ಐಸಿಸ್ ವಿರುದ್ಧ ಮುಸ್ಲಿಮರು ಒಂದಾಗಬೇಕು : ಹುಸೈನ್ ಸಅದಿ

ಕಾರ್ಕಳ, ಫೆ.28: ಭಯೋತ್ಪಾದನೆಗೆ ಇಸ್ಲಾಂನ ಬೆಂಬಲವಿಲ್ಲ. ಜಾಗತಿಕವಾಗಿ ಮುಸ್ಲಿಮರೆಂದರೆ ಭಯೋತ್ಪಾದಕರು ಎಂಬಂತಹ ಭಯದ ವಾತಾವರಣ ಸೃಷ್ಠಿಯಾಗಿದೆ. ಜಿಹಾದ್ ಎಂಬುದು ಭಯೋತ್ಪಾದನೆ ಅಲ್ಲ, ಅದು ನಮ್ಮ ಮನಸ್ಸಿಗೆ ಸಂಬಂಧಿಸಿದು. ಕೋಮುವಾದ ಹಾಗೂ ಭಯೋತ್ಪಾದನೆ ಮಾಡುವವರನ್ನು ಪ್ರವಾದಿಯವರು ನಮ್ಮವರಲ್ಲ ಎಂದು 14 ಶತಮಾನಗಳ ಹಿಂದೆಯೇ ಹೇಳಿದ್ದರು ಎಂದು ಖ್ಯಾತ ಯುವ ವಾಗ್ಮಿ, ಸಾಹಿತಿ, ಎಸ್ಸೆಸ್ಸೆಫ್ ರಾಜ್ಯ ನಾಯಕ ಹುಸೈನ್ ಸಅದಿ ಅವರು ತಿಳಿಸಿದರು.
ತಾಲೂಕಿನ ಈದು ಗ್ರಾಮದ ಹೊಸ್ಮಾರಿನ ಶೈಖ್ ಮುಹಿಯುದ್ದೀನ್ ಜುಮಾ ಮಸೀದಿ, ರಝಾ ಎ ಮುಸ್ತಫಾ ಎಸೋಶಿಯೇಶನ್, ಸುನ್ನಿ ಬಾಲ ಸಂಘ ಇದರ ಆಶ್ರಯದಲ್ಲಿ ಫೆ.28ರಂದು ನಡೆದ ಭಯೋತ್ಪಾದನೆ ವಿರುದ್ಧ ಜಿಹಾದ್ ಸೈಕಲ್ ಜಾಥಾದಲ್ಲಿ ಪಾಲ್ಗೊಂಡ ಅವರು ಜಾಥಾವನ್ನುದ್ದೇಶಿಸಿ ಮಾತನಾಡಿದರು.
ಇಸ್ಲಾಂ ಶಾಂತಿಯನ್ನು ಸಾರುವ ಧರ್ಮವಾಗಿದೆ. ಐಸಿಸ್‌ಗೂ ನಮ್ಮ ಧರ್ಮಕ್ಕೂ ಯಾವುದೇ ರೀತಿಯ ಸಂಬಂಧವಿಲ್ಲ. ಜಗತ್ತಿನ ಎಲ್ಲ ಮುಸಲ್ಮಾನರು ಇಸ್ಲಾಂನ ಹೆಸರು ಹಾಳುಗೆಡವುತ್ತಿರುವ ಐಸಿಸ್ ಬಗ್ಗೆ ಎಚ್ಚರಿಕೆಯಿಂದಿರಬೇಕು. ಜಾಗತಿಕವಾಗಿ ಭಯೋತ್ಪಾದಕರೆಂದರೆ ಮುಸಲ್ಮಾನರು ಎಂಬ ಸನ್ನಿವೇಶ ನಿರ್ಮಿಸಿದ್ದೇ ಐಸಿಸ್. ಯುವಜನತೆ ಧರ್ಮದ ಬಗ್ಗೆ ಸರಿಯಾದ ಜ್ಞಾನ ಬೆಳೆಸಿಕೊಂಡಲ್ಲಿ ಜಿಹಾದ್‌ನ ನೈಜ ಅರ್ಥ ತಿಳಿಯಬಹುದಾಗಿದೆಎಂದರು.
ಶೈಖ್ ಮುಹಿಯದ್ದೀನ್ ಜುಮಾ ಮಸೀದಿಯ ಖತೀಬ್ ಅಶ್ರಫ್ ಮದನಿ, ಅಧ್ಯಕ್ಷ ಅಬೂಬಕ್ಕರ್ ಸಿದ್ದೀಕ್ ಗುಂಪಕಲ್ಲು, ಕಾರ್ಯದರ್ಶಿ ಎಂ.ಹೆಚ್. ಹಸನ್ ಅಹ್ಮದ್, ಎಸ್ಸೆಸ್ಸೆಫ್‌ನ ರಹೀಮ್ ಎನ್.ಸಿ., ಅಬ್ದುರಹ್ಮಾನ್ ಮುಸ್ಲಿಯಾರ್, ಶರೀಫ್ ಮದನಿ, ಮೌಲಾನಾ ಇಮ್ರಾನ್, ರಝಾ ಎ ಮುಸ್ತಫಾ ಮಸೀದಿಯ ಅಧ್ಯಕ್ಷ ಅಬ್ದುಲ್ ಸತ್ತಾರ್, ಎನ್.ಸಿ. ಅಹ್ಮದ್ ಉಪಸ್ಥಿತರಿದ್ದರು.










