ಸಂಸತ್ತನ್ನು ದಾರಿ ತಪ್ಪಿಸುತ್ತಿರುವ ಸರಕಾರ
ಕೇಂದ್ರ ಸರಕಾರ ಸಂಸತ್ತನ್ನು ಯಾವ ಸ್ಥಿತಿಗೆ ತಂದು ನಿಲ್ಲಿಸಿದೆ ಎಂಬುದಕ್ಕೆ ಕಳೆದ ವಾರ ನಡೆದ ಕಲಾಪಗಳೇ ಸಾಕ್ಷಿಯಾಗಿದೆ. ರೋಹಿತ್ ವೇಮುಲಾ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾನವ ಸಂಪನ್ಮೂಲ ಸಚಿವೆ ಸ್ಮತಿ ಇರಾನಿ ನೀಡಿದ ಹೇಳಿಕೆ ವಿವಾದಕ್ಕೆ ಗ್ರಾಸವಾಗಿದೆ. ಸಂಸತ್ತಿನ ಉಭಯ ಸದನಗಳಲ್ಲಿ ಅದರಲ್ಲೂ ವಿಶೇಷವಾಗಿ ರಾಜ್ಯಸಭೆಯಲ್ಲಿ ಅತ್ಯಂತ ಆಕ್ರಮಣಕಾರಿಯಾಗಿ ಮಾತನಾಡಿದ ಸ್ಮತಿ ಇರಾನಿ ಅವರು ರೋಹಿತ್ ಆತ್ಮಹತ್ಯೆ ಪ್ರಕರಣವನ್ನು ತಿರುಚುತ್ತಾ ಆತನ ಸಾವು ಸಂಭವಿಸಿದಾಗ ಮೃತ ದೇಹವನ್ನು ಆಸ್ಪತ್ರೆಗೆ ಒಯ್ಯಲು ಕೂಡಾ ಅಲ್ಲಿನ ದಲಿತ ವಿದ್ಯಾರ್ಥಿಗಳು ಬಿಡಲಿಲ್ಲ. ಆತನ ಶವವನ್ನು ಇಟ್ಟುಕೊಂಡು ಪ್ರತಿಪಕ್ಷಗಳು ಆಟವಾಡಿದವು ಎಂಬ ಹೇಳಿಕೆ ನೀಡಿದರು. ಹೇಳಿಕೆ ನೀಡಿದ್ದು ಮಾತ್ರವಲ್ಲ, ತಾನು ಹೇಳಿಕೆ ನೀಡಿದ್ದು ಸುಳ್ಳಾಗಿದ್ದರೆ ತನ್ನ ರುಂಡವನ್ನು ಕತ್ತರಿಸಿ ಇಡುವುದಾಗಿ ಬಿಎಸ್ಪಿ ನಾಯಕಿ ಮಾಯಾವತಿ ಅವರಿಗೆ ಸವಾಲು ಹಾಕಿದರು. ಆದರೆ, ಸ್ಮತಿ ಇರಾನಿ ನೀಡಿದ ಹೇಳಿಕೆ ಸತ್ಯಾಂಶದಿಂದ ಕೂಡಿಲ್ಲ ಎಂದು ರೋಹಿತ್ ಸಾವಿನ ಸುದ್ದಿ ತಿಳಿದ ತಕ್ಷಣ ಆ ಸ್ಥಳಕ್ಕೆ ಧಾವಿಸಿದ್ದಾಗಿ ಸರಕಾರಿ ವೈದ್ಯರು ಹೇಳಿಕೆ ನೀಡಿದ್ದಾರೆ. ಸಕಾಲದಲ್ಲಿ ದೇಹವನ್ನು ಸಾಗಿಸಿ ಮರಣೋತ್ತರ ಪರೀಕ್ಷೆ ನಡೆಸಿರುವುದನ್ನು ತೆಲಂಗಾಣ ಪೊಲೀಸರು ಧೃಢಪಡಿಸಿದ್ದಾರೆ. ಹಾಗಿದ್ದರೆ ಸ್ಮತಿ ಇರಾನಿ ಸುಳ್ಳು ಹೇಳಿಕೆಯನ್ನು ಏಕೆ ನೀಡಿದರು? ಸದನವನ್ನು ತಪ್ಪು ದಾರಿಗೆ ಎಳೆಯುವಂತಹ ಇಂತಹ ಹೇಳಿಕೆ ಅಪಚಾರವಾಗಿದೆ. ಇದಿಷ್ಟೇ ಅಲ್ಲದೆ, ಸ್ಮತಿ ಇರಾನಿ ಅವರು ಅನಗತ್ಯವಾಗಿ ದುರ್ಗಾಪೂಜೆಯ ಪ್ರಸ್ತಾಪವನ್ನೂ ಮಾಡಿದ್ದಾರೆ.
ಜವಾಹರಲಾಲ್ ನೆಹರೂ ವಿಶ್ವವಿದ್ಯಾನಿಲಯದ ದಲಿತ ವಿದ್ಯಾರ್ಥಿಗಳು ಮಹಿಷಾಸುರನನ್ನು ಆರಾಧಿಸುತ್ತಾರೆ ಎಂದು ಟೀಕಿಸುತ್ತಾರೆ. ಮಹಿಷಾಸುರನನ್ನು ಆರಾಧಿಸುವುದು ರಾಷ್ಟ್ರದ್ರೋಹ ಎಂದು ವ್ಯಾಖ್ಯಾನಿಸಿದ್ದಾರೆ. ಇದನ್ನು ಪ್ರತಿಪಕ್ಷ ಸದಸ್ಯರಾದ ಆನಂದ್ ಶರ್ಮಾ ಮತ್ತು ಸೀತಾರಾಮ್ ಯೆಚೂರಿ ಆಕ್ಷೇಪಿಸಿದ್ದಾರೆ. ದುರ್ಗೆ ಮೇಲ್ಜಾತಿಗಳಿಗೆ ಆರಾಧ್ಯದೈವವಾದರೆ ಮಹಿಷಾಸುರ ದಲಿತ, ಹಿಂದುಳಿದ ಮತ್ತು ಆದಿವಾಸಿ ಸಮುದಾಯಗಳಿಗೆ ಆರಾಧ್ಯ ದೈವವಾಗಿದ್ದಾರೆ. ಹೀಗೆ ವಿಭಿನ್ನ ಆಚರಣೆಗಳು ಈ ದೇಶದಲ್ಲಿವೆ. ದಲಿತ ಮತ್ತು ಆದಿವಾಸಿ ಸಮುದಾಯಗಳ ಆಚರಣೆಗಳ ಬಗ್ಗೆ ಹೀನಾಯವಾಗಿ ಮಾತನಾಡುವುದು ಪ್ರಜಾಪ್ರಭುತ್ವಕ್ಕೆ ಬಗೆದ ಅಪಚಾರವಾಗಿದೆ. ಹೈದರಾಬಾದ್ ವಿಶ್ವವಿದ್ಯಾನಿಲಯದಲ್ಲಿ ರೋಹಿತ್ ಆತ್ಮಹತ್ಯೆ ಪ್ರಕರಣ, ಜೆಎನ್‌ಯುನಲ್ಲಿ ಕನ್ಹಯ್ಯೆಕುಮಾರ್ ಬಂಧನ, ಹರ್ಯಾಣದಲ್ಲಿ ಮೀಸಲಾತಿಗಾಗಿ ಜಾಟ್ ಸಮುದಾಯದ ಹೋರಾಟ ಇಷ್ಟೆಲ್ಲ ನಡೆದಿರುವಾಗ ಪ್ರಧಾನಿ ನರೇಂದ್ರ ಮೋದಿ ಅವರು ಎಂದಿನಂತೆ ವೌನವಾಗಿದ್ದಾರೆ. ಶನಿವಾರ ಬೆಳಗಾವಿಗೆ ಬಂದಿದ್ದ ಅವರು ಅಲ್ಲಿ ಮಹಾದಾಯಿ ಯೋಜನೆಯ ಬಗ್ಗೆ ಉತ್ತರಕರ್ನಾಟಕದ ರೈತರು ಪ್ರತಿಭಟನೆ ನಡೆಸಿದಾಗಲೂ ಏನನ್ನೂ ಮಾತನಾಡಲಿಲ್ಲ. ಜನರು ವ್ಯಕ್ತಪಡಿಸಿದ ಆತಂಕಕ್ಕೆ ಯಾವ ಉತ್ತರವನ್ನೂ ನೀಡಲಿಲ್ಲ. ಅವರು ತಾವು ಮಾತನಾಡುವ ಬದಲಾಗಿ ಸ್ಮತಿ ಇರಾನಿ, ಸಾಕ್ಷಿ ಮಹಾರಾಜ್, ಗಿರಿರಾಜ್ ಸಿಂಗ್ ಅಂತಹವರನ್ನು ಮಾತನಾಡಲು ಬಿಟ್ಟಿದ್ದಾರೆ. ಹೀಗಾಗಿ ಸಂಸತ್ತಿನಲ್ಲಿ ಇಂತಹ ಅವಿವೇಕದ ಹೇಳಿಕೆಗಳನ್ನು ನೀಡಲಾಗುತ್ತಿದೆ.
ದೇಶದ ವಿದ್ಯಮಾನಗಳ ಬಗ್ಗೆ ಪ್ರಧಾನಿ ಸ್ಥಾನದಲ್ಲಿದ್ದವರು ಜವಾಬ್ದಾರಿಯಿಂದ ಮಾತನಾಡಬೇಕಾಗುತ್ತದೆ. ಸಂಸತ್ತಿನಲ್ಲಿ ಹೇಳಿಕೆ ನೀಡಬೇಕಾದ ಅವರು ಅದಕ್ಕೆ ಬದಲಾಗಿ ತಮಗೆ ತೋಚಿದ ವಿಷಯಗಳ ಬಗ್ಗೆ ಟ್ವೀಟ್ ಮಾಡುತ್ತಾರೆ. ಇಲ್ಲವೆ ಮನ್‌ಕೀ ಬಾತ್‌ನಲ್ಲಿ ಮನಬಂದಂತೆ ಮಾತನಾಡುತ್ತಾರೆ. ಇದು ನಿಜಕ್ಕೂ ಅವರಿಗೆ ಶೋಭೆ ತರುವುದಿಲ್ಲ. ಹರ್ಯಾಣದಲ್ಲಿ ಮೀಸಲಾತಿಗಾಗಿ ಜಾಟ್ ಸಮುದಾಯ ನಡೆಸಿದ ಹೋರಾಟ ಎಷ್ಟು ತೀವ್ರವಾಗಿತ್ತೆಂದರೆ ಹತ್ತು ಜಿಲ್ಲೆಗಳಲ್ಲಿ ಕರ್ಫ್ಯೂ ವಿಧಿಸಲಾಗಿತ್ತು. ಕೊನೆಗೆ ಜನಾಕ್ರೋಶಕ್ಕೆ ಹೆದರಿ ಜಾಟರಿಗೆ ಮೀಸಲಾತಿ ನೀಡುವ ಬಗ್ಗೆ ಪರಿಶೀಲಿಸುವುದಾಗಿ ಸರಕಾರ ಹೇಳಿದ್ದು, ಸದ್ಯಕ್ಕೆ ಆ ಚಳವಳಿ ತಣ್ಣಗಾಗಿದ್ದರೂ ರಾಜಸ್ಥಾನದಲ್ಲಿ ರಜಪೂತರು, ಮಹಾರಾಷ್ಟ್ರದಲ್ಲಿ ಮರಾಠರು ಹಾಗೂ ಗುಜರಾತ್‌ನಲ್ಲಿ ಪಟೇಲರು ಮೀಸಲಾತಿಗಾಗಿ ಬೀದಿಗಿಳಿದರೆ ಈ ಸರಕಾರ ಏನು ಮಾಡುತ್ತದೆ. ದೇಶವನ್ನು ಬಾಧಿಸುತ್ತಿರುವ ಇಂತಹ ಜ್ವಲಂತ ಪ್ರಶ್ನೆಗಳನ್ನು ಕಡೆಗಣಿಸಿ ಗೋಹತ್ಯೆ ನಿಷೇಧ, ಮತಾಂತರಗಳಂತಹ ವಿಷಯಗಳನ್ನು ತಮ್ಮ ಸಂಘಟನೆಗಳ ಮೂಲಕ ಅಧಿಕಾರದಲ್ಲಿರುವ ಸರಕಾರ ಚರ್ಚೆಗೆ ಬಿಡುತ್ತಿದೆ. ಈಗ ಭಿನ್ನಮತವನ್ನು ಹತ್ತಿಕ್ಕಲು ಸರಕಾರ ಹೊಸದೊಂದು ವಿವಾದವನ್ನು ಸೃಷ್ಟಿಸಿದೆ. ಸಂಘಪರಿವಾರವನ್ನು ವಿರೋಧಿಸುವವರೆಲ್ಲ ರಾಷ್ಟ್ರವಿರೋಧಿಗಳು ಎಂಬ ಅಪಖ್ಯಾತಿಗೆ ಗುರಿಪಡಿಸುತ್ತಿದೆ. ಹೀಗಾಗಿ ಪ್ರತಿಪಕ್ಷಗಳನ್ನು ಮತ್ತು ಸ್ವಯಂ ಸೇವಾ ಸಂಸ್ಥೆಗಳನ್ನು, ಜನಪರ ಸಂಘಟನೆಗಳನ್ನು ರಾಷ್ಟ್ರದ್ರೋಹಿಗಳ ಸಾಲಿನಲ್ಲಿ ತಂದು ನಿಲ್ಲಿಸಿದೆ. ಇದೇ ತಂತ್ರವನ್ನು ಜರ್ಮನಿಯಲ್ಲಿ ಹಿಟ್ಲರ್ ಅನುಸರಿಸಿದ್ದ. ಇದು ನಿಜಕ್ಕೂ ಸರ್ವಾಧಿಕಾರಿ ಮನೋಭಾವವಲ್ಲದೆ ಬೇರೇನೂ ಅಲ್ಲ. ಸ್ಮತಿ ಇರಾನಿ ಅವರು ಸಂಸತ್ತಿನಲ್ಲಿ ನೀಡಿದ ಹೇಳಿಕೆ ವೈಯಕ್ತಿಕ ಹೇಳಿಕೆ ಅಲ್ಲ. ಅದು ಸರಕಾರದ ಪರವಾಗಿ ಅವರು ನೀಡಿದ ಹೇಳಿಕೆ. ಆದ್ದರಿಂದಲೇ ಸಂಸತನ್ನು ಈ ಸರಕಾರ ದಾರಿ ತಪ್ಪಿಸುತ್ತಿರುವುದು ಸ್ಪಷ್ಟವಾಗಿದೆ. ಇದರ ವಿರುದ್ಧ ಪ್ರಜಾಪ್ರಭುತ್ವವಾದಿಗಳು ದನಿ ಎತ್ತಬೇಕಾಗಿದೆ.







