ಬೆಂಗಳೂರು :ವಿಧಾನಮಂಡಲ ಅಧಿವೇಶನ ನಾಳೆಯಿಂದ ಪ್ರಾರಂಭ
ಬೆಂಗಳೂರು.ಫೆ.28: ವಿಧಾನಮಂಡಲ ಅಧಿವೇಶನ ನಾಳೆಯಿಂದ ಪ್ರಾರಂಭವಾಗಲಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ದುಬಾರಿ ವಾಚ್ ಪ್ರಕರಣ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ಆರೋಪ - ಪ್ರ್ಯಾರೋಪಗಳಿಗೆ ವೇದಿಕೆಯಾಗಲಿದೆ.
ವರ್ಷದ ಮೊದಲ ಜಂಟಿ ಅಧಿವೇಶನ ಉದ್ದೇಶಿಸಿ ರಾಜ್ಯಪಾಲ ವಜೂಬಾಯಿ ವಾಲಾ ಅವರು ಭಾಷಣ ಮಾಡಲಿದ್ದು, ಈ ಬಾರಿ ಅಧಿವೇಶನ ಭಾರಿ ಮಾತಿನ ಚಕಮಕಿಗೆ ವೇದಿಕೆಯಾಗಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹ್ಯೂಬ್ಲಾಟ್ ದುಬಾರಿ ವಾಚ್ ಪ್ರಕರಣದ ಬಗ್ಗೆ ಜೆಡಿಎಸ್‌ನ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರ ಸ್ವಾಮಿ ಪ್ರಸ್ತಾಪಿಸುವ ನಿರೀಕ್ಷೆಯಿದೆ. ಬಿಜೆಪಿ ಸಹ ಇದೇ ವಿಚಾರದ ಬಗ್ಗೆ ರ್ಚೆಗೆ ಒತ್ತಾಯಿಸುವ ಸಂಭವವಿದೆ.
ಸಿದ್ದರಾಮಯ್ಯ ಅವರ ವಾಚ್ ಪ್ರಕರಣದ ಬಗ್ಗೆ ಈಗಾಗಲೇ ಜಾರಿ ನಿರ್ದೇಶನಾಲಯಕ್ಕೆ ದೂರು ಸಲ್ಲಿಕೆಯಾಗಿದ್ದು, ಬಿಜೆಪಿ ಕೂಡ ಈ ಅಸ್ತ್ರವನ್ನು ಬಳಕೆ ಮಾಡಿಕೊಳ್ಳಲು ಉತ್ಸುಕವಾಗಿದೆ. ಆಡಳಿತರೂಢ ಕಾಂಗ್ರೆಸ್ ನಾಯಕರು ಸಹ ಈ ಅಸ್ತ್ರವನ್ನು ಎದುರಿಸಲು ಸನ್ನದ್ಧರಾಗಿದ್ದು, ಬಿಜೆಪಿ ನಾಯಕರು ಹೊಂದಿರುವ ದುಬಾರಿ ವಸ್ತುಗಳ ಬಗ್ಗೆ ಮಾಹಿತಿ ಕಲೆ ಹಾಕಿದ್ದಾರೆ. ಆದರೆ ಬಿಜೆಪಿ ಪ್ರಸ್ತಾಪಿಸಿದರೆ ಮಾತ್ರ ಪ್ರತ್ಯುತ್ತರ ನೀಡಲು ಸಿದ್ದರಾುಯ್ಯ ಉದ್ದೇಶಿಸಿದ್ದಾರೆ ಎನ್ನಲಾಗಿದೆ.
ವಾಚ್ ಪ್ರಕರಣದ ಜತೆಗೆ ರಾಜ್ಯದಲ್ಲಿ ತಲೆ ದೋರಿರುವ ಗಂಭೀರ ವಿದ್ಯುತ್ ಸಮಸ್ಯೆ, ಕುಡಿಯುವ ನೀರಿನ ಹಾಹಾಕಾರ, ಬರ ಪರಿಸ್ಥಿತಿ ನಿಭಾಯಿಸುವಲ್ಲಿ ಸಚಿವರ ನಿರ್ಲಕ್ಷ್ಯ ಧೋರಣೆಯ ಬಗ್ಗೆ ವಿಪಕ್ಷಗಳು ಸರ್ಕಾರವನ್ನು ತಿದ್ದಿ ತಿವಿಯಲು ಮುಂದಾಗಿದೆ. ಜಿಲ್ಲಾ ಮತ್ತು ತಾಲ್ಲೂಕು ಪಂಚಾಯತ್ ಚುನಾವಣೆಯಲ್ಲಿ ಉತ್ತಮ ಸಾಧನೆ ಮಾಡಿರುವ ಬಿಜೆಪಿ ಸಹಜವಾಗಿಯೇ ಮೈ ಕೊಡವಿಕೊಂಡು ಎದ್ದು ನಿಂತಿದೆ. ಉಭಯ ಸದನಗಳಲ್ಲಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಬಿಜೆಪಿ ನಾಯಕರು ಕಾರ್ಯಮಗ್ನರಾಗಿದ್ದಾರೆ. ಇತ್ತೀಚಿಗೆ ನಡೆದ ಮೂರು ವಿಧಾನಸಭಾ ಕ್ಷೇತ್ರ ಉಪ ಚುನಾವಣೆಯಲ್ಲಿ ಎರಡು ಕ್ಷೇತ್ರಗಳನ್ನು ಗೆದ್ದು ಹುಮ್ಮಸ್ಸಿನಲ್ಲಿರುವ ಬಿಜೆಪಿ ಈ ಬಾರಿ ಮತ್ತುಷ್ಟುಹುರುಪಿನಿಂದ ಮುನ್ನುಗ್ಗಲಿದ್ದಾರೆ.
ಆಂತರಿಕ ಸಮಸ್ಯೆಗಳಿಂದ ನಲುಗಿರುವ ಜೆಡಿಎಸ್‌ನಲ್ಲಿ ಸರ್ಕಾರದ ವಿರುದ್ಧದ ಹೋರಾಟಕ್ಕೆ ನಾಯಕರ ನಿರಾಸಕ್ತಿ ಕಂಡು ಬಂದಿದೆ. ಜೆಡಿಎಸ್‌ನ ಹಲವು ಪ್ರಭಾವಿ ನಾಯಕರು ರಾಜ್ಯ ಸರ್ಕಾರವನ್ನು ಅದರಲ್ಲೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸಮರ್ಥಿಸಿಕೊಂಡು ಮಾತನಾಡುತಿ್ತರುವುದೇ ಇದಕ್ಕೆ ಸಾಕ್ಷಿಯಾಗಿದೆ.
ಜೆಡಿಎಸ್‌ನ ಜಮೀರ್ ಅಹಮದ್ ಖಾನ್, ಚೆಲುವರಾಯ ಸ್ವಾಮಿ, ಬಾಲಕೃಷ್ಣ ಮತ್ತಿತರರು ಕುಮಾರ ಸ್ವಾಮಿ ಬಗ್ಗೆ ಅಸಮಾಧಾನಗೊಂಡಿದ್ದಾರೆ. ಸಿದ್ದರಾಮಯ್ಯ ಪರ ಸಹಾನುಭೂತಿ ಹೊಂದಿದ್ದಾರೆ. ಇದೇ ಪರಿಸ್ಥಿತಿ ಮೇಲ್ಮನೆಯಲ್ಲೂ ಸಹ ಇದೆ.
ಮಾರ್ಚ್ 1 ರಿಂದ 5ರವರೆಗೆ ರಾಜ್ಯಪಾಲರ ಭಾಷಣದ ವಂದನಾ ನಿರ್ಣಯದ ಮೇಲೆ ಚರ್ಚೆ, ಅಂಗೀಕಾರ, ಪ್ರಶ್ನೋತ್ತರ ಕಲಾಪ ಹಾಗೂ ಇತರೆ ಸಾರ್ವಜನಿಕ ಮಹತ್ವದ ವಿಷಯಗಳ ಚರ್ಚೆ ನಡೆಯಲಿದೆ. ಜನರ ಸಮಸ್ಯೆಗಳಿಗೆ ವಿಶೇಷ ಆದ್ಯತೆ ದೊರೆಯುವ ಸಾಧ್ಯತೆಯಿದೆ.







