ಮೂಡುಬಿದಿರೆ : "ತೋಟಗಾರಿಕಾ ಬೆಳೆಗಳ ಸಂಸ್ಕರಣೆ ಮತ್ತು ಮಾರುಕಟ್ಟೆ" ಕಾರ್ಯಾಗಾರ

ಮೂಡುಬಿದಿರೆ : ದ.ಕ ಮತ್ತಯ ಉಡುಪಿ ಜಿಲ್ಲಾ ಹಾಪ್‌ಕಾಮ್ಸ್ ಮಂಗಳೂರು ಇವುಗಳ ಪ್ರಾಯೋಜಕತ್ವದಲ್ಲಿ ಮೂಡುಬಿದಿರೆ ಕೃಷಿ ವಿಚಾರ ವಿನಿಮಯ ಕೇಂದ್ರದ ಸಹಯೋಗದಲ್ಲಿ ಇಲ್ಲಿನ ಎಂ.ಸಿ.ಎಸ್ ಬ್ಯಾಂಕ್‌ನ ಕಲ್ಪತರು ಸಭಾಂಗಣದಲ್ಲಿ "ತೋಟಗಾರಿಕಾ ಬೆಳೆಗಳ ಸಂಸ್ಕರಣೆ ಮತ್ತು ಮಾರುಕಟ್ಟೆ"ಯ ಬಗ್ಗೆ ಕಾರ್ಯಾಗಾರ ಶನಿವಾರ ನಡೆಯಿತು. ಕಲ್ಲಬೆಟ್ಟು ಎಕ್ಸಲೆಂಟ್ ಕಾಲೇಜಿನ ಅಧ್ಯಕ್ಷ ಯುವರಾಜ ಜೈನ್ ಕಾರ್ಯಾಗಾರವನ್ನು ಉದ್ಘಾಟಿಸಿ ಪರಿಸರವನ್ನು ಹಸಿರುಮಯಗೊಳಿಸುವುದು ನಮ್ಮೆಲ್ಲರ ಕರ್ತವ್ಯ. ಇಂದು ನಶಿಸಿ ಹೋಗುತ್ತಿರುವ ಕೃಷಿ ಮತ್ತು ಬೆಳೆಗಳನ್ನು ಮತ್ತೆ ಅಭಿವೃದ್ಧಿಗೊಳಿಸಲು ವೈಜ್ಞಾನಿಕ ರೀತಿಯಲ್ಲಿ ಹೊಸ ಹೊಸ ಮಾದರಿಗಳಲ್ಲಿ ಪರಿವರ್ತನೆ ಮಾಡುವ ಅಗತ್ಯವಿದೆ. ಸಂಸ್ಕರಣೆ ಮತ್ತು ಮಾರುಕಟ್ಟೆಗೆ ಪೂರಕವಾಗುವ ಪರಿಕಲ್ಪನೆಗಳನ್ನು ಯೋಚಿಸಬೇಕಾಗಿದೆ ಈ ನಿಟ್ಟಿನಲ್ಲಿ ಇಂತಹ ಕಾರ್ಯಾಗಾರಗಳ ಅಗತ್ಯವಿದೆ ಎಂದು ಹೇಳಿದರು.
ದ.ಕ, ಉಡುಪಿ ಜಿಲ್ಲಾ ಹಾಪ್‌ಕಾಮ್ಸ್ ಅಧ್ಯಕ್ಷ ಕೆ. ಲಕ್ಷ್ಮೀ ನಾರಾಯಣ ಉಡುಪ ಅಧ್ಯಕ್ಷತೆಯನ್ನು ವಹಿಸಿ ತೋಟಗಾರಿಕಾ ಬೆಳೆಗಳ ಸಂಸ್ಕರಣೆ ಮತ್ತು ಯಾವ ರೀತಿಯಾಗಿ ಮಾರುಕಟ್ಟೆ ಮಾಡಬಹುದು ಎಂಬುದರ ಬಗ್ಗೆ ಮಾಹಿತಿಯನ್ನು ನೀಡಿದರು. ಮೂಡುಬಿದಿರೆ ಕೃಷಿ ವಿಚಾರ ವಿನಿಮಯ ಕೇಂದ್ರದ ಅಧ್ಯಕ್ಷ ರಾಜವರ್ಮ ಬೈಲಂಗಡಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ನಮ್ಮ ಉತ್ತಮ ಆರೋಗ್ಯಕ್ಕಾಗಿ ಕೃಷಿಯ ಅವಶ್ಯಕತೆಯಿದೆ. ಕೃಷಿಯಲ್ಲಿ ಲಾಭವಿಲ್ಲ ಎಂಬ ಮನೋಭಾವನೆ ಕೆಲವರಲ್ಲಿ ಬೆಳೆದಿದೆ ಇದು ತಪ್ಪು. ಒಂದೇ ರೀತಿಯ ಕೃಷಿಗಳನ್ನು ಮಾಡದೆ ಬೇರೆ ಬೇರೆ ತರಹದ ಕೃಷಿಗಳನ್ನು ಮಾಡಿದರೆ ಹೆಚ್ಚಿನ ಲಾಭವಿದೆ. ಈ ಬಗ್ಗೆ ಕೃಷಿಕರು ತಿಳಿದುಕೊಳಳಬೇಕಾಗಿದೆ ಎಂದು ಹೇಳಿದರು. ಹಾಪ್‌ಕಾಮ್ಸ್‌ನ ಅವಿಭಜಿತ ಜಿಲ್ಲಾ ಉಪಾಧ್ಯಕ್ಷ ಹರೀಶ್, ನಿರ್ದೇಶಕಿ ವಿನಯ ರಾನಡೆ, ಮೂಡುಬಿದಿರೆ ಎಂ.ಸಿ.ಎಸ್ ಬ್ಯಾಂಕಿನ ವ್ಯವಸ್ಥಾಪಕ ಚಂದ್ರಶೇಖರ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಅವಿಭಜಿತ ಜಿಲ್ಲೆಯ ಹಾಪ್‌ಕಾಮ್ಸ್‌ನ ವ್ಯವಸ್ಥಾಪಕ ನಿರ್ದೇಶಕ, ಸಹಾಯಕ ತೋಟಗಾರಿಕಾ ನಿರ್ದೇಶಕ ಪ್ರದೀಪ್ ಡಿ’ಸೋಜಾ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದರು.
ರೈತ ಸಂಘದ ವಲಯಾಧ್ಯಕ್ಷ ಹೆಚ್.ಧನಕೀರ್ತಿ ಬಲಿಪ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಸದಾಶಿವ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಕೃಷಿ ವಿಚಾರ ವಿನಿಮಯ ಕೇಂದ್ರದ ಸುಜಾತ ವಂದಿಸಿದರು.







