ಅಮೆರಿಕ ಅಧ್ಯಕ್ಷೀಯ ಅಭ್ಯರ್ಥಿ ಆಯ್ಕೆ ಚುನಾವಣೆ: ಕರೋಲಿನಾದಲ್ಲಿ ಹಿಲರಿ ಗೆಲುವಿನ ನಗೆ
ಕೊಲಂಬಿಯಾ, ಫೆ.28: ಅಮೆರಿಕದ ಅಧ್ಯಕ್ಷೀಯ ಚುನಾವಣೆಗೆ ಡೆಮಾಕ್ರಾಟಿಕ್ ಪಕ್ಷದ ಅಭ್ಯರ್ಥಿಯ ಆಯ್ಕೆಗಾಗಿ ಶನಿವಾರ ದಕ್ಷಿಣ ಕರೊಲಿನಾ ರಾಜ್ಯದಲ್ಲಿ ನಡೆದ ಚುನಾವಣೆಯಲ್ಲಿ ಹಿಲರಿ ಕ್ಲಿಂಟನ್ ಅವರು ತನ್ನ ಎದುರಾಳಿ ಅಭ್ಯರ್ಥಿ ಬರ್ನಿ ಸ್ಯಾಂಡರ್ಸ್ ವಿರುದ್ಧ ಭಾರೀ ಮತಗಳ ಅಂತರದಿಂದ ಜಯಗಳಿಸಿದ್ದಾರೆ. ಇದರೊಂದಿಗೆ, ಹಿಲರಿ ಕ್ಲಿಂಟನ್ ಮಂಗಳವಾರ 11 ರಾಜ್ಯಗಳಲ್ಲಿ ನಡೆಯುವ ಚುನಾವಣೆಗಳಲ್ಲೂ ಮೇಲುಗೈ ಸಾಧಿಸುವ ಸಾಧ್ಯತೆಗಳು ದಟ್ಟವಾಗಿವೆ.
ದಕ್ಷಿಣ ಕರೊಲಿನಾ ಚುನಾವಣೆಯಲ್ಲಿ ಹಿಲರಿಗೆ 73.5 ಶೇ. ಮತಗಳು ದೊರೆತಿದ್ದರೆ, ಸ್ಯಾಂಡರ್ಸ್‌ಗೆ ಕೇವಲ 23 ಶೇ. ಮತಗಳು ದೊರೆತಿವೆ. ಈ ಮೊದಲು ಹಿಲರಿ ಇವೊವಾ ಚುನಾವಣೆಯಲ್ಲಿ ಕೂದಲೆಳೆಯ ಅಂತರದಿಂದ ಗೆಲುವು ಕಂಡಿದ್ದರೆ, ನ್ಯೂಹ್ಯಾಂಪ್‌ಶೈರ್ ಚುನಾವಣೆಯಲ್ಲಿ ಬರ್ನಿಸ್ಯಾಂಡರ್ಸ್ ಎದುರು ಸೋಲುಂಡಿದ್ದರು.
ಈ ವಾರದ ಆರಂಭದಲ್ಲಿ ಹಿಲರಿ, ನೆವಾಡ ಚುನಾವಣೆಯಲ್ಲಿ ಶೇ.5ರಷ್ಟು ಅಧಿಕ ಮತಗಳೊಂದಿಗೆ ಗೆಲುವು ಕಂಡಿದ್ದರು. ದಕ್ಷಿಣ ಕರೊಲಿನಾದಲ್ಲಿ ಕರಿಯ ಜನಾಂಗದ ಮತದಾರರು ಹಿಲರಿಗೆ ಅಭೂತಪೂರ್ವ ಬೆಂಬಲ ವ್ಯಕ್ತಪಡಿಸಿದ್ದಾರೆ. ಕರಿಯ ಜನಾಂಗೀಯರ ಬಾಹುಳ್ಯವಿರುವ ಅಲಬಾಮ, ಟೆಕ್ಸಾಸ್ ಹಾಗೂ ಜಾರ್ಜಿಯಾ ಸೇರಿದಂತೆ ಇತರ ರಾಜ್ಯಗಳಲ್ಲಿ ಕರಿಯ ಜನಾಂಗೀಯರು ಹಿಲರಿ ಪರ ಮತ ಚಲಾಯಿಸುವ ಸಾಧ್ಯತೆಗಳು ದಟ್ಟವಾಗಿವೆಯೆಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಿಸಿದ್ದಾರೆ. ಎಂಎಸ್‌ಎನ್‌ಬಿಸಿ ಚುನಾವಣೋತ್ತರ ಸಮೀಕ್ಷೆಯ ಪ್ರಕಾರ ಕ್ಲಿಂಟನ್‌ಗೆ ಶೇ.87ರಷ್ಟು ಕರಿಯ ಜನಾಂಗೀಯರ ಮತಗಳು ಲಭ್ಯವಾಗಿವೆ.
ದಕ್ಷಿಣ ಕರೊಲಿನಾದಲ್ಲಿ ಜಯಗಳಿಸಿದ ಬಳಿಕ ಹಿಲರಿ ಕ್ಲಿಂಟನ್ ಬೆಂಬಲಿಗರನ್ನುದ್ದೇಶಿಸಿ ಮಾಡಿದ ಭಾಷಣದಲ್ಲಿ, ರಿಪಬ್ಲಿಕನ್ ಪಕ್ಷದ ಆಕಾಂಕ್ಷಿ ಅಭ್ಯರ್ಥಿ ಡೊನಾಲ್ಡ್ ಟ್ರಂಪ್‌ರನ್ನು ಪರೋಕ್ಷವಾಗಿ ಟೀಕಿಸಿದರು. ‘‘ನೀವು ಕೇಳುತ್ತಿರುವಂತೆ ನಾವು ಅಮೆರಿಕವನ್ನು ಮತ್ತೊಮ್ಮೆ ಮಹಾನ್ ರಾಷ್ಟ್ರವಾಗಿ ಮಾಡಬೇಕಾಗಿಲ್ಲ. ಅದು ಯಾವತ್ತೊ ಮಹಾನ್ ರಾಷ್ಟ್ರವಾಗಿ ಬಿಟ್ಟಿದೆ. ಆದರೆ ಸಮಗ್ರ ಅಮೆರಿಕವನ್ನು ಒಂದುಗೂಡಿಸುವುದೇ ನಾವೀಗ ಮಾಡಬೇಕಾಗಿರುವ ಕೆಲಸವಾಗಿದೆ’’ ಎಂದು ಹಿಲರಿ ಬೆಂಬಲಿಗರ ಕರತಾಡನದ ಮಧ್ಯೆ ಹೇಳಿದರು.







