ಸ್ವಿಸ್ ತೀರ ತಲುಪುವ ಅನಧಿಕೃತ ಔಷಧಗಳ ಪಾಲಿನಲ್ಲಿ ಭಾರತಕ್ಕೆ ಅಗ್ರಸ್ಥಾನ
ಜಿನಿವಾ, ಫೆ.28: ಕಳೆದ 2015ರಲ್ಲಿ ವಶಪಡಿಸಿಕೊಳ್ಳಲಾಗಿರುವ ವೈದ್ಯಕೀಯ ಉತ್ಪನ್ನಗಳಲ್ಲಿ ಭಾರತದ ಪಾಲು ಶೇ.49 ಆಗಿರುತ್ತದೆ. ವಶಪಡಿಸಿಕೊಳ್ಳಲಾದ ಎಲ್ಲ ದಾಗೀನುಗಳ ಮೂರನೆ ಎರಡರಷ್ಟು ಭಾರತ ಸಹಿತ ಏಷ್ಯನ್ ರಾಷ್ಟ್ರಗಳಲ್ಲಿ ತಯಾರಾದವುಗಳೆಂದು ಸ್ವಿಸ್ ಸರಕಾರ ಬಿಡುಗಡೆಗೊಳಿಸಿರುವ ಮಾಹಿತಿಯೊಂದು ತಿಳಿಸಿದೆ.
ಭಾರತೀಯರು ಸ್ವಿಸ್ ಬ್ಯಾಂಕ್‌ಗಳಲ್ಲಿ ಶೇಖರಿಸಿಟ್ಟಿರುವ ಕಪ್ಪು ಹಣದ ಕುರಿತಾಗಿ ಭಾರೀ ಬೊಬ್ಬೆಯ ನಡುವೆಯೇ, ತನ್ನ ಕಸ್ಟಂಸ್ ಇಲಾಖೆ ವಶಪಡಿಸಿಕೊಂಡಿರುವ ಕಾನೂನುಬಾಹಿರ ಆಮದಿತ ಔಷಧಗಳ ಮೂಲಗಳಲ್ಲಿ ಭಾರತ ಅಗ್ರಸ್ಥಾನದಲ್ಲಿಯೆಂದು ಸ್ವಿಝರ್ಲೆಂಡ್ ಬಹಿರಂಗಪಡಿಸಿದೆ.
ಮುಟ್ಟುಗೋಲು ಹಾಕಲಾಗಿರುವ ವೈದ್ಯಕೀಯ ಉತ್ಪನ್ನಗಳಲ್ಲಿ ಜನನಾಂಗ ಉದ್ದೀಪನ ಔಷಧಗಳ ಪಾಲು ಶೇ.51ರಷ್ಟಿದೆಯೆಂದು ಭಾರತ ಮೂಲದ ಉತ್ಪನ್ನಗಳನ್ನು ಗುರುತಿಸದೆಯೇ ಸ್ವಿಸ್ ಸರಕಾರದ ವೈದ್ಯಕೀಯ ಉತ್ಪನ್ನಗಳ ಸಂಸ್ಥೆ ‘ಸ್ವಿಸ್ ಮೆಡಿಕ್’ ಹೇಳಿದೆ.
ವಶಪಡಿಸಿಕೊಳ್ಳಲಾದ ಮಹತ್ವದ ಉತ್ಪನ್ನ ವರ್ಗಗಳಲ್ಲಿ, ನಿದ್ರಾಕಾರಕ ಮಾತ್ರೆಗಳು ಮತ್ತು ನೋವು ನಿವಾರಕಗಳು (ಶೇ.15), ಸಪೂರವಾಗುವ ಔಷಧಗಳು (ಶೇ.13), ವೈದ್ಯಕೀಯ ಮಹತ್ವದ ಕೇವಲ ಔಷಧಗಳು (ಶೇ.9) ಹಾಗೂ ಇತರ ಶೇ.12ರಷ್ಟು ಸೇರಿವೆ.
ಅನಧಿಕೃತ ಔಷಧ ವ್ಯಾಪಾರದ ಇತ್ತೀಚಿನ ಅಂಕಿ-ಅಂಶಗಳನ್ನು ಬಿಡುಗಡೆಗೊಳಿಸಿರುವ ಸ್ವಿಸ್ ಮೆಡಿಕ್ಸ್, ಸ್ವಿಸ್ ಕಸ್ಟಂಸ್ ಅಧಿಕಾರಿಗಳು 2015ರಲ್ಲಿ ಕಾನೂನುಬಾಹಿರ ಔಷಧ ಆಮದಿನ 1,134 ಪ್ರಕರಣಗಳನ್ನು ವರದಿ ಮಾಡಿದ್ದಾರೆಂದು ತಿಳಿಸಿದೆ.
ಮುಟ್ಟುಗೋಲು ಹಾಕಲಾದ ಔಷಧಗಳು ಸುಮಾರು 62 ದೇಶಗಳಿಂದ ಬಂದಿವೆ. ಅವುಗಳಲ್ಲಿ ಭಾರತದ ಪಾಲು ಶೇ.42 ಇದ್ದರೆ, ಉಳಿದ ಏಷ್ಯನ್ ದೇಶಗಳ(ಮುಖ್ಯವಾಗಿ ಥಾಯ್ಲೆಂಡ್, ಚೀನ, ಸಿಂಗಾಪುರ, ಕಾಂಬೋಡಿಯ) ಪಾಲು ಸುಮಾರು ಶೇ. 24ರಷ್ಟಿದೆ.
ಇಂಗ್ಲೆಂಡ್, ಜರ್ಮನಿ, ಪೋರ್ಚುಗಲ್‌ಗಳಂತಹ ಪಶ್ಚಿಮ ಯೂರೋಪ್ ದೇಶಗಳ ಪಾಲು ಶೇ.18 ಇದ್ದರೆ, ಪಶ್ಚಿಮ ಯೂರೋಪ್ ಶೇ.8, ಮಧ್ಯ ಹಾಗೂ ದಕ್ಷಿಣ ಆಮೆರಿಕ ಶೇ.4 ಹಾಗೂ ಇತರ ಪ್ರದೇಶಗಳು ಶೇ.4ರಷ್ಟು ಅನಧಿಕೃತ ಔಷಧ ಆಮದಿನ ಪಾಲು ಪಡೆದಿವೆ.





