ಮಂಗಳೂರು : ಕೊಲೆ ಪ್ರಕರಣ - ಮೂವರು ಆರೋಪಿಗಳ ಬಂಧನ
ಮಂಗಳೂರು, ಫೆ. 28: ಬೆಳ್ತಂಗಡಿ ತಾಲೂಕಿನ ತೋಟತ್ತಾಡಿ ಗ್ರಾಮದ ಇರ್ಟಡ್ಕ ಎಂಬಲ್ಲಿ ಫೆಬ್ರವರಿ 15ರಂದು ನಡೆದಿದ್ದ ಪೀಟರ್ ಎಂ.ಜೆ. ಎಂಬಾತನ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಇಂದು ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿಗಳಾದ ತೋಟತ್ತಾಡಿ ಗ್ರಾಮದ ಎಂ.ಎ. ಥೋಮಸ್ ( 54), ನೆರಿಯಾ ಗ್ರಾಮದ ಸಾಜು ಥೋಮಸ್ (38), ತೋಟತ್ತಾಡಿ ಗ್ರಾಮದ ಅಂತೋನಿ ಎಂ.ಜೆ (54) ಎಂಬವರನ್ನು ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಇದೇ ತಿಂಗಳ ಫೆಬ್ರವರಿ 15ರಂದು ಸಂಜೆ ಸುಮಾರು 5 ಗಂಟೆಗೆ ಇರ್ಟಡ್ಕ ಎಂಬಲ್ಲಿ ದುಷ್ಕರ್ಮಿಗಳ ತಂಡವೊಂದು ಪೀಟರ್ ಎಂ.ಜೆ.ಎಂಬವರಿಗೆ ಮಾರಕಾಸ್ತ್ರಗಳಿಂದ ಕಡಿದು ಹಲ್ಲೆ ನಡೆಸಿತ್ತು. ಗಂಭೀರ ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಅದೇ ದಿನ ಸಂಜೆ ಸುಮಾರು 7:30ಕ್ಕೆ ಮೃತಪಟ್ಟಿದ್ದರು. ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡ ಪೊಲೀಸರು ಆರೋಪಿಗಳ ಪತ್ತೆಗಾಗಿ ವಿಶೇಷ ತಂಡವನ್ನು ರಚಿಸಲಾಗಿತ್ತು. ಮಾಹಿತಿಯನ್ನು ಕಲೆ ಹಾಕಿದ ತಂಡ ಆರೋಪಿಗಳ ಪೈಕಿ ಮೂವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಉಳಿದವರಿಗಾಗಿ ಶೋಧ ಕಾರ್ಯ ಮುಂದುವರಿದಿದೆ.
ಕಾರ್ಯಾಚರಣೆಗೆ ಹೆಚ್ಚುವರಿ ಪೊಲೀಸ್ ಅಧೀಕ್ಷಕ ವಿನ್ಸೆಂಟ್ ಶಾಂತ ಕುಮಾರ್, ಡಿ.ವೈಎಸ್.ಪಿ ಬಂಟ್ವಾಳ ಉಪ ವಿಭಾಗದ ಭಾಸ್ಕರ ರೈ ಎನ್.ಜಿ, ಬೆಳ್ತಂಗಡಿ ಠಾಣಾ ಸಿಪಿಐ ಬಿ.ಆರ್. ಲಿಂಗಪ್ಪ ಪಿಎಸ್‌ಐ ಸಂದೇಶ್ ಪಿ.ಜಿ., ಧರ್ಮಸ್ಥಳ ಠಾಣೆಯ ಪಿಎಸ್‌ಐ ಸುಧಾಕರ ತೋನ್ಸೆ, ಮಾಧವ ಕೂಡ್ಲು, ಸಿಬ್ಬಂದಿಗಳಾದ ಆಶೋಕ್ ಸಫಲ್ಯ, ವೆಂಕಟೇಶ್, ಪೌಲೋಸ್. ಸಿ.ಜೆ, ಕರುಣಾಕರ, ಥೋಮಸ್, ವಿಶ್ವನಾಥ ನಾಯ್ಕ, ಪ್ರವೀಣ್ ಮೂರುಗೋಳಿ, ಹರೀಶ್ ಸಿದ್ದಕಟ್ಟೆ, ರವಿ, ಶಿವರಾಮ ರೈ, ಗೀತಾ ಸಹಕರಿಸಿದ್ದರು.







