷನ್, ದಂಡದ ರೂಪದಲ್ಲಿ ಈ ವೆಚ್ಚವನ್ನು ಭರಿಸಬೇಕು ಎಂದು ನಾಲ್ಕು ಮಂದಿಯ ತಂಡ ಶಿಫಾರಸ್ಸು ಮಾಡಿದೆ. ಜಲಸಂಪನ್ಮೂಲ ಸಚಿವಾಲಯದ ಕಾರ್ಯದರ್ಶಿ ಶಶಿಶೇಖರ್ ನೇತೃತ್ವದ ಸಮಿತಿಯಲ್ಲಿ, ಅರಣ್ಯ ಇಲಾಖೆಯ ಸಿ.ಆರ್.ಬಾಬು, ದಿಲ್ಲಿ ಐಐಟಿಯ ಪ್ರೊ.ಎ.ಕೆ.ಗೋಶಿಯನ್ ಹಾಗೂ ಜೈಪುರದ ಬ್ರಿಜ್‌ಗೋಪಾಲ್ ಇದ್ದಾರೆ.
ದೈತ್ಯಗಾತ್ರದ ಯಂತ್ರಗಳು ಸುಮಾರು 1000 ಎಕರೆ ಜಾಗವನ್ನು ಸಮತಟ್ಟು ಮಾಡಿದ್ದು, ಸಮಾರಂಭಕ್ಕೆ ಅಗತ್ಯವಾದ ಸಕಲ ಸೌಲಭ್ಯಗಳನ್ನು ಇಲ್ಲಿ ಒದಗಿಸಲಾಗುತ್ತದೆ. ವೇದಿಕೆಯೇ ಏಳು ಎಕರೆಯಷ್ಟಿರುತ್ತದೆ ಎಂದು ಹೇಳಲಾಗಿದೆ.







