ಅಫ್ಘಾನ್: 22 ತಾಲಿಬಾನ್ ಬಂಡುಕೋರರ ಹತ್ಯೆ
ಕಾಬೂಲ್, ಫೆ.28: ಅಫ್ಘಾನಿಸ್ತಾ ದ ಬಾಗ್ಲಾನ್ ಪ್ರಾಂತದಲ್ಲಿ ಕಳೆದ 24 ತಾಸುಗಳಲ್ಲಿ ಭದ್ರತಾ ಸಿಬ್ಬಂದಿ ಜೊತೆ ನಡೆದ ಭೀಕರ ಕಾಳಗದಲ್ಲಿ ಕನಿಷ್ಠ 22 ತಾಲಿಬಾನ್ ಬಂಡುಕೋರರು ಹತ್ಯೆಯಾಗಿದ್ದಾರೆ. ದಾಂಡೆ ಘೋರಿ ಜಿಲ್ಲೆಯಲ್ಲಿ ಘರ್ಷಣೆ ನಡೆದಿರುವುದಾಗಿ, ಅಫ್ಘಾನ್ ಸೇನಾ ವಕ್ತಾರ ಅಹ್ಮದ್ ಜಾವೇದ್ ಅವರ ಹೇಳಿಕೆಯನ್ನು ಉಲ್ಲೇಖಿಸಿ ಕ್ಸಿನುವಾ ಸುದ್ದಿಸಂಸ್ಥೆ ವರದಿ ಮಾಡಿದೆ. ಘರ್ಷಣೆಯಲ್ಲಿ 22 ಮಂದಿ ತಾಲಿಬಾನ್ ಬಂಡುಕೋರರು ಮೃತಪಟ್ಟಿದ್ದು, ಇತರ 7 ಮಂದಿಗೆ ಗಾಯಗಳಾಗಿವೆಯೆಂದು ಅವರು ಹೇಳಿದ್ದಾರೆ. ಈ ಬಗ್ಗೆ ತಾಲಿಬಾನ್‌ನಿಂದ ಯಾವುದೇ ಹೇಳಿಕೆಯನ್ನು ನೀಡಿಲ್ಲ. ಬಾಗ್ಲಾನ್ ಪ್ರಾಂತದಲ್ಲಿ ದಾಂಡೆಘೋರಿ ಹಾಗೂ ದಾಂಡೆ ಶಹಾಬುದ್ದೀನ್ ಜಿಲ್ಲೆಗಳು ತಾಲಿಬಾನ್‌ನ ಭದ್ರಕೋಟೆಗಳೆಂದು ಪರಿಗಣಿಸಲ್ಪಟ್ಟಿವೆ. ಆಸುಪಾಸಿನ ಜಿಲ್ಲೆಗಳಾದ ಕುಂಡುಝ್ ಹಾಗೂ ಸಮಂಗಾನ್ ಪ್ರಾಂತ್ಯಗಳಲ್ಲೂ ಉಗ್ರರು, ಅಫ್ಘಾನ್ ಸೇನಾಪಡೆಗಳ ವಿರುದ್ಧ ಪದೇ ಪದೇ ದಾಳಿಗಳನ್ನು ನಡೆಸುತ್ತಿವೆ. ದಾಂಡೆಘೋರಿ ಹಾಗೂ ದಾಂಡೆ ಶಹಾಬುದ್ದೀನ್ ಜಿಲ್ಲೆಗಳಲ್ಲಿ ತನ್ನ ನಿಯಂತ್ರಣವನ್ನು ಮರುಸ್ಥಾಪಿಸಲು ಅಫ್ಘಾನ್ ಸರಕಾರವು ಕಳೆದ ಜನವರಿಯಲ್ಲಿ ಬೃಹತ್ ಸೇನಾ ಕಾರ್ಯಾಚರಣೆಯನ್ನು ನಡೆಸಿತ್ತು.





