ಕೆಟ್ಟ ಸಾಲಗಳ ನಿಭಾವಣೆಗೆ ವಿನೋದ್ ರಾಯ್ ನೇತೃತ್ವದಲ್ಲಿ ಬ್ಯಾಂಕ್ಸ್ ಬೋರ್ಡ್ ಬ್ಯೂರೋ ರಚನೆ

ಹೊಸದಿಲ್ಲಿ,ಫೆ.28: ಕೆಟ್ಟ ಸಾಲಗಳು ಸೃಷ್ಟಿಸಿರುವ ಬಿಕ್ಕಟ್ಟನ್ನು ಎದುರಿಸಲು ಬ್ಯಾಂಕ್ಸ್ ಬೋರ್ಡ್ ಬ್ಯೂರೋ(ಬಿಬಿಬಿ)ದ ರಚನೆಗೆ ಪ್ರಧಾನಿ ನರೇಂದ್ರ ಮೋದಿಯವರು ಹಸಿರು ನಿಶಾನೆ ತೋರಿಸಿದ್ದಾರೆ. ಬಿಬಿಬಿ ಬ್ಯಾಂಕುಗಳ ಕಾರ್ಯ ನಿರ್ವಹಣೆಯಲ್ಲಿ ರಾಜಕೀಯ ಹಸ್ತಕ್ಷೇಪವನ್ನು ಕಡಿಮೆ ಮಾಡಲಿದೆ ಎಂದು ಮೂಲಗಳು ತಿಳಿಸಿವೆ.
ಮಾಜಿ ಸಿಎಜಿ ವಿನೋದ್ ರಾಯ್ ಅವರು ಬಿಬಿಬಿಯ ಅಧ್ಯಕ್ಷರಾಗಲಿದ್ದು,ಬ್ಯಾಂಕ್ ಆಫ್ ಬರೋಡಾದ ಮಾಜಿ ಮುಖ್ಯಸ್ಥ ಅನಿಲ ಖಂಡೇಲವಾಲ್,ಐಸಿಐಸಿಐ ಬ್ಯಾಂಕಿನ ಮಾಜಿ ಜಂಟಿ ವ್ಯವಸ್ಥಾಪಕ ನಿರ್ದೇಶಕ ಎಚ್.ಎನ್.ಸಿನಾರ್ ಮತ್ತು ಕ್ರಿಸಿಲ್‌ನ ಮಾಜಿ ಮುಖ್ಯಸ್ಥೆ ರೂಪಾ ಕುಡ್ವಾ ಅವರು ಸದಸ್ಯರಾಗಿರುತ್ತಾರೆ.
ಬಿಬಿಬಿಯು ಸರಕಾರಿ ಸ್ವಾಮ್ಯದ ಬ್ಯಾಂಕುಗಳಲ್ಲಿ ನಿರ್ದೇಶಕರ ನೇಮಕಾತಿಗೆ ಶಿಫಾರಸು ಮಾಡುವ ಜೊತೆಗೆ ಸಂಪನ್ಮೂಲಗಳ ಕ್ರೋಢೀಕರಣ ಮತ್ತು ಒತ್ತಡದಲ್ಲಿರುವ ಆಸ್ತಿಗಳ ವಿಷಯಗಳ ನಿರ್ವಹಣೆಯ ಬಗ್ಗೆ ಸಲಹೆಗಳನ್ನು ನೀಡಲಿದೆ. ಅದು ಬ್ಯಾಂಕ್ ಹೋಲ್ಡಿಂಗ್ ಕಂಪನಿಯೂ ಆಗಿ ಕಾರ್ಯ ನಿರ್ವಹಿಸಲಿದ್ದು, ಸಾರ್ವಜನಿಕ ಕ್ಷೇತ್ರದ ಬ್ಯಾಂಕುಗಳಲ್ಲಿನ ಎಲ್ಲ ಸರಕಾರಿ ಹೂಡಿಕೆಗಳನ್ನು ತನ್ನ ನಿಯಂತ್ರಣದಲ್ಲಿ ಹೊಂದಿರುತ್ತದೆ ಎಂದು ಮೂಲಗಳು ತಿಳಿಸಿದವು.
2015,ಡಿ.31ಕ್ಕೆ ಇದ್ದಂತೆ ಸರಕಾರಿ ಸ್ವಾಮ್ಯದ ಬ್ಯಾಂಕುಗಳು ಸುಮಾರು ನಾಲ್ಕು ಲಕ್ಷ ಕೋ.ರೂ.ಕೆಟ್ಟ ಸಾಲಗಳನ್ನು ಹೊಂದಿದ್ದು, ಇದು ಬ್ಯಾಂಕಿಂಗ್ ಕ್ಷೇತ್ರದಲ್ಲಿ ಬಿಕ್ಕಟ್ಟನ್ನು ಸೃಷ್ಟಿಸಿದೆ. ಎಸ್‌ಬಿಐ ಮತ್ತು ಅದರ ಸಹವರ್ತಿ ಬ್ಯಾಂಕುಗಳು ಸೇರಿದಂತೆ ಶೇರು ವಿನಿಮಯ ಕೇಂದ್ರಗಳಲ್ಲಿ ಲಿಸ್ಟ್ ಆಗಿರುವ 24 ಸರಕಾರಿ ಸ್ವಾಮ್ಯದ ಬ್ಯಾಂಕುಗಳ ಒಟ್ಟೂ ಅನುತ್ಪಾದಕ ಆಸ್ತಿಗಳ ಮೊತ್ತ 2015,ಡಿ.31ಕ್ಕೆ ಇದ್ದಂತೆ 3,93,035 ಲಕ್ಷ ಕೋಟಿ ರೂ.ಗಳಾಗಿವೆ ಎನ್ನುವುದನ್ನು ಬ್ಯಾಂಕುಗಳ ಇತ್ತೀಚಿನ ತ್ರೈಮಾಸಿಕ ವರದಿಗಳ ವಿಶ್ಲೇಷಣೆಯು ಬೆಟ್ಟು ಮಾಡಿದೆ. ಇದು ಅವುಗಳ ಈಗಿನ ಒಟ್ಟೂ ಮಾರುಕಟ್ಟೆ ವೌಲ್ಯ(2,62,955 ಲ.ಕೋ.ರೂ.)ದ ಒಂದೂವರೆ ಪಟ್ಟಿನಷ್ಟಿದೆ.







