ಅಮೆರಿಕನ್ನರ ಉದ್ಯೋಗ ಕಸಿಯುತ್ತಿರುವ ಭಾರತ :ಮತ್ತೆ ಟ್ರಂಪ್ ಕಿರಿಕ್

ಕೊಲಂಬಿಯಾ, ಫೆ.28:: ಭಾರತ ಹಾಗೂ ಚೀನಾ ದೇಶಗಳು ಅಮೆರಿಕನ್ನರ ಉದ್ಯೋಗಗಳನ್ನು ಕಸಿಯುತ್ತಿವೆಯೆಂದು ಅಮೆರಿಕದ ಅಧ್ಯಕ್ಷೀಯ ಚುನಾವಣೆಗೆ ರಿಪಬ್ಲಿಕನ್ ಪಕ್ಷದ ಆಕಾಂಕ್ಷಿ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಶನಿವಾರ ಮತ್ತೊಮ್ಮೆ ದೂಷಿಸಿದ್ದಾರೆ. ತಾನು ಅಮೆರಿಕದ ಅಧ್ಯಕ್ಷೀಯ ಚುನಾವಣೆಯನ್ನು ಜಯಿಸಿದಲ್ಲಿ ಆ ಉದ್ಯೋಗಗಳನ್ನು ಮರಳಿ ತರಲಿದ್ದೇನೆ ಎಂದವರು ವಾಗ್ದಾನ ಮಾಡಿದ್ದಾರೆ.
ಮಂಗಳವಾರ 11 ರಾಜ್ಯಗಳಲ್ಲಿ ನಡೆಯಲಿರುವ ಅಮೆರಿಕದ ಅಧ್ಯಕ್ಷೀಯ ಅಭ್ಯರ್ಥಿ ಆಯ್ಕೆ ಚುನಾವಣೆಯು ಸನ್ನಿಹಿತವಾಗುತ್ತಿರುವಂತೆಯೇ, ಟ್ರಂಪ್ ಈ ಹೇಳಿಕೆಯನ್ನು ನೀಡಿರುವುದು ಹೆಚ್ಚಿನ ಮಹತ್ವವನ್ನು ಪಡೆದಿದೆ.
ಕೊಲಂಬಿಯಾದ ವಿಮಾನನಿಲ್ದಾಣ ಸಮೀಪ ಸುಮಾರು 5 ಸಾವಿರ ಮಂದಿ ಭಾಗವಹಿಸಿದ್ದ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದ ಟ್ರಂಪ್ ತಾನು ರಾಷ್ಟ್ರಾಧ್ಯಕ್ಷನಾಗಿ ಆಯ್ಕೆಯಾದಲ್ಲಿ ಅಮೆರಿಕವನ್ನು ಮತ್ತೊಮ್ಮೆ ಮಹಾನ್ ರಾಷ್ಟ್ರವಾಗಿ ಮಾಡುವುದಾಗಿ ಘೋಷಿಸಿದರು. ಭಾರತ, ಚೀನಾ, ಜಪಾನ್, ಮೆಕ್ಸಿಕೊ ದೇಶಗಳಿಗೆ ಹೊರಗುತ್ತಿಗೆ ನೀಡಲಾಗುತ್ತಿರುವ ಲಕ್ಷಾಂತರ ಅಮೆರಿಕನ್ ಉದ್ಯೋಗಗಳನ್ನು ಮರಳಿ ತಾಯ್ನೋಡಿಗೆ ತರುವುದಾಗಿ ಅವರು ಹೇಳಿದರು. ದಕ್ಷಿಣ ಅಮೆರಿಕದಿಂದ ಅಕ್ರಮ ವಲಸೆಯನ್ನು ತಡೆಗಟ್ಟಲು ಅಮೆರಿಕ-ಮೆಕ್ಸಿಕೊ ಗಡಿಯಲ್ಲಿ ಗೋಡೆಯನ್ನು ನಿರ್ಮಿಸಲಿರುವುದಾಗಿ ಅವರು ಪ್ರಕಟಿಸಿದರು. ಐಸಿಸ್ ಭಯೋತ್ಪಾದಕ ಸಂಘಟನೆಯನ್ನು ಸದೆಬಡಿಯುವುದಾಗಿ ಹೇಳಿದ ಅವರು, ಆರೋಗ್ಯಪಾಲನೆಗೆ ಸಂಬಂಧಿಸಿ ಜಾರಿಗೊಳಿಸಲಾಗಿರುವ ಒಬಾಮ ಕೇರ್ ಯೋಜನೆಯನ್ನು ರದ್ದುಪಡಿಸಿ, ಹೊಸ ಆರೋಗ್ಯ ಕಾರ್ಯಕ್ರಮ ಜಾರಿಗೆ ತರುವುದಾಗಿ ಅವರು ತಿಳಿಸಿದರು.
ಸೂಪರ್ ಮಂಗಳವಾರದಂದು ಅಧ್ಯಕ್ಷೀಯ ಅಭ್ಯರ್ಥಿ ಆಯ್ಕೆ ಚುನಾವಣೆ, ನಡೆಯಲಿರುವ 11 ರಾಜ್ಯಗಳ ಪೈಕಿ 10ರಲ್ಲಿ ಟ್ರಂಪ್ ಮುನ್ನಡೆ ಸಾಧಿಸಿದ್ದಾರೆಂದು ಚುನಾವಣೋತ್ತರ ಸಮೀಕ್ಷೆಗಳು ತಿಳಿಸಿದ್ದಾರೆ. ಆದರೆ ಟೆಕ್ಸಾಸ್‌ನಲ್ಲಿ ಎದುರಾಳಿ ಅಭ್ಯರ್ಥಿ ಟೆಡ್ ಕ್ರೂಝ್ ಮುನ್ನಡೆಯಲ್ಲಿದ್ದಾರೆ.
ಚೀನಾ ನಮ್ಮ ಉದ್ಯೋಗಗಳನ್ನು ಕಸಿಯುತ್ತಿದೆ, ಜಪಾನ್ ನಮ್ಮ ಉದ್ಯೋಗ ದೋಚುತ್ತಿದೆ. ಭಾರತ ನಮ್ಮ ಉದ್ಯೋಗಗಳನ್ನು ಕಸಿಯುತ್ತಿದೆ.ಇನ್ನು ಮುಂದೆ ಹೀಗಾಗುವುದಿಲ್ಲ ಸ್ನೇಹಿತರೇ...’’







